ಇಂದಿರಾ ಕ್ಯಾಂಟೀನ್‌ ಮುಚ್ಚಿ ಅಟಲ್ ಆಹಾರ ಕೇಂದ್ರ ತೆರೆಯುವುದು ಹಾಸ್ಯಾಸ್ಪದ : ಸಿದ್ದರಾಮಯ್ಯ

ಬೆಂಗಳೂರು: 

      ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯಲ್ಲಿ  ರಾಜ್ಯದಾದ್ಯಂತ ಪ್ರಾರಂಭಿಸಿದ್ದ 600 ಇಂದಿರಾ ಕ್ಯಾಂಟೀನ್ ಗಳನ್ನು ರಾಜಕೀಯ ದ್ವೇಷಾಸೂಯೆಯಿಂದ ಮುಚ್ಚಿರುವ ಬಿಜೆಪಿ, ಈಗ ಅಟಲ್ ಆಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿರುವುದೇ  ಹಾಸ್ಯಾಸ್ಪದ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

    ಬಿಜೆಪಿ ಪ್ರಣಾಳಿಕೆ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪಡಿತರ ಚೀಟಿಗಳ ಮೂಲಕ ನೀಡಲಾಗುತ್ತಿದ್ದ ಏಳು ಕಿಲೋ ಉಚಿತ ಅಕ್ಕಿಯನ್ನು ಐದು ಕಿಲೋಗಳಿಗೆ ಇಳಿಸಿದ್ದ ಬಿಜೆಪಿ ಐದು ಕಿಲೋ ಸಿರಿಧಾನ್ಯ ಕೊಡುತ್ತೇವೆ ಎಂದು ಹೇಳಿರುವುದು ಇನ್ನೊಂದು ವಿಪರ್ಯಾಸ. ರಾಜ್ಯದಲ್ಲಿ 10.12 ಲಕ್ಷ ಮಕ್ಕಳು ಶಾಲೆಯನ್ನು ತೊರೆಯುವಂತೆ ಮಾಡುವ ಮೂಲಕ ಅಕ್ಷರವನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ. 

     ಹತ್ತು ಲಕ್ಷ ನಿವೇಶನ ವಿತರಿಸುವ ಭರವಸೆ ನೀಡಿರುವ ಬಿಜೆಪಿ, ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ಒಂದೇ ಒಂದು ಹೊಸಮನೆಯನ್ನು ನಿರ್ಮಾಣ ಮಾಡಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯ ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು. ಬಿಜೆಪಿ ಸರ್ಕಾರ ನಿರ್ಮಾಣ ಹಂತದಲ್ಲಿದ್ದ ನಮ್ಮ ಕಾಲದ ಮನೆಗಳನ್ನು ಪೂರ್ಣಗೊಳಿಸಿ ಅದನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು  ರೂ.410 ರಿಂದ ರೂ.1105ಕ್ಕೆ ಏರಿಸಿರುವ ಮತ್ತು ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸಿ,   ಈಗ ಅಡುಗೆ ಅನಿಲದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡುವ ಮೂಲಕ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. 

      ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅನ್ನ, ಅಭಯ, ಅಕ್ಷರ, ಅಭಿವೃದ್ದಿ ಮತ್ತು ಆದಾಯಗಳ ಭರವಸೆಗಳನ್ನು ನೀಡಿದೆ. ಕಳೆದ ಮೂರುವರೆ ವರ್ಷಗಳ ಅವಧಿಯ ರಾಜ್ಯದ ಬಿಜೆಪಿ ಸರ್ಕಾರ ಈ ಐದು ಭರವಸೆಗಳನ್ನು ಜನರಿಂದ ಕಸಿದುಕೊಂಡಿದೆ. ಈ ಪ್ರಣಾಳಿಕೆಗೆ  “ಜನತಾ ಪ್ರಣಾಳಿಕೆ’’ ಎಂದು ಕರೆದಿರುವುದು  ಅರ್ಥಪೂರ್ಣವಾಗಿದೆ. ಈ ಪ್ರಣಾಳಿಕೆಯನ್ನು ಜನತೆಯೇ ಅನುಷ್ಠಾನಕ್ಕೆ ತರಬೇಕೇ ಹೊರತು ಬಿಜೆಪಿ ಅಲ್ಲ ಎನ್ನುವುದೇ ಇದರ ಅರ್ಥವಾಗಿದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link