ದೆಹಲಿ :
‘ದೇಸಿ ಬೊಫೋರ್ಸ್’ ಎಂದೇ ಹೆಸರಾಗಿರುವ ದೂರಗಾಮಿ ಫಿರಂಗಿ ‘ಧನುಷ್’ ಇಂದು (ಸೋಮವಾರ) ಅಧಿಕೃತವಾಗಿ ಭಾರತೀಯ ಸೇನೆ ಸೇರ್ಪಡೆಗೊಂಡಿದೆ.
ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಸ್ವದೇಶಿ ನಿರ್ಮಿತ ಧನುಶ್ ಫಿರಂಗಿ ತೋಪುಗಳನ್ನು ಸೋಮವಾರದಂದು ಜಬಲ್ಪುರದಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು.
ಗರಿಷ್ಠ 38 ಕಿ.ಮೀ. ಗುರಿಯನ್ನು ನಿಖರವಾಗಿ ಕ್ರಮಿಸಲ್ಲ ಸಾಮರ್ಥ್ಯವಿರುವ ‘ಧನುಷ್’, ವಿದೇಶಿ ಬೋಪೋರ್ಸ್ ಫಿರಂಗಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ನ್ಯಾವಿಗೇಶನ್ ಆಧಾರಿತ ದೃಶ್ಯೀಕರಣ ವ್ಯವಸ್ಥೆ, ಆಟೋ-ಲೇಯಿಂಗ್ ಸಿಸ್ಟಮ್, ಆನ್‌ಬೋರ್ಡ್ ಬ್ಯಾಲಿಸ್ಟಿಕ್ ಕಂಪ್ಯೂಟೇಶನ್ ವ್ಯವಸ್ಥೆಯನ್ನು ‘ಧನುಷ್’ ಹೊಂದಿದೆ. ಪರ್ವತ, ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಸುಲಭವಾಗಿ ಬಳಸಬಹುದಾಗಿದೆ.
‘ಧನುಷ್’ ಫಿರಂಗಿಗಳನ್ನು ಎಲ್ಲಾ ಪ್ರದೇಶಗಳಲ್ಲೂ ಬಳಸಬಹುದಾಗಿದ್ದು ಮತ್ತು ಸ್ವದೇಶಿ ನಿರ್ಮಿತ ಫಿರಂಗಿಗಳಲ್ಲಿ ದೂರಗಾಮಿ ಸಾಮರ್ಥ್ಯವಿರುವ ಫಿರಂಗಿ ಇದಾಗಿದೆ. ತನ್ನ ಈ ವಿಶೇಷ ಸಾಮರ್ಥ್ಯಕ್ಕಾಗಿ ಇದನ್ನು ‘ದೇಶೀ ಬೋಫೋರ್ಸ್’ ಎಂದೇ ಕರೆಯಲಾಗುತ್ತದೆ.
ಡಿಆರ್‌ಡಿಒ, ಡಿಜಿಕ್ಯೂಎ, ಬಿಇಎಲ್, ಎಸ್‌ಎಐಎಲ್ ಹಾಗೂ ಖಾಸಗಿ ಸಂಸ್ಥೆಗಳ ತಜ್ಞರ ತಂಡ ‘ಧನುಷ್’ ನಿರ್ಮಾಣಕ್ಕೆ ಸಹಕರಿಸಿದ್ದು, ನಿಖರವಾಗಿ ಗುರಿ ತಲುಪುವ ನಿಟ್ಟಿನಲ್ಲಿ ಇದನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆಗೇರಿಸಲಾಗಿದೆ.
ಇದರ ಗುರಿ ಸಾಮರ್ಥ್ಯ ವಿದೇಶಿ ಬೋಫೋರ್ಸ್ ಫಿರಂಗಿಗಿಂತ 11 ಕಿಲೋ ಮೀಟರ್ ಗಳಷ್ಟು ಹೆಚ್ಚಾಗಿದೆ. ಒಂದು ‘ಧನುಷ್’ ಫಿರಂಗಿಯ ವೆಚ್ಚ 14.50 ಕೋಟಿ ರೂ. ಆಗಿದ್ದು, ಈ ರೀತಿಯ 114 ‘ಧನುಷ್’ಗಳ ತಯಾರಿಕೆಗೆ ರಕ್ಷಣಾ ಸಚಿವಾಲಯ ಹಸಿರು ನಿಶಾನೆ ತೋರಿದೆ.
ಇದರ ಶೇ.81ರಷ್ಟು ಭಾಗಗಳನ್ನು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ದೇಶೀಯವಾಗಿಯೇ ಉತ್ಪಾದಿಸಲಾಗಿದ್ದು, ಭಾರತೀಯ ಸೇನೆಯ ಬತ್ತಳಿಕೆಗೆ ಹೆಚ್ಚಿನ ಬಲ ತುಂಬಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ