ಮಹಾರಾಷ್ಟ್ರ :
ಕಳೆದ ಎರಡು ವರ್ಷಗಳಲ್ಲಿ 13 ಮಂದಿಯ ಸಾವಿಗೆ ಕಾರಣವಾಗಿದ್ದ ಹೆಣ್ಣು ಹುಲಿ ಅವನಿಯನ್ನು ಕೊನೆಗೂ ಗುಂಡಿಕ್ಕಿ ಹತ್ಯೆಗೈಯಲಾಗಿದೆ.
6 ವರ್ಷ ವಯಸ್ಸಿನ ‘ಅವನಿ’ ಕಳೆದ ಎರಡು ವರ್ಷಗಳಿಂದ ನರಭಕ್ಷಕ ಹುಲಿಯಾಗಿ ಪರಿವರ್ತನೆಯಾಗಿತ್ತು. ಅವನಿಯ ಉಪಟಳ ತಡೆಯಲಾರದೆ ಹಲವರು ಆನ್ ಲೈನ್ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 4 ರಂದು ಈ ಹುಲಿಯನ್ನು ‘ಕಂಡಲ್ಲಿ ಗುಂಡಿಕ್ಕುವ ಆದೇಶ’ವನ್ನು ನೀಡಿತ್ತು.
ಅವನಿ ಸುಮಾರು 150 ಸಿಬ್ಬಂದಿ, ಆನೆಗಳು, ಹುಲಿ ಹಿಡಿಯುವ ಪರಿಣಿತರು, ಶೂಟರ್ ಗಳಿಗೆ ಮೂರು ತಿಂಗಳಿನಿಂದ ಚಳ್ಳೆಹಣ್ಣು ತಿನ್ನಿಸಿತ್ತು. ಅವನಿಯನ್ನು ಜೀವಂತವಾಗಿ ಹಿಡಿಯುವ ಎಲ್ಲಾ ಪ್ರಯತ್ನವೂ ವಿಫಲವಾಗಿದ್ದವು. 2012 ರಲ್ಲಿ ಯವಾತ್ಮಾಲ್ ಕಾಡಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ‘ಅವನಿ’ಗೆ ಕಳೆದ ಎರಡು ವರ್ಷಗಳಿಂದ ಮನುಷ್ಯರ ಮಾಂಸದ ರುಚಿ ಹತ್ತಿತ್ತು. ಇದರಿಂದಾಗಿ ಸುತ್ತಮುತ್ತಲ ಗ್ರಾಮದ ಜನರು ನಿದ್ದೆಗೆಡಬೇಕಾಯಿತು.
ಹತ್ಯೆಗೈಯ್ಯಲು ಬಳಸಿದ ಉಪಾಯಗಳು:
ಅವನಿಯ ಜಾಡು ಹಿಡಿಯಲು ಟ್ರ್ಯಾಪ್ ಕ್ಯಾಮೆರಾ, ಡ್ರೋನ್ ಬಳಕೆ ಮಾಡಲಾಗಿತ್ತು. ಜತೆಗೆ ತರಬೇತಿ ಪಡೆದ ಬೇಟೆ ನಾಯಿ ಮತ್ತು ಹ್ಯಾಂಗ್ ಗ್ಲೈಡರ್‌ಗಳನ್ನು ಅರಣ್ಯ ಇಲಾಖೆ ತಿಪ್ಪೇಶ್ವರ ಹುಲಿಧಾಮದ ಬಳಿ ನಿಯೋಜಿಸಿತ್ತು. ಖಾಸಗಿ ಮಾರ್ಕ್ಸ್‌ಮನ್ ಶಫತ್ ಅಲಿ ಖಾನ್ ಅವರ ಸೇವೆಯನ್ನೂ ಇಲಾಖೆ ಪಡೆದಿತ್ತು.
ಸಾಲು ಸಾಲು ಸಾವಿಗೆ ಕಾರಣವಾಗಿದ್ದ 5 ವರ್ಷ ಪ್ರಾಯದ ಅವನಿಯ ಹತ್ಯೆಯ ಬಳಿಕ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು ಕಳೇಬರವನ್ನು ಕಂಡು ಸಂಭ್ರಮ ಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ