ಲಂಡನ್:
ಭಾರತದ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದ ಮದ್ಯದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.
ಯಾವ ಕ್ಷಣದಲ್ಲಿ ಬೇಕಾದರೂ ಮಲ್ಯ ಮುಂಬೈಗೆ ಆಗಮಿಸುವ ಸಾಧ್ಯತೆ ಇದೆ. ಮುಂಬೈನಲ್ಲಿ ಮಲ್ಯ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಉದ್ಯಮಿಯನ್ನು ಮುಂಬೈಗೆ ಕರೆದುಕೊಂಡು ಬರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಭಾರತದಿಂದ ಪರಾರಿಯಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದ ವಿಜಯ್ ಮಲ್ಯ ಜೊತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬರಲಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಮಲ್ಯ ಆರೋಗ್ಯ ಪರಿಶೀಲನೆಗೆ ವೈದ್ಯಕೀಯ ತಂಡವನ್ನು ಕೂಡ ಸಿದ್ಧವಾಗಿ ಇಡಲಾಗಿದೆ.
ವಿಜಯ ಮಲ್ಯ ಇಂದು ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿದರೆ, ಅವರನ್ನು ಕೆಲಕಾಲ ನಗರದ ಸಿಬಿಐ ಕಚೇರಿಯಲ್ಲಿ ಇರಿಸಿ ನಂತರ ಅವರನ್ನು ಸಿಬಿಐ ಅಧಿಕಾರಿಗಳು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಅಥವಾ ನಾಳೆ ಮುಂಜಾನೆ ಆಗಮಿಸಿದರೆ, ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ರಿಟನ್ ಸುಪ್ರೀಂ ಕೋರ್ಟ್ ನಲ್ಲಿ ಮಲ್ಯ ವಿರುದ್ಧವಾಗಿ ತೀರ್ಪು ಬಂದಿದ್ದು, ಮೇ 14 ರಂದು ಸುಪ್ರೀಂಕೋರ್ಟ್ ಮಲ್ಯ ಮೇಲ್ಮನವಿಯನ್ನು ತಳ್ಳಿ ಹಾಕಿತ್ತು. ಇದಾದ 28 ದಿನಗಳೊಳಗೆ ಗಡೀಪಾರು ಪ್ರಕ್ರಿಯೆ ಮಾಡಬೇಕಾಗುತ್ತದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಭಾರತಕ್ಕೆ ಗಡೀಪಾರಾಗಬಹುದು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ