ಕೊರಟಗೆರೆ : ಧರ್ಮಸಾಗರ ಕೆರೆಯಲ್ಲಿ ಮಳೆಗಾಗಿ ಹೋಮ..!

ಕೊರಟಗೆರೆ :

      ಬರಗಾಲದ ಛಾಯೆಯಿಂದ ಕಳೆದ 20 ವರ್ಷಗಳಿಂದ ನಲುಗಿರುವ ರೈತರು, ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿ ಬತ್ತುತ್ತಿರುವ ಸಂಕಷ್ಟ ಕಾಲದಲ್ಲಿ ವರುಣ ಹೋಮದ ಮೂಲಕ ರೈತರು ಮಳೆಗೆ ಮೊರೆ ಹೋಗಿರುವ ಘಟನೆ ಕೊರಟಗೆರೆ ತಾಲ್ಲೂಕಿನಲ್ಲಿ ಜರುಗಿದೆ.

     ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಚಿಕ್ಕವಳ್ಳಿ ಧರ್ಮಸಾಗರ ಕೆರೆಯಲ್ಲಿ ಸುತ್ತಲಿನ ಹತ್ತೂರಿನ ಜನ ಸೇರಿ ಮಳೆಗಾಗಿ, ಗಣಪತಿ ಹೋಮ, ಗಂಗಾ ಪೂಜೆ, ಗ್ರಾಮ ದೇವರುಗಳ ಪೂಜೆ ಸೇರಿದಂತೆ ಮಳೆಯ ಕೃಪೆಗಾಗಿ ವರುಣ ಹೋಮವನ್ನು ಆಯೋಜಿಸಿ ಮಳೆರಾಯನಿಗೆ ಮೊರೆ ಹೋದರು.

      ಕೊರಟಗೆರೆ ತಾಲ್ಲೂಕಿನ ಪ್ರಮುಖ ರೈತರ ಜೀವನಾಡಿ ಕೆರೆಗಳಲ್ಲಿ ಅತಿಮುಖ್ಯವಾದ ಚಿಕ್ಕವಳ್ಳಿ ಧರ್ಮಸಾಗರ ಕೆರೆ, ಕಳೆದ 20 ವರ್ಷಗಳಿಂದ ನೀರಿಲ್ಲದೆ ಬತ್ತಿಹೋಗಿದೆ. ಈ ಭಾಗದ ಸಾವಿರಾರು ರೈತರಿಗೆ ಬೇಸಾಯಕ್ಕೆ ಆಶ್ರಯವಾಗಿದ್ದ ಧರ್ಮಸಾಗರ ಕೆರೆ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದು, ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಸಂಕಷ್ಟದಲ್ಲಿರುವ ಸಾವಿರಾರು ರೈತರು ಕೆರೆಗಳ ಭರ್ತಿಗಾಗಿ ವರುಣ ಹೋಮದ ಮೂಲಕ ಮಳೆಗೆ ಮೊರೆ ಹೋಗಿದ್ದಾರೆ.

      ಕೊರಟಗೆರೆ ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿಗೆ ಯಾವುದೇ ಯೋಜನೆಗಳಿಲ್ಲ. ಭದ್ರಾ ಮೇಲ್ದಂಡೆ, ಹೇಮಾವತಿ, ಎತ್ತಿನಹೊಳೆಗಳಂತಹ ಯಾವುದೇ ಯೋಜನೆಗಳು ಇನ್ನೂ ಅನುಷ್ಠಾನವಾಗಿಲ್ಲ. ಕೆರೆಗಳಿಗೂ ನೀರು ಹರಿಯದ ಕಾರಣ ಕಳೆದ 20 ವರ್ಷಗಳಿಂದ ಮಳೆಯಿಲ್ಲದೆ ಸತತ ಬರಗಾಲಕ್ಕೆ ತುತ್ತಾಗಿರುವ ಕೊರಟಗೆರೆ ತಾಲ್ಲೂಕು ರೈತಾಪಿ ಜನ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಸಾವಿರಾರು ಎಕರೆ ಅಡಕೆ ತೋಟಗಳನ್ನು ಕಳೆದುಕೊಂಡಿದ್ದಾರೆ. ನೊಂದು ಬೆಂದಿರುವ ರೈತ ಪೂರ್ವಜರ ಆಶಯದಂತೆ ಮಳೆ ಬೆಳೆ ಇಲ್ಲದ ಸಂದರ್ಭದಲ್ಲಿ ವರುಣನಿಗೆ ಮೊರೆ ಹೋಗಿ ವರುಣ ಹೋಮದ ಮೂಲಕ ಮಳೆಗಾಗಿ ಯಜ್ಞ-ಯಾಗಾದಿಗಳ ಮೂಲಕ ದೇವರ ಮೊರೆ ಹೋಗಿರುವುದು ಸಾಮಾನ್ಯವಾಗಿದೆ.

     ಈ ಪೂಜಾ ಕೈಂಕರ್ಯದಲ್ಲಿ ಕೋಡ್ಲಹಳ್ಳಿ, ವೀರಯ್ಯನಪಾಳ್ಯ, ಹೆಚ್.ವಿ ಪಾಳ್ಯ, ಚಿಕ್ಕವಳ್ಳಿ, ಹೊನ್ನಾರನಹಳ್ಳಿ, ರಾಜಯ್ಯನಪಾಳ್ಯ, ವೆಂಕಟಾಪುರ, ಚಿಂಪುಗಾನಹಳ್ಳಿ, ಬಡಮಾರನಹಳ್ಳಿ, ಶಕುನಿತಿಮ್ಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ವರುಣ ಹೋಮ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು.

ಕೂಲಿಗೆ ತಕ್ಕ ಫಲ ನೀಡುವ ಹೊರಳು ಕಲ್ಲಿಗೆ ವಿಶೇಷ ಪೂಜೆ :

ಕೆರೆ ನಿರ್ಮಾಣದ ಸಂದರ್ಭದಲ್ಲಿ ಸಾವಿರಾರು ಕೂಲಿ ಕಾರ್ಮಿಕರಿಗೆ ಕೂಲಿಗೆ ತಕ್ಕ ಫಲ ನೀಡುತ್ತಿದ್ದ ದೈವಾಂಶ ಸಂಭೂತ ಹೊರಳುಕಲ್ಲಿಗೆ ರೈತರು ವಿಶೇಷವಾದ ಪೂಜೆ ಹವನ ಹೋಮದ ಮೂಲಕ ಪೂಜೆ ಸಲ್ಲಿಸಿದರು. ಅಂದು ಕೆರೆ ನಿರ್ಮಾಣ ಮಾಡುವಾಗ ಬಹಳಷ್ಟು ಕೂಲಿ ಕಾರ್ಮಿಕರು ಮೈಗಳ್ಳತನ ತೋರುತ್ತಿದ್ದರು. ಆಗ ಈ ಹೊರಳುಕಲ್ಲನ್ನು ನಿರ್ಮಿಸಿ, ದೈವಾಂಶ ಸಂಭೂತವಾದಂತಹ ಈ ಹೊರಳು ಕಲ್ಲು ಕೂಲಿ ಕಾರ್ಮಿಕ ಎಷ್ಟು ಶ್ರಮ ಪಟ್ಟಿರುತ್ತಾನೆ, ಅದಕ್ಕೆ ತಕ್ಕಂತೆ ಹೊರಳುಕಲ್ಲೊಳಗೆ ಕೈ ಇಟ್ಟರೆ ಅವರ ಶ್ರಮಕ್ಕೆ ತಕ್ಕ ಹಣ ಅವರ ಕೈ ಸೇರುತ್ತಿತ್ತು ಎಂಬ ವಾಡಿಕೆ ಪೂರ್ವಜರಿಂದ ನಡೆದುಕೊಂಡು ಬಂದಿದೆ. ಕಳೆದ 20 ವರ್ಷಗಳಿಂದ ಕೆರೆ ತುಂಬದ ಕಾರಣ ಗಿಡಗೆಂಟೆ ಬೆಳೆದು, ಹೂಳು, ತ್ಯಾಟೆ ತುಂಬಿಕೊಂಡ ಕಾರಣ ಹೊರಳು ಕಲ್ಲು ಇಷ್ಟು ದಿನ ಮುಚ್ಚಿಕೊಂಡಿತ್ತು. ಹಾಗಾಗಿ ಯಾರೊಬ್ಬ ರೈತರ ಕಣ್ಣಿಗೂ ಬಿದ್ದಿರಲಿಲ್ಲವಾಗಿ, ಇತ್ತೀಚೆಗೆ ಕೆರೆ ಶುದ್ಧೀಕರಿಸುವ ಸಂದರ್ಭದಲ್ಲಿ ಹೊರಳು ಕಲ್ಲು ದೊರಕಿದೆ. ಮಳೆರಾಯನ ಕೃಪೆಗಾಗಿ ವರುಣ ಹೋಮದ ಜೊತೆಗೆ ಹೊರಳು ಕಲ್ಲಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link