ಬೆಂಗಳೂರು
ಕೊರೋನಾ ಸೋಂಕಿನಿಂದ ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಯಾವುದೇ ಆತಂಕವಿಲ್ಲ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಸೋಂಕಿನಿಂದ ಹೊರಬರಬಹುದು. ಅಷ್ಟೇ ಅಲ್ಲ ಸೋಂಕಿತ ಬಾಣಂತಿ ಸುರಕ್ಷತಾ ಕ್ರಮಗಳೊಂದಿಗೆ ಹಾಲುಣಿಸಬಹುದು ಎಂದು ಬೆಂಗಳೂರಿನ ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಸರಸ್ವತಿ ರಮೇಶ್ ಹೇಳಿದ್ದಾರೆ.
ಕೊರೋನಾ ಸೋಂಕಿಗೆ ಒಳಗಾಗಿರುವ ಹತ್ತು ಮಂದಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿರುವ ಅವರು, ಬುಧವಾರ ಸೋಂಕಿತರೊಬ್ಬರಿಗೆ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಹೆರಿಗೆ ಮಾಡಿಸಿದ್ದಾರೆ. ಮಗುವಿಗೆ ತಾಯಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹಾಲುಣಿಸುತ್ತಿದ್ದಾರೆ. ಉಳಿದ 9 ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿರುವ ಅವರು, ಆಗಸ್ಟ್ 1 ರಿಂದ 7 ರ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಕೋವಿಡ್ 19 ಸಂಕಷ್ಟ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ರಕ್ಷಣೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಕೊರೋನಾ ಸೋಂಕಿಗೆ ಒಳಗಾಗಿರುವ ಬಾಣಂತಿಯರು ಮಗುವಿಗೆ ಜನ್ಮ ನೀಡಿದ 30 ನಿಮಿಷದಿಂದ 1 ಗಂಟೆ ಒಳಗಾಗಿ ಹಾಲುಣಿಸಬೇಕು. ತಾಯಿಯ ಹಾಲು ಸಂಜೀವಿನಿಯಂತೆ. ಮೊದಲ ಮೂರು ದಿನ ಉತ್ಪತ್ತಿಯಾಗುವ ಹಾಲಿನಲ್ಲಿ ಅಪಾರ ಜೀವ ಸತ್ವಗಳು, ದೇಹಕ್ಕೆ ಬೇಕಾದ ಆರೋಗ್ಯಕರ ಅಂಶಗಳಿರುತ್ತವೆ. ಎಚ್.ಐ.ವಿ. ಸೋಂಕಿತರು, ಕ್ಯಾನ್ಸರ್‍ನಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆ ಇರುವ ಮಹಿಳೆಯರು ಸಹ ತಮ್ಮ ಶಿಶುಗಳಿಗೆ ಹಾಲುಣಿಸಬಹುದು. ಹೀಗಾಗಿ ತಮ್ಮ ಬಳಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಮಗು ಹುಟ್ಟಿದ ನಂತರ ಹಾಲುಣಿಸುವ ವೈಜ್ಞಾನಿಕ ವಿಧಾನಗಳ ಕುರಿತು ಈಗಾಗಲೆ ಸೂಕ್ತ ತರಬೇತಿ ನೀಡಲಾಗಿದೆ. ಬುಧವಾರ ಸೋಂಕಿತರೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯದಿಂದಿದ್ದು, ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ತಾಯಿ ಮಗುವಿಗೆ ಹಾಲುಣಿಸುತ್ತಿದ್ದಾರೆ ಎಂದರು.
ಗರ್ಭಿಣಿಯರಾಗಿರುವಾಗಲೆ ತಾಯಿಯ ಮೊಲೆಯ ತೊಟ್ಟು, ಆಕಾರ, ಹಾಲು ಉತ್ಪತ್ತಿಯಾಗುವ ವಿಧಾನಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಕೊರೋನಾ ಸೋಂಕಿಗೆ ಒಳಗಾಗುವವರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಗರ್ಭಿಣಿಯರು ಪದೆ ಪದೆ ತಮ್ಮ ಬಳಿ ಪರೀಕ್ಷೆಗಾಗಿ ಬರುವುದಿಲ್ಲ. ಟೆಲಿ ಮೆಡಿಸನ್ ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವೇಳೆ ಗರ್ಭಿಣಿಯರು ಕೋವಿಡ್-19 ಸೋಂಕಿಗೆ ಒಳಗಾದರೆ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಬಹುತೇಕ ಗರ್ಭಿಣಿಯರು 40 ರಿಂದ 45 ವಯೋಮಿತಿಯವರು. ಸೋಂಕು ತಗುಲಿದರೂ ಸಹ ಬೇಗ ಚೇತರಿಸಿಕೊಳ್ಳುತ್ತಾರೆ. ಸೋಂಕು ನವಜಾತ ಶಿಶುವಿಗೆ ಹರಡುವುದಿಲ್ಲ. ಹರಡಿದರೂ ಮಗು ಬೇಗ ಗುಣಮುಖವಾಗುತ್ತದೆ. ತಾಯಿಯ ಹಾಲಿನಲ್ಲೂ ಸಹ ಕೊರೋನಾ ಸೋಂಕು ಕಂಡು ಬರುವುದಿಲ್ಲ. ಸೋಂಕಿನಿಂದ ಯಾವುದೇ ಆತಂಕ ಎದುರಾಗುವುದಿಲ್ಲ ಎನ್ನುತ್ತಾರೆ.
ಗರ್ಭಿಣಿಯರು ಉತ್ತಮ ಆಹಾರ, ಜೀವನ ಶೈಲಿ, ಪ್ರಾಣಾಯಾಮದಂತಹ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಬೇಕು. ಬಿಸಿ ಬಿಸಿಯಾದ ಉತ್ತಮ ಆಹಾರ ಸೇವಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೊರೋನಾ ಕುರಿತು ಆತಂಕ ಮತ್ತು ಭಯ ತೊರೆಯಬೇಕು. ಭೀತಿಯಿಂದಲೆ ಸೋಂಕು ಹೆಚ್ಚಾಗುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಹೆರಿಗೆಗೆ ಒಂದು ವಾರ ಮುನ್ನ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಬೇಕು. ಒಂದು ವೇಳೆ ತಾಯಿಗೆ ಸೋಂಕು ಕಂಡು ಬಂದರೆ ಮಗುವಿನ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬಹುದು. ಜತೆಗೆ ಹೆರಿಗೆ ಮಾಡಿಸುವ ವೈದ್ಯರ ಸುರಕ್ಷತೆಗೆ ಈ ವರದಿ ಸಹಕಾರಿಯಾಗಲಿದೆ ಎಂದು ಡಾ. ಸರಸ್ವತಿ ರಮೇಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ 150 ಮಂದಿ ಕೊರೋನಾ ಸೋಂಕಿತ ಗರ್ಭೀಣಿಯರಿಗೆ ಹೆರಿಗೆ ಮಾಡಿಸಲಾಗಿದ್ದು, ಎಲ್ಲಿಯೂ ಜೀವ ಹಾನಿ ಅಥವಾ ತೊಂದರೆ ಎದುರಾಗಿಲ್ಲ. ಅತಿ ಹೆಚ್ಚು ಸೋಂಕಿರುವ ತಮಿಳುನಾಡಿನಲ್ಲಿ 800 ಗರ್ಭಿಣಿಯರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎನ್ನುತ್ತಾರೆ ಡಾ. ಸರಸ್ವತಿ ರಮೇಶ್.
ಇನ್ನು ಕೊರೋನಾ ಸೋಂಕಿತ ಗರ್ಭಿಣಿಯರ ಕುಟುಂಬದವರು ಸಹ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಗುವನ್ನು ಆಗಿಂದಾಗ್ಗೆ ಮುಟ್ಟುವುದಾಗಲಿ, ಮುತ್ತಿಡುವುದಾಗಲಿ ಮಾಡಬಾರದು. ಯಾವುದೇ ಕುಟುಂಬದಲ್ಲಿ ಮಗು ಹುಟ್ಟಿದರೆ ಸಂಭ್ರಮಿಸುವುದು ಸಹಜ. ಆದರೆ ಅದು ಸೋಂಕು ಹರಡಲು ಕಾರಣವಾಗಬಾರದು. ಕುಟುಂಬಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








