ದಾವಣಗೆರೆ:
ಕಳೆದ ಐದು ವರ್ಷಗಳಲ್ಲಿ ಯಾವುದೇ ಭರವಸೆ ಈಡೇರಿಸದ, ಜನವಿರೋಧಿ ನಿಲುವು ತಳೆದ ಹಾಗೂ ಕೋಮುವಾದವನ್ನು ಪೋಷಿಸಿದ ಬಿಜೆಪಿ ಹಾಗೂ ಅದರ ಎನ್‍ಡಿಎ ಮಿತ್ರ ಕೂಟವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕೆಂದು ಸಿಪಿಐ(ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್ ಕರೆ ನೀಡಿದರು.
ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಸಿಪಿಐ(ಎಂ) ಪಕ್ಷದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಬಿಜೆಪಿ ಬಗ್ಗೆಯಾಗಲಿ, ಎನ್‍ಡಿಎ ಮಿತ್ರ ಕೂಟದ ಕುರಿತಾಗಲಿ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ. ಆದರೆ, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಿದೇ ಎಂಬುದನ್ನು ಪರಿಶೀಲಿಸಿ ಈ ಚುನಾವಣೆಯಲ್ಲಿ ಮತ ಚಲಾಯಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಹಣ, ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ಎದುರಿಸಲು ಕೆಲ ಪಕ್ಷಗಳು ತಂತ್ರ ರೂಪಿಸಿವೆ. ಹೀಗಾಗಿ ಈ ಯಾವ ಆಮಿಷಗಳಿಗೂ ಮತದಾರರು ಒಳಗಾಗದೇ, ಸಂವಿಧಾನ ಮತ್ತು ಪ್ರಜಾಸತ್ತೆ ಬಲ ಪಡೆಸುವ ನಿಟ್ಟಿನಲ್ಲಿ ಮತ ಚಲಾಯಿಸಬೇಕೆಂಬುದು ಸಿಪಿಐ(ಎಂ) ಪಕ್ಷದ ನಿಲುವಾಗಿದೆ. ಹೀಗಾಗಿ ನಮ್ಮ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಯಾವುದೇ ಕಾರಣಕ್ಕೂ ಹಣದ ಆಮಿಷಕ್ಕೆ ಬಲಿಯಾಗಬಾರದು. ಹಾಗೂ ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳಲು ಯಾವುದೇ ಪಕ್ಷಗಳು ಬಂದರೂ, ನಮ್ಮ ಪಕ್ಷದ ನಿಲುವನ್ನು ಘಟ್ಟಿಯಾಗಿ ಪ್ರತಿಪಾದಿಸಬೇಕೆಂದು ಕರೆ ನೀಡಿದರು.
ದೇಶದ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಈ ಚುನಾವಣೆಯನ್ನು ರಾಜಕೀಯ ಸಂಘರ್ಷಕ್ಕೆ ಬಳಕೆ ಮಾಡಿಕೊಳ್ಳಬೇಕೆಂದ ಅವರು, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಕಾರ್ಯವೈಖರಿಯನ್ನು ಹಾಗೂ ವಿಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ತನ್ನ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲಗೊಂಡಿರುವುದರ ಬಗ್ಗೆ ಅವಲೋಕ ನಡೆಸಬೇಕಾದ ತುರ್ತು ಇದೆ ಎಂದರು.
ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ನನಗೆ ನೂರು ದಿನ ಕಾಲಾವಕಾಶಕೊಡಿ, ತೆರಿಗೆ ಕಳ್ಳರು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪು ಹಣವನ್ನು ತಂದು, ಪ್ರತಿಯೊಬ್ಬ ಭಾರತೀಯರ ಖಾತೆಗೆ ತಲಾ 15 ಲಕ್ಷ ರೂ.ಗಳನ್ನು ಜಮೆ ಮಾಡುವ ಮೂಲಕ ಎಲ್ಲರ ಸಂಕಷ್ಟ ಪರಿಹರಿಸಿ ಅಚ್ಛೆದಿನ್ ತರುವುದಾಗಿ ಹೇಳಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾದ ಮೇಲೆ ಆ ಕಪ್ಪು ಹಣದ ತಂಟೆಗೆ ಹೋಗದೇ ಬೆಲೆ ಏರಿಕೆ, ನೋಟು ಬದಲಾವಣೆ, ಜಿಎಸ್‍ಟಿ ಕಾಯ್ದೆ ಜಾರಿಯ ಮೂಲಕ ಹೆಚ್ಚು ತೆರಿಗೆ ವಿಧಿಸಿ, ಈ ದೇಶದ ಜನ ಸಾಮಾನ್ಯರನ್ನು ಹಿಂಡಿಹಿಪ್ಪೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನಿಷ್ಠ ವೇತನವನ್ನಾಗಿ 18 ಸಾವಿರ ನಿಗದಿ ಮಾಡಬೇಕೆಂದು ಒತ್ತಾಯಿಸಿ ಹಲವು ಬಾರಿ ಹೋರಾಟ ಮಾಡಿದರೂ, ಇತ್ತೀಚೆಗೆ ದೇಶಾದ್ಯಂತ ಸುಮಾರು 20 ಕೋಟಿ ಜನರು ಮುಷ್ಕರ ನಡೆಸಿದರೂ ಸಹ ಮೋದಿಯಾಗಲಿ, ಬಿಜೆಪಿಯಾಗಲಿ ಹಾಗೂ ಅದರ ಮಿತ್ರ ಪಕ್ಷಗಳಾಗಲಿ ಕನಿಷ್ಠ ವೇತನ ಜಾರಿ ಮಾಡುವ ಗೋಜಿಗೆ ಹೊಗಲಿಲ್ಲ. ಈ ದೇಶದಲ್ಲಿ 10 ಸಾವಿರಕ್ಕೂ ಕಡಿಮೆ ವೇತನಕ್ಕೆ ದುಡಿಯುವವರು ಅಸಂಖ್ಯಾತ ಜನರಿದ್ದು, ಇಷ್ಟು ಕಡಿಮೆ ವೇತನದಲ್ಲಿ ಜೀವನ ನಡೆಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ರೈತರು, ಸ್ತ್ರೀಶಕ್ತಿ ಸ್ವ ಸಹಾಯ ಮಹಿಳಾ ಸಂಘದ ಕಾರ್ಯಕರ್ತರು ತಮ್ಮ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರೂ ಬಡ ರೈತರ, ಮಹಿಳೆಯರ ಸಾಲ ಮನ್ನಾ ಮಾಡದ ಕೆಂದ್ರ ಸರ್ಕಾರ ಶ್ರೀಮಂತರ, ಬಂಡವಾಳಶಾಹಿಗಳ ಸುಮಾರು 3 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಬಡವರ ಬದಲು, ಕಾರ್ಪೋರೇಟ್ ಶಕ್ತಿಗಳಿಗೆ ಒಳ್ಳೆಯ ದಿನಗಳನ್ನು (ಅಚ್ಛೆ ದಿನ್) ತಂದಿದೆ ಎಂದು ಆರೋಪಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡಲು ಹಾಗೂ ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಲು ಎಂ.ಎಸ್.ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿ ಮಾಡದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಸಾವಿರಾರು ಕೋಟಿ ರೂ. ತೆರಿಗೆ ವಿನಾಯಿತಿ ನೀಡಿದೆ ಎಂದು ಆಪಾದಿಸಿದರು.
ದೇಶದ ಅಭಿವೃದ್ಧಿ ಎಂದರೆ ಪ್ರಜೆಗಳ ಅಭಿವೃದ್ಧಿಯೇ ಹೊರತು, ಕಟ್ಟಡ ರಸ್ತೆಗಳ ಅಭಿವೃದ್ಧಿಯಲ್ಲ. ದೇಶದ ಶೇ.90ರಷ್ಟು ಜನರು ಅಭಿವೃದ್ಧಿಯೇ ಆಗದೇ ಸಂಕಷ್ಟದಲ್ಲಿ ಸಿಲುಕಿದ್ದು, ಪ್ರತಿ ಹತ್ತು ಸಕೆಂಡಿಗೆ ಒಬ್ಬರು ಹಸಿವಿನಿಂದ ಅಸುನೀಗುತ್ತಿದ್ದಾರೆ ಎಂದ ಅವರು, ಭಯೋತ್ಪಾದನೆ, ಕೋಟಾ ನೋಟಿಗೆ ಕಡಿವಾಣ ಹಾಕುವುದಾಗಿ ಹೇಳಿ, ಮೋದಿ ಸರ್ಕಾರ ನೋಟು ಬದಲಾವಣೆ ಮಾಡಿತು. ಆದರೆ, ನೋಟು ಬದಲಾವಣೆಯಾಗಿ ಆರೇ ತಿಂಗಳುಗಳಲ್ಲಿ ಬ್ಯಾಂಕ್‍ಗಳ ಮುಂದೆ 2000 ರೂ. ನಕಲಿ ನೋಟುಗಳಿವೆ ಎಂಬ ನಾಮಫಲಕ ಹಾಕಲಾಯಿತು. ಭಯೋತ್ಪಾದನಾ ಚಟುವಟಿಕೆಗೆ ಯಾವುದೇ ಕಡಿವಾಣ ಬಿದ್ದಿಲ್ಲ ಎಂಬುದಕ್ಕೆ ಇತ್ತೀಚೆಗೆ ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ನಮ್ಮ 44 ಜನ ಸೈನಿಕರನ್ನು ಬಲಿ ಪಡೆದಿರುವುದೇ ಸಾಕ್ಷಿ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಿಪಿಐ(ಎಂ) ಮುಖಂಡ ಕೆ.ಲಕ್ಷ್ಮೀನಾರಾಯಣ ಭಟ್, ನಮ್ಮ ಪಕ್ಷ ಅಖಿಲ ಭಾರತ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ದುಡಿಯುವ ವರ್ಗದ ಶ್ರಮಜೀವಿಗಳ ಪಕ್ಷವಾಗಿದೆ. ಚುನಾವಣೆಯಲ್ಲಿ ರಾಜೀಯ ಪರ್ಯಾಯ ಕಟ್ಟಬೇಕೆಂಬ ಉದ್ದೇಶದಿಂದ ಕಾರ್ಯಕರ್ತರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ವಿ.ರೇಣುಕಮ್ಮ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ರಾಜ್ಯ ಸದಸ್ಯ ಆರ್.ಎಸ್.ಬಸವರಾಜ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
