ಬೆಂಗಳೂರು
ಭಾರತೀಯ ಗಗನಯಾನಿಗಳು 2020ರಲ್ಲಿ ಮಾನವರಹಿತ ಗಗನಯಾನಕ್ಕೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಅವರಿಗೆ ಆಹಾರ ಪೂರೈಕೆ ಮಾಡುವ ಜವಾಬ್ದಾರಿ ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಆರ್ಎಫ್ ಎಲ್ )ಗೆ ಲಭಿಸಿದೆ.
2020ರಲ್ಲಿ ಬಾಹಾಕಾಶಕ್ಕೆ ಹಾರಲಿರುವ ಮಾನವರಹಿತ ಹಾಗೂ 2021ರ ಮಾನವ ಸಹಿತ ಉಪಗ್ರಹಗಳ ‘ಗಗನಯಾನ’ ಯೋಜನೆಗೆ ಆಹಾರ ಪೂರೈಕೆ ಮಾಡುವ ಜವಾಬ್ದಾರಿ ವಹಿಸಲಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಅಡಿಯಲ್ಲಿ ಇಸ್ರೋ ಸಹಭಾಗಿತ್ವದಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಸಂಸ್ಥೆಗೆ ಎರಡು ತಿಂಗಳ ಹಿಂದಷ್ಟೇ ಈ ಜವಾಬ್ದಾರಿ ದೊರೆತಿದೆ. ಒಂದು ವರ್ಷದ ಅವಧಿಯಲ್ಲಿ ಆಹಾರ ತಯಾರಿಸಿ ನೀಡುವಂತೆ ಸಂಸ್ಥೆಗೆ ಇಸ್ರೋ ನಿರ್ದೇಶನ ನೀಡಿದೆ.
ಅಂದ ಹಾಗೆ ಈ ಬಾರಿ ಗಗನಯಾನಿಗಳಿಗೆ ಮಾಮೂಲಿಯಂತೆ ಸಿದ್ಧ ಆಹಾರ ಇಲ್ಲವೇ, ಶಕ್ತಿಭರಿತ ಆಹಾರಗಳನ್ನು ಕಳುಹಿಸುವಂತಿಲ್ಲ. ಈ ಬಾರಿ ಗಗನಯಾನಿಗಳು, ಭೂಮಿಯಲ್ಲಿ ನಾವು ಮಾಮೂಲಿಯಾಗಿ ಸೇವಿಸುವ ಉಪ್ಪಿಟ್ಟು, ದೋಸೆ ಮತ್ತಿತರರ ಸಾಮಾನ್ಯ ಆಹಾರಗಳ ಬೇಡಿಕೆ ಇಟ್ಟಿದ್ದಾರೆ. ಅದು ಶುದ್ಧ, ತಾಜಾ ಆಗಿರಬೇಕು ಎಂಬಿತ್ಯಾದಿ ಷರತ್ತುಗಳನ್ನು ಕೂಡ ವಿಧಿಸಿದ್ದಾರೆ.
ಈ ಹೊಸ ಸವಾಲನ್ನು ಸ್ವೀಕರಿಸಿರುವ ಸಂಸ್ಥೆಯ ವಿಜ್ಞಾನಿಗಳು, ತಂತ್ರಜ್ಞರು ಆ ನಿಟ್ಟಿನಲ್ಲಿ ಆಗಲೇ ಕೆಲಸ ಆರಂಭಿಸಿದ್ದಾರೆ. ಈಗಾಗಲೇ ಕಕ್ಷೆಗೆ ಕಳುಹಿಸಲು ಬ್ಯಾಗ್ ಮಾದರಿಯಲ್ಲಿರುವ ಸ್ಟವ್ಗಳನ್ನು ತಯಾರಿಸಲಾಗಿದೆ.
ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019 ರ ಪ್ರದರ್ಶನದಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಎ.ಡಿ.ಸೆಮ್ವಾಲ್ ಈ ಕುರಿತು ಮಾಹಿತಿ ನೀಡಿದರು.
ಈಗಾಗಲೇ ‘ಗಗನಯಾನ’ ಯೋಜನೆಗಾಗಿ 7 ಬಾಹ್ಯಾಕಾಶ ಯಾನಿಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ 3 ಯಾನಿಗಳು ಕಕ್ಷೆಗೆ ಹಾರಲಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಇರಲಿದ್ದಾರೆ. ಈ ಮೂವರು ಯಾತ್ರಿಗಳಿಗೆ ಏಳು ದಿನಗಳ ಅವಧಿಗೆ ತಾಜಾ ಆಹಾರ ಪೂರೈಕೆ ಮಾಡುವ ಜವಾಬ್ದಾರಿಯನ್ನು ಇಸ್ರೋ ವಹಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಶೋಧನೆಗಳು ಆರಂಭಗೊಂಡಿದ್ದು, ಹೊಸ ತಂತ್ರಜ್ಞಾನಗಳನ್ನು ಪ್ರಯೋಗಿಸಲಾಗುತ್ತಿದೆ ಎಂದರು. 1984ರಲ್ಲಿ ನಾವು ಬಾಹ್ಯಾಕಾಶ ಯಾನಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದೆವು. ಈಗ ನಂತರ ಆ ಜವಾಬ್ದಾರಿ ಹೊತ್ತುಕೊಂಡಿದ್ದೇವೆ ಎಂದರು.
ಗುರುತ್ವಾಕರ್ಷಣೆಯಿಲ್ಲದ ಕಕ್ಷೆಯಲ್ಲಿ ಆಹಾರಗಳನ್ನು ತಾಜಾವಾಗಿರಿಸಿಕೊಳ್ಳುವುದು ಸವಾಲಿನ ಕೆಲಸ. ಅಲ್ಲಿ ಯಾತ್ರಿಗಳ ಉಸಿರು ಕೂಡ ಅಲ್ಲೇ ಸುತ್ತುವರಿದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆಹಾರವನ್ನು ರುಚಿಯಾಗಿ, ಶುಚಿಯಾಗಿ ಪೂರೈಕೆ ಮಾಡುವ ಕಠಿಣ ಕೆಲಸ ನಮ್ಮ ಮುಂದಿದೆ ಎಂದರು.
ಸೇನೆ, ನೌಕೆ, ಸಿಆರ್ ಪಿಎಫ್ಗೆ ಆಹಾರ
ಈ ಸಂಸ್ಥೆ ಸಿಯಾಚಿನ್ ನಂತಹ ಕೊರೆಯುವ ಚಳಿಯಲ್ಲಿ ಕೆಲಸ ಮಾಡುವ ಸೈನಿಕರಿಗೆ, ಸಮುದ್ರಯಾನ ಮಾಡುವ ನೌಕಾಪಡೆಗೆ ಹಾಗೂ ಬೆಟ್ಟಗುಡ್ಡಗಳು, ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವ ಮೀಸಲು ಪಡೆ ಯೋಧರಿಗೆ ಆಹಾರ ಪೂರೈಕೆ ಮಾಡುತ್ತಿದೆ. ಇದಕ್ಕಾಗಿ ಒಂದು ದಿನದ ಸಂಪೂರ್ಣ ಆಹಾರವನ್ನೊಳಗೊಂಡ ಪ್ಟೊಣ, ಕೇವಲ ನೀರು ಬೆರೆಸಿ ಸೇವಿಸುವಂತಹ ಇಡ್ಲಿ, ಉಪ್ಪಿಟ್ಟು, ದೀರ್ಘಕಾಲದವರೆಗೆ ಸಂಗ್ರಹಿಸಿ ತಿನ್ನಬಹುದಾದ ಚಪಾತಿ, ರೊಟ್ಟಿ ಮತ್ತಿತರರ ಆಹಾರಗಳನ್ನು ತಯಾರಿಸಿದೆ. ಜೊತೆಗೆ, ದ್ರವರೂಪದಲ್ಲಿರುವ ಜ್ಯೂಸ್ ಗಳನ್ನು ಶೀತಲೀಕರಿಸಿ, ಮತ್ತೆ ಅದಕ್ಕೆ ನೀರು ಸೇರಿಸಿದರೆ ಮೊದಲಿನ ರೂಪಕ್ಕೆ ತರುವಂತಹ ‘ರೀ ಹೈಡರೇಟಿಂಗ್’ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಎಲ್ಲ ಆಹಾರಗಳು ಒಂದು ವರ್ಷದ ಬಳಕೆಯ ಅವಧಿ ಹೊಂದಿರುತ್ತವೆ.
ಚಿಯಾಚಿನ್ ನಂತಹ ತಣ್ಣಗಿನ ವಾತಾವರಣದಲ್ಲಿ ಆಹಾರವನ್ನು ಬಿಸಿ ಮಾಡಿಕೊಳ್ಳಲು ಅಂಗೈ ಅಗಲದ ಲೋಹದ ತಟ್ಟೆ, ಅದರಲ್ಲಿ ಬಳಸಲು ಹೊಗೆಯಿಲ್ಲದ ಅನಿಲದ ಮಾತ್ರೆಗಳು, ರಾಸಾಯನಿಕ ಆಧಾರಿತ ಸ್ಟವ್ ಗಳನ್ನು ಸಿದ್ಧಪಡಿಸಲಾಗಿದೆ.
ಸಿದ್ಧ ಆಹಾರ ತಲುಪಿಸುತ್ತಿರುವ ಸಂಸ್ಥೆ
ಮಾರುಕಟ್ಟೆಯಲ್ಲಿ ಇಂದು ಹತ್ತುಹಲವು ಸಿದ್ಧ ಆಹಾರಗಳು ಕೈಗೆಟಕುವ ದರದಲ್ಲಿ ದೊರೆಯುತ್ತದೆ. ಆದರೆ, ಈ ಎಲ್ಲ ಸಿದ್ಧ ಆಹಾರಗಳ ಹಿಂದಿರುವುದು ಈ ಸಂಸ್ಥೆಯ ತಂತ್ರಜ್ಞಾನ. ತಮ್ಮ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ ಸಂಸ್ಥೆ ಖಾಸಗಿ ಆಹಾರ ಕಂಪನಿಗಳಿಗೆ ತರಬೇತಿ ನೀಡುತ್ತಿದೆ. ಇಲ್ಲಿಯವರೆಗೆ ಎಂಟಿಆರ್, ಐಟಿಸಿ ಸೇರಿ ಒಟ್ಟು 567 ಕಂಪನಿಗಳಿಗೆ ಈ ಸಂಸ್ಥೆ ತರಬೇತಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








