ತುಮಕೂರು:
ಯಾವುದೇ ವಿಷಯವನ್ನು ಬಹಳ ಸುಲಭವಾಗಿ ಅರ್ಥೈಸಿಕೊಳ್ಳುವುದಕ್ಕೆ ಮಾತೃ ಭಾಷೆ ಮುಖ್ಯ.ಜೊತೆಗೆ ಮಾತೃಭಾಷೆಯಲ್ಲಿರುವಷ್ಟು ಸ್ಪಷ್ಟತೆ, ಸರಳತೆ, ಸುಲಲಿತತೆಯನ್ನು ಪರಕೀಯ ಭಾಷೆಗಳಿಂದ ಪಡೆಯಲು ಸಾಧ್ಯವಿಲ್ಲ ಎಂದು ಪ್ರಸಿದ್ದ ಚಲನಚಿತ್ರನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿನ್ನ ರಾತ್ರಿ(ಬಧುವಾರ)ಹಮ್ಮಿಕೊಂಡಿದ್ದ 63ನೇ ವೈಭವದ ಕನ್ನಡ ರಾಜ್ಯೋತ್ಸವದ ಸಾಂಸ್ಕತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಂಗ್ಲ ಭಾಷೆಗೆ 500 ವರ್ಷಗಳ ಇತಿಹಾಸವಿದ್ದರೆ ನಮ್ಮ ಕನ್ನಡಕ್ಕೆ 2000 ವರ್ಷಗಳ ಇತಿಹಾಸವಿದೆ. ಇಡೀ ಭಾರತದಲ್ಲಿ ಭಾಷೆಗೆ ಹೆಚ್ಚು ಹೋರಾಟ ಮಾಡಿದಂತಹ ರಾಜ್ಯವೇ ಕರ್ನಾಟಕ.ಹಾಗಾಗಿ ಭಾಷೆಯ ಬಗ್ಗೆ ಕೀಳಿರಿಮೆ ಬೇಡ ಎಂದು ಮುಖ್ಯಮಂತ್ರಿ ಚಂದ್ರು ಕಿವಿಮಾತು ಹೇಳಿದರು
ವಿದ್ಯಾರ್ಥಿಗಳ ಕುರಿತು ಮಾತನಾಡಿದ ಅವರು, ಬಂಡತನ ಇರ್ಬೇಕು, ಧೈರ್ಯವಿರಬೇಕು. ಆದರೆ ಆಲಸ್ಯ-ತಾತ್ಸರ ಮನೋಭಾವ ಇರಬಾರದು ಎಂದರು. ಜನ ಪ್ರತಿನಿಧಿಗಳು ಮತ್ತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಾತ್ಸಾರದಿಂದ ಕನ್ನಡ ಭಾಷೆ ಬೆಳವಣಿಗೆ ಮತ್ತು ಬಳಕೆ ಕುಂಠಿತವಾಗಿದೆಯೇ ಹೊರತು, ನಮ್ಮ ಗ್ರಾಮೀಣ ಭಾಗದ ಜನರಿಂದಲ್ಲ. ಕನ್ನಡ ಉಳಿದಿದ್ರೆ ರೈತಾಪಿ ಗ್ರಾಮೀಣ ಭಾಗದ ರೈತರ ತಾಯಂದಿರ ಬಾಯಲ್ಲಿ ಉಳಿದಿದೆ.ಇಂದ ನಗರ ಪ್ರದೇಶಗಳಲ್ಲಿ ಶುದ್ದವಾದ ಕನ್ನಡಎಲ್ಲಿದೆಎಂದು ನೆರೆದಿದ್ದವರನ್ನು ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.
ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಾ.ಹ ರಮಾಕುಮಾರಿ ಮಾತನಾಡಿ, ಮನುಷ್ಯನನ್ನು ಮನುಷ್ಯನಾಗಿ ಉಳಿಸುವ ಏಕೈಕ ಸಾಧನ ಸಾಹಿತ್ಯ-ಕಲೆ ಮಾತ್ರ. ಕನ್ನಡದ ಅಸ್ಮಿತೆಗೆ ಯಾವುದೇ ತೊಂದರೆ ಇಲ್ಲ. ನಮ್ಮ ಕನ್ನಡದ ಭಾಷೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು ಹೋಗುವಂತಹ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್ ಸಿದ್ದೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವದ ಆಚರಣೆಗಳು ನಮ್ಮ ನಾಡಿನ ಸಂಸ್ಕತಿ, ಮೌಲ್ಯ ಪರಂಪರೆಯ ಪ್ರತಿಬಿಂಬ. ತಾಯಿನಾಡನ್ನು ಮೊದಲು ನೆನೆಯಬೇಕು. ಅದನ್ನು ಆಚರಿಸಬೇಕು-ಆರಾಧಿಸಬೇಕು ಎಂದ ಅವರು,ಇಂಗ್ಲೀಷ್, ತಂತ್ರಜ್ಞಾನ ಮತ್ತು ಜ್ಞಾನಬೇಕು, ಆದರೆ ಮಾತೃಭಾಷೆಯಲ್ಲಿ ಹೆಚ್ಚು ಕಲಿತಷ್ಟು ಅದು ಪ್ರಚಲಿತವಾಗಿ ಪ್ರವರ್ಧಮಾನಕ್ಕೆ ಬರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಡಾ.ಎಂ.ಕೆ ವೀರಯ್ಯ, ಪ್ರತಿಯೊಂದು ವಿಷಯವನ್ನು ಅರ್ಥೈಸಿಕೊಳ್ಳಬೇಕೆಂದರೆ ಮಾತೃಭಾಷೆಯಲ್ಲಿ ಅಧ್ಯಯನ ಮಾಡಬೇಕು. ಕನ್ನಡ ಭಾಷೆಯನ್ನು ಮಾತನಾಡಲು ಪ್ರತಿಯೊಬ್ಬರು ಮತ್ತೊಬ್ಬರಿಗೆ ಪ್ರೇರಣೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹೆ ರಿಜಿಸ್ಟಾರ್ ಡಾ. ಎಂ.ಝಡ್.ಕುರಿಯನ್, ಡೀನ್ ಡಾ.ಸಿದ್ದಪ್ಪ, ರಾಜೋತ್ಸವ ಆಚರಣಾ ಸಮಿತಿ ಸಂಚಾಲಕರಾದ ಡಾ.ರಮೇಶ್, ವಿದ್ಯಾರ್ಥಿ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಚಂದ್ರಶೇಖರ್ ಹೆಚ್.ಎಸ್, ಪ್ರಧಾನ ಕಾರ್ಯದರ್ಶಿ ಸೈಯದ್ ಮುದ್ದಸ್ಸಿರ್ ಅಹಮ್ಮದ್, ವಿದ್ಯಾರ್ಥಿ ಸಂಘದ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
