ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ: ಡಾ.ವಿ.ರಾಮ್ ಪ್ರಸಾತ್ ಮನೋಹರ್

ಬಳ್ಳಾರಿ

         ಭಾರತ ಚುನಾವಣಾ ಆಯೋಗವು ಲೋಕಸಭೆಯ ಸಾರ್ವತ್ರಿಕ ಚುನಾವಣೆಗಳನ್ನು ಘೋಷಣೆ ಮಾಡಿದ್ದು, ಭಾನುವಾರ ಸಂಜೆಯಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 1934669 ಮತದಾರರಿದ್ದು, ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ 2ನೇ ಹಂತದಲ್ಲಿ ಈ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮಾ.28ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

       ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆತ್ಮರಕ್ಷಣೆ ಮತ್ತು ಬೆಳೆ ಸಂರಕ್ಷಣೆಗಾಗಿ ಅನುಜ್ಞಪ್ತಿದಾರರು ಹೊಂದಿರುವ ಆಯುಧಗಳನ್ನು ಪೊಲೀಸರ ಅಭಿರಕ್ಷೆಯಲ್ಲಿ ಠೇವಣಿ ಇಡಲು ಆದೇಶಿಸಲಾಗಿದೆ. ಎಲ್ಲ ಸರ್ಕಾರಿ ಅತಿಥಿ ಗೃಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

       ಚುನಾಯಿತ ಪ್ರತಿನಿಧಿಗಳು ಮತ್ತು ವಿವಿಧ ನಿಗಮ ಮಂಡಳಿಗಳಿಗೆ ನಾಮನಿರ್ದೇಶನಗೊಂಡಿರುವ ಪ್ರತಿನಿಧಿಗಳಿಗೆ ಒದಗಿಸಲಾಗಿರುವ ಸರ್ಕಾರಿ ವಾಹನಗಳನ್ನು ಹಿಂದಿರುಗಿಸಲು ಸೂಚಿಸಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಹೆದ್ದಾರಿ ಫಲಕಗಳಲ್ಲಿ ಅಳವಡಿಸಿರುವ ಭಿತ್ತಿಚಿತ್ರಗಳನ್ನು ತೆರವುಗೊಳಿಸುವ ಕಾರ್ಯ ಚುರುಕಿನಿಂದ ನಡೆದಿದ್ದು ಇಂದು ಸಂಜೆಯೊಳಗೆ ಪೂರ್ಣಗೊಳ್ಳಲಿದೆ ಎಂದರು.

        ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು 70 ಲಕ್ಷ ರೂ.ಗಳಿಗೆ ಮಿತಿಗೊಳಿಸಲಾಗಿದೆ ಎಂದು ವಿವರಿಸಿದ ಅವರು, ಮಾ.28ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಏ.4 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಏ.5ರಂದು ನಾಮಪತ್ರಗಳ ಪರಿಶೀಲನೆ,ಏ.8ರಂದು ನಾಮಪತ್ರಗಳ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 23ರಂದು ಮತ ಏಣಿಕೆ ನಡೆಯಲಿದೆ ಎಂದರು.

        ಬಳ್ಳಾರಿ ಲೋಕಸಭಾ ಕ್ಷೇತ್ರವು ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರವು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದ್ದು, ಅಲ್ಲಿ 101016 ಪುರುಷರು ಮತ್ತು 103034 ಮಹಿಳೆಯರು ಹಾಗೂ 28 ಇತರೆ ಮತದಾರರು ಸೇರಿ 2,04078 ಜನ ಮತದಾರರು ಈ ಕ್ಷೇತ್ರದಲ್ಲಿ ಹೊಂದಿದ್ದಾರೆ. ಇದರ ಮೇಲ್ವಿಚಾರಣೆ ಕೂಡ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ವಿವರಿಸಿದ ಅವರು, ಬಳ್ಳಾರಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಪುರುಷ 962950, ಮಹಿಳೆ 971459 ಹಾಗೂ ಇತರೆ 260 ಸೇರಿದಂತೆ ಒಟ್ಟು 1934669 ಮತದಾರರಿದ್ದಾರೆ ಎಂದು ಅವರು ವಿವರಿಸಿದರು.

         ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಸುಸೂತ್ರವಾಗಿ ಜರುಗಿಸುವ ನಿಟ್ಟಿನಲ್ಲಿ 2151 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಜತೆಗೆ ಹೆಚ್ಚುವರಿ 10 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂಬುದನ್ನು ತಿಳಿಸಿದ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಅವರು, 3127 ಬ್ಯಾಲೆಟ್ ಯೂನಿಟ್, 2901 ಕಂಟ್ರೋಲ್ ಯೂನಿಟ್, 2901 ವಿವಿಪ್ಯಾಟ್‍ಗಳು ನಮ್ಮಲ್ಲಿವೆ. ಈಗಾಗಲೇ ಮೊದಲನೇ ಹಂತದ ಪರಿಶೀಲನೆ ಕಾರ್ಯವನ್ನು ರಾಜ್ಯ ಪಕ್ಷಗಳ ಪ್ರತಿನಿಧಿ ಸಮ್ಮುಖದಲ್ಲಿ ನಡೆಸಲಾಗಿದೆ. ಹೆಚ್ಚುವರಿಯಾಗಿ ಸ್ವೀಕೃತಗೊಂಡಿರುವ 200 ವಿವಿ ಪ್ಯಾಟ್‍ಗಳಿಗೆ ಮಾತ್ರ ಮೊದಲನೇ ಹಂತದ ಪರಿಶೀಲನೆ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

         ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಅನುಷ್ಠಾನ ಮಾಡುವ ನಿಟ್ಟಿನಲ್ಲಿ 51 ಚೆಕ್‍ಪೋಸ್ಟ್‍ಗಳನ್ನು ಹಾಕಲಾಗಿದ್ದು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 45 ಎಫ್‍ಎಸ್‍ಟಿ, 153 ಎಸ್‍ಎಸ್‍ಟಿ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ ಅವರು, ಚುನಾವಣೆ ಸೂಸುತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು.

        ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಮತಯಂತ್ರಗಳನ್ನು ಸಾಗಣೆ ಮಾಡಲು ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿದ ಅಧಿಕೃತ ವಾಹನಗಳನ್ನು ಬಳಸಲಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳು, ಅಭ್ಯರ್ಥಿ ಮತ್ತು ಅವರ ಪತಿ ಅಥವಾ ಪತ್ನಿ ಹೆಸರಿನಲ್ಲಿರುವ ಸ್ಥಿರ ಹಾಗೂ ಚರ ಆಸ್ತಿಗಳ ವಿವರಗಳನ್ನು ನಮೂನೆ 26 ರಲ್ಲಿ ಕಡ್ಡಾಯವಾಗಿ ಪ್ರಮಾಣಪತ್ರದೊಂದಿಗೆ ಸಲ್ಲಿಸಬೇಕು. ಈ ಮಾಹಿತಿಯನ್ನು ಮಾಧ್ಯಮಗಳ ಮೂಲಕವು ಸಾರ್ವಜನಿಕರಿಗೆ ತಿಳಿಸಬೇಕು ಎಂದರು.

         ಮೊಬೈಲ್ ಆ್ಯಪ್, ಮತದಾರರ ಸಹಾಯವಾಣಿ: ಸಾರ್ವಜನಿಕರು, ಮತದಾರರು ತಮ್ಮ ಗಮನಕ್ಕೆ ಬರುವ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ನೇರವಾಗಿ ಒದಗಿಸಲು ಈ ಬಾರಿ ಸಿ-ವಿಜಿಲ್ ಎಂಬ ಮೊಬೈಲ್ ಅಪ್ಲಿಕೇಷನ್‍ನ್ನು ಬಳಸಲಾಗುತ್ತಿದೆ. ಆಂಡ್ರಾಯ್ಡ್ ಸೌಲಭ್ಯವುಳ್ಳ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಮೊಬೈಲ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ದೂರು ಸಲ್ಲಿಸುವ, ಮಾಹಿತಿ ನೀಡುವವರ ಹೆಸರನ್ನು ಅವರು ಬಯಸಿದರೆ ಗೌಪ್ಯವಾಗಿ ಇಡಲಾಗುವುದು.

        ದೂರು ನೀಡಿದ 100 ನಿಮಿಷದೊಳಗಾಗಿ ಕೈಗೊಂಡ ಕ್ರಮದ ಕುರಿತು ಮಾಹಿತಿ ಒದಗಿಸಲಾಗುವುದು ಎಂದರು.1950 ಮತದಾರರ ಸಹಾಯವಾಣಿ ಮೂಲಕ ತಮ್ಮ ಮತಗಟ್ಟೆ, ವಿಳಾಸ ತಿಳಿದುಕೊಳ್ಳಬಹುದು. ಅದೇ ರೀತಿ ವಿಶೇಷ ಚೇತನರಿಗಾಗಿ ಪ್ರತ್ಯೇಕ ಆ್ಯಪ್ ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ವಿವಿಧ ಅನುಮತಿಗಳನ್ನು ಪಡೆಯಲು ಅನುಕೂಲವಾಗುವಂತೆ ಸುವಿಧಾ ಕ್ಯಾಂಡಿಡೇಟ್ ಆ್ಯಪ್ ಪರಿಚಯಿಸಲಾಗಿದೆ ಎಂದು ವಿವರಿಸಿದರು.

        ಜಾಹೀರಾತು ಪೂರ್ವಾನುಮತಿ ಕಡ್ಡಾಯ : ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಿಗೆ ಜಾಹೀರಾತು ಕಳುಹಿಸುವ ಮುನ್ನ ಜಿಲ್ಲಾಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ (ಎಂಸಿಎಂಸಿ) ಮೂಲಕ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಹೇಳಿದರು.

        ಎಸ್ಪಿ ಅರುಣ ರಂಗರಾಜನ್ ಅವರು ಮಾತನಾಡಿ, ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಸುಸೂತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗುಂಡಾ ಕಾಯ್ದೆ ಅಡಿ ರೌಡಿ ಶೀಟರ್‍ಗಳಾಗಿರುವ 1650 ಜನರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ. ಈಗಾಗಲೇ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ನಿರ್ಲಕ್ಷ್ಯ ತೋರುವ ಪೊಲೀಸ್ ಸಿಬ್ಬಂದಿ ಜೊತೆಗೆ ಮೇಲ್ವಿಚಾರಣೆ ಹೊಣೆ ಹೊತ್ತ ಇನ್‍ಸ್ಪೆಕ್ಟರ್‍ಗಳನ್ನು ಅಮಾನತು ಮಾಡಲಾಗುವುದು ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದರು.

         ಚುನಾವಣೆ ಸಂಬಂಧಿತ ಸಾರ್ವಜನಿಕರ ದೂರು ದುಮ್ಮಾನಗಳಿಗಾಗಿ ಚುನಾವಣಾ ಕೋಶ ಸ್ಥಾಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಅಧಿಕಾರಿ ನಂದಿನಿ ಮತ್ತಿತರರು ಇದ್ದರು.ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ 1952ರಿಂದ 2019ರವರೆಗಿನ ಬಳ್ಳಾರಿ ಲೋಕಸಭಾ ಚುನಾವಣಾ ಇತಿಹಾಸ ತಿಳಿಸುವ ಬಳ್ಳಾರಿ ಲೋಕಸಭಾ ಚುನಾವಣಾ ಕೈಪಿಡಿಯನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಬಿಡುಗಡೆ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link