ಬೆಂಗಳೂರು
ಅಬಕಾರಿ ನಿಯಮಗಳನ್ನು ಮೀರಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಅಶೋಕ್ ನಗರದ ಎರಡು ಹಾಗೂ ಕಬ್ಬನ್ ಪಾರ್ಕ್‍ನ ಒಂದು ಸೇರಿ, ಮೂರು ಬಾರ್‍ಗಳ ಮೇಲೆ ದಾಳಿ ನಡೆಸಿರುವ ಕೇಂದ್ರ ವಿಭಾಗದ ಪೊಲೀಸರು, 100ಕ್ಕೂ ಹೆಚ್ಚು ಮಂದಿ ಯುವತಿಯರನ್ನು ರಕ್ಷಿಸಿ, ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
ಅಶೋಕ್ ನಗರದ ರೆಸಿಡೆನ್ಸಿ ರಸ್ತೆಯ ಪೇಜ್ ತ್ರಿ ಮೇಲೆ ದಾಳಿ ನಡೆಸಿ, 67 ಮಂದಿ ಯುವತಿಯರನ್ನು ರಕ್ಷಿಸಿ, 17 ಮಂದಿ ಸಿಬ್ಬಂದಿಗಳನ್ನು ಬಂಧಿಸಲಾಗಿದೆ.ಬಾರ್‍ನಲ್ಲಿದ್ದ 27 ಮಂದಿ ಗ್ರಾಹಕರನ್ನು ಹೊರಗೆ ಕಳುಹಿಸಿ, ತಲೆಮರೆಸಿಕೊಂಡಿರುವ ಮಾಲೀಕರಾದ ಸಂತೋಷ್ ಹಾಗೂ ರಾಜು ಅವರಿಗಾಗಿ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.
ಟೈಮ್ಸ್ ಬಾರ್ ಮೇಲೆ ದಾಳಿ ನಡೆಸಿ, 27 ಮಂದಿ ಯುವತಿಯರನ್ನು ರಕ್ಷಿಸಿ, 9 ಗ್ರಾಹಕರನ್ನು ಹೊರಕಳುಹಿಸಿ, 16 ಮಂದಿ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮಾಲೀಕರಾದ ಮಹೇಶ್ ಹಾಗೂ ಪಾಯಲ್‍ಗಾಗಿ ಹುಡುಕಾಟ ನಡೆಸಲಾಗಿದೆ.
ಇದಲ್ಲದೆ, ಕಬ್ಬನ್ ಪಾರ್ಕ್‍ನ ಡೆಯಟ್ ಬಾರ್ ಮೇಲೆ ದಾಳಿ ನಡೆಸಿ, 15 ಮಂದಿ ಯುವತಿಯರನ್ನು ರಕ್ಷಿಸಿ, 25 ಮಂದಿ ಗ್ರಾಹಕರನ್ನು ಹೊರಗೆ ಕಳುಹಿಸಲಾಗಿದ್ದು, 3 ಮಂದಿ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಎಲ್ಲಾ ಮೂರು ಬಾರ್‍ಗಳಲ್ಲೂ ಕರ್ಕಶವಾಗಿ ಸಂಗೀತ ಹಾಕಿರುವುದು, ಅಬಕಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದರು.ಅಶೋಕ್ ನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ, ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








