ಸಾಧಕರಿಗೆ ಬರಗೂರು ಪ್ರಶಸ್ತಿ ಪ್ರಧಾನ 

ಚಿತ್ರದುರ್ಗ;

         ನಾಡೋಜ ಬರಗೂರು ಪ್ರತಿಷ್ಠಾನದವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಐವರು ಸಾಧಕರಿಗೆ ಬರಗೂರು ಪ್ರಶಸ್ತಿ ಮತ್ತು ಶ್ರೀಮತಿ ರಾಜಲಕ್ಷ್ಮಿ ಬಗರೂರು ಪ್ರಶಸ್ತಿ ಪ್ರಧಾನ ಮಾಡಲಾಯಿತು.

          ಸಿನಿಮಾ ಕ್ಷೇತ್ರದಿಂದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಹಾಗೂ ಸಾಹಿತ್ಯ ಕ್ಷೇತ್ರದಿಂದ ಡಾ.ರಾಜ್‍ಕುಮಾರ್ ಸಮಗ್ರ ಚರಿತ್ರೆ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ರವರಿಗೆ ಬರಗೂರು ಪ್ರಶಸ್ತಿ ಹಾಗೂ ವಿಚಾರ ವಿಮರ್ಶೆ ಕ್ಷೇತ್ರದಿಂದ ಡಾ.ಕೆ.ಎಸ್.ಕುಮಾರಸ್ವಾಮಿ, ಕಾದಂಬರಿ ಕ್ಷೇತ್ರದಿಂದ ಚೀಮನಹಳ್ಳಿ ರಮೇಶ್‍ಬಾಬು ಮತ್ತು ಶ್ರೀಧರ ಬನವಾಸಿ ಇವರಿಗೆ ಶ್ರೀಮತಿ ರಾಜಲಕ್ಷ್ಮಿ ಪುಸ್ತಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

          ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು, ನಮಗೊಂದು ಆತ್ಮವಿಶ್ವಾಸ ಇದೆ ಎಂದು ತೋರಿಸಿಕೊಟ್ಟಿದ್ದು ಮಾತ್ರವಲ್ಲದೆ ಹೊಸ ಆಶಯಗಳನ್ನು ಕಟ್ಟಿಕೊಡಲು ಚಳುವಳಿಗಳಿಂದಲೇ ಸಾಧ್ಯವಾಗಿದೆ ಎಂದು ಪ್ರತಿಪಾದಿಸಿದರು

          ಇತ್ತೀಚಿನ ದಿನಗಳಲ್ಲಿ ಚಳುವಳಿಗಳನ್ನು ಅನುಮಾನಿಸುವ ಪರಿಸ್ಥಿತಿಯನ್ನು ಎದುರಿಸುವ ಸನ್ನಿವೇಶದಲ್ಲಿ ನಾವಿದ್ದೇವೆ. ಈ ಕಾರಣಕ್ಕಾಗಿ ಚಳುವಳಿಗಳು ತನ್ನ ಆಶಯಗಳನ್ನು ಈಡೇರಿಸುವ ಕಡೆಗೆ ಹೆಚ್ಚು ಪ್ರಯತ್ನಗಳನ್ನು ಮಾಡಬೇಕಾಗಿದೆ. ತಮ್ಮ ಸತ್ವಗಳನ್ನು ಉಳಿಸಿಕೊಂಡು ಬಂದರೆ ಮಾತ್ರ ಅಂತಹ ಚಳುವಳಿಗಳಿಂದ ಸಮಾಜದಲ್ಲಿ ನಾವು ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದು ನುಡಿದರು
ದಲಿತ, ಬಂಡಾಯ, ರೈತ, ಮಹಿಳೆ, ಭಾಷೆ, ಕಾರ್ಮಿಕ. ಹೀಗೆ ಈ ಎಲ್ಲಾ ಚಳುವಳಿಗಳ ಫಲ ಕನ್ನಡ ಸಾಹಿತ್ಯದೊಳಗೆ ಉದ್ದಕ್ಕೂ ಬಂದಿವೆ. ಸಿನಿಮಾದಲ್ಲೂ ಬಂದಿದೆ. ಯಾವ ಒಂದು ಸಮಾಜದಲ್ಲಿ ಚಳುವಳಿ ಜಾಗೃತವಾಗಿರುತ್ತೊ ಆ ಜಾಗೃತವಾಗಿರುವ ಚಳುವಳಿಯ ಆಶಯಗಳು ಸಾಹಿತ್ಯ, ಸಿನಿಮಾ, ರಂಗಭೂಮಿ ಒಳಗೆ ಬರುತ್ತಿರುತ್ತವೆ ಎಂದು ತಿಳಿಸಿದರು.

            ಸ್ವಾತಂತ್ರ್ಯ ಚಳುವಳಿ ಜಾಗೃತ ಆಗಿರುವ ಸಂದರ್ಭದ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಗಳನ್ನು ಖಾದಿ ಹಾರ ಹಾಕಿ ಸ್ವಾಗತಿಸುತ್ತಿದ್ದರು. ಪೌರಾಣಿಕ ನಾಟಕದಲ್ಲಿ ಶ್ರೀಕೃಷ್ಣನನ್ನು ಖಾದಿ ಹಾರ ಹಾಕಿ ಸ್ವಾಗತಿಸುತ್ತಿದ್ದರು ಎಂದರೆ ಅದರ ಅರ್ಥ ಬ್ರಿಟಿಷರೆ ಮೊದಲು ದೇಶ ಬಿಟ್ಟು ತೊಲಗಿ ಎಂಬುದು. ಇದು ಬ್ರಿಟಿಷರಿಗೆ ಒಡ್ಡಿದಂತ ಪ್ರತಿರೋಧವೂ ಆಗಿತ್ತು. ಇವೆಲ್ಲವೂ ಸ್ವಾತಂತ್ರ್ಯ ಚಳುವಳಿಗಳ ಮೇಲೆ ಬೀರಿದ ಪರಿಣಾಮಗಳು. ಈ ರೀತಿ ನಮ್ಮ ಎಲ್ಲಾ ಚಳುವಳಿಗಳು ಸಮಾಜದಲ್ಲಷ್ಟೇ ಅಲ್ಲ, ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ ಮೇಲೆ ಪರಿಣಾಮ ಬೀರುತ್ತಾ ಬಂದಿದೆ ಎಂದು ಹೇಳಿದರು.

           ರಾಜನ್ ರವರ ಸಂಗೀತ ಕೇಳಿ ಕೇಳಿ ನಾವು ಎಷ್ಟರ ಮಟ್ಟಿಗೆ ಬೆಳೆದಿದ್ದೇವೆ ಎಂಬುದು ನಮಗೆ ಗೊತ್ತು. ಅಂತಹವರು ಚಿತ್ರದುರ್ಗಕ್ಕೆ ಬಂದು ಪ್ರಶಸ್ತಿ ಸ್ವೀಕಾರ ಮಾಡುತ್ತಿದ್ದಾರೆ ಎಂದರೆ ಬರಗೂರು ಪ್ರತಿಷ್ಠಾನಕ್ಕೆ ಒಂದು ಕಿರೀಟ ಇಟ್ಟಂತಾಗಿದೆ. ಅಂತಹ ಮಾಧುರ್ಯ, ಅರ್ಥಪೂರ್ಣ, ಸನ್ನಿವೇಶಕ್ಕೆ ತಕ್ಕಂತೆ, ಬಾವಾಕೋಶ ಉಳಿಯುವಂತ ಸಂಗೀತ ನಿರ್ವಹಿಸಿದವರು ರಾಜನ್. ಇವತ್ತು ಸಂಗೀತ ಎನ್ನುವುದು ಹೇಗಾಗಿದೆ ಎಂದರೆ.

             ಹಿಂದಿನ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು. ಈಗ ಎಲ್ಲವೂ ಚೆನ್ನಾಗಿಲ್ಲ ಎಂಬುದು ತಪ್ಪು. ನಾವು ಎಲ್ಲಾ ಕಾಲದಲ್ಲೂ ಗೊಣಗುತ್ತಿರುತ್ತೇವೆ. ನಮ್ಮ ಕಾಲದಲ್ಲೇ ಚೆನ್ನಾಗಿತ್ತು ಎಂದು ಹೇಳೋದು ಜಾಸ್ತಿ. ಆದರೆ ಈ ಕಾಲದೊಳಗೆ ಕಿವಿ ಇರುವುದು ಯಾಕೆ ಅನ್ನುವಷ್ಟರ ಮಟ್ಟಿಗೆ ಗೀತೆಗಳು ಕೇಳಿ ಬರುತ್ತಿವೆ. ಇವತ್ತು ಕೂಡ ಕೆಲವರು ಒಳ್ಳೆ ಗೀತೆ ಬರೆಯುವವರು ಇದ್ದಾರೆ. ಆದರೆ ಅವರಿಗೆ ಪ್ರಚಾರ ಸಿಗುತ್ತಿಲ್ಲ, ಅನೇಕರು ಸಿನಿಮಾದಲ್ಲಿ ಉತ್ತಮ ಸಾಹಿತ್ಯದ ಗೀತೆ ಬರೆಯುವವರು ಇದ್ದಾರೆ. ಆ ಗೀತೆಗಳು ಹೆಚ್ಚೆಚ್ಚು ನಮ್ಮ ಮಾಧ್ಯಮಗಳಲ್ಲಿ ಬರುತ್ತಿಲ್ಲ. ಹಿಂದೆ ಬರುತ್ತಿದ್ದ ಗೀತ ರಚನೆ, ಸನ್ನಿವೇಶ, ಸಂಗೀತ ನಿರ್ದೇಶಕರ ಸಾಮಥ್ರ್ಯ, ಅಭಿರುಚಿ ಬೇರೆ ಇರುತ್ತಿತ್ತು. ಒಂದು ಒಳ್ಳೆ ಸಂದೇಶ ಕೊಡಬೇಕು ಎಂಬ ಉದ್ದೇಶ ಇತ್ತು ಎಂದು ತಿಳಿಸಿದರು.

            ಚಲನಚಿತ್ರ ಮಾಧ್ಯಮ ಅತ್ಯಂತ ಶಕ್ತಿಶಾಲಿ ಮಾಧ್ಯಮ, ಅನಕ್ಷರಸ್ಥರನ್ನೂ ತಲುಪುತ್ತದೆ. ಆ ಚಲನಚಿತ್ರ ಮಾಧ್ಯಮದೊಳಗೆ ಇರುವ ಬಹು ದೊಡ್ಡ ಶಕ್ತಿ ಎಂದರೆ ಸಂಗೀತ. ಚಲನಚಿತ್ರದಲ್ಲಿ ಇರುವ ಸಂಗೀತ ಹೆಚ್ಚು ಜನರನ್ನು ತಲುಪುತ್ತದೆ. ಅತ್ಯಂತ ಉತ್ತಮ ಸಂಗೀತ ಸಂಯೋಜನೆ ಮಾಡಿರುವ ನಾಲ್ಕೈದು ಉತ್ತಮ ಸಂಗೀತ ನಿರ್ದೇಶಕರಲ್ಲಿ ರಾಜನ್ ರವರು ಅಗ್ರಗಣ್ಯ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.

            ಪ್ರಶಸ್ತಿ ಪ್ರದಾನ ಮಾಡಿದ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಡಾ.ರಾಜ್‍ಕುಮಾರ್ ಸಿನಿಮಾಗಳನ್ನು ನೋಡಿ ಕೆಲವರು ತಮ್ಮ ಜೀವನದಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದಾರೆ. ಗುರು ಹಿರಿಯರು, ತಂದೆ ತಾಯಿಯರಿಗೆ ಹೇಗೆ ಗೌರವ ಕೊಡಬೇಕು, ಕಷ್ಟಪಟ್ಟು ಹೇಗೆ ದುಡಿದು ತಿನ್ನಬೇಕು. ಹೀಗೆ ಉತ್ತಮ ಸದಭಿರುಚಿ ಚಲನಚಿತ್ರಗಳು ಸಾಕಷ್ಟು ಜನರಿಗೆ ದಾರಿದೀಪವಾಗಿವೆ ಎಂದರು.
ಪ್ರತಿಷ್ಠಾನದ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಹಾಗೂ ಸುಂದರರಾಜ್ ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು ಅಧ್ಯಕ್ಷತೆ ವಹಿಸಿದ್ದರು.

           ಗೆಳೆಯರ ಬಳಗದ ಡಾ.ಜೆ.ಕರಿಯಪ್ಪ ಮಾಳಿಗೆ, ಡಾ.ಸಿ.ಶಿವಲಿಂಗಪ್ಪ, ಎಚ್.ನಟೇಶ್ ಮೇಟಿಕುರ್ಕೆ, ಗೌನಹಳ್ಳಿ ಗೋವಿಂದಪ್ಪ, ಗೋಪಾಲಸ್ವಾಮಿ ನಾಯಕ್, ವೀರೇಂದ್ರ ಕುಮಾರ್ ಕೋಗುಂಡೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link