ಬೋವಿ ಸಮಾಜದ ಸಾಮಾಜಿಕ ನ್ಯಾಯಕ್ಕಾಗಿ ಬೃಹತ್ ಸಮಾವೇಶ 

ಚಳ್ಳಕೆರೆ

         ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರವೂ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲೂ ಬೋವಿ ಸಮುದಾಯಕ್ಕೆ ಸೂಕ್ತ ಪ್ರಾತಿನಿತ್ಯ ದೊರಕದೆ ಈ ಸಮಾಜ ಹಿಂದುಳಿಯಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೋವಿ ಸಮಾಜದ ಜಗದ್ಗುರುಗಳಾದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಬೋವಿ ಸಮುದಾಯದ ಬೃಹತ್ ಸಮಾವೇಶವನ್ನು ಫೆ.27ರ ಬುಧವಾರ ಚಿತ್ರದುರ್ಗದ ಹಳೇಮಾದ್ಯಮಿಕ ಶಾಲಾ ಆವರಣದಲ್ಲಿ ಸಿದ್ದರಾಮೇಶ್ವರ ಜಯಂತ್ಯೋತ್ಸವದೊಂದಿಗೆ ಆಚರಿಸಲಾಗುವುದು ಎಂದು ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ತಿಳಿಸಿದರು.

         ಅವರು, ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮದ ಪೂರ್ವಸಿದ್ದತೆ ಕುರಿತು ತಾಲ್ಲೂಕು ಬೋವಿ ಸಮಾಜದ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಚಿತ್ರದುರ್ಗ ಜಿಲ್ಲೆಯಲ್ಲೇ ಸುಮಾರು 1.50 ಲಕ್ಷ ಬೋವಿ ಸಮಾಜದ ಬಂಧುಗಳಿದ್ದು, ಈ ಸಮಾವೇಶಕ್ಕೆ 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

         ಬೋವಿ ಸಮಾಜದ ತಾಲ್ಲೂಕು ಗೌರವಾಧ್ಯಕ್ಷ ಹಿರಿಯ ಮುಖಂಡ ವೆಂಕಟಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬೋವಿ ಸಮಾಜದ ಸಂಘಟನೆ ಕುರಿತು ಚರ್ಚೆಗಳು ನಡೆದಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆ ಬಲಪಡಿಸಲು ಸಮಾಜ ಸಿದ್ದತೆಗಳನ್ನು ನಡೆಸುತ್ತಿದೆ. ತಾಲ್ಲೂಕಿನ ಪ್ರತಿಯೊಬ್ಬ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗಹಿಸುವ ಮೂಲಕ ಯಶಸ್ಸಿಗೊಳಿಸುವಂತೆ ಮನವಿ ಮಾಡಿದರು.

          ತಾಲ್ಲೂಕು ಪಂಚಾಯಿತಿ ಸದಸ್ಯ, ಬೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಎಚ್.ಆಂಜನೇಯ ಮಾತನಾಡಿ, ಸಮಾಜದ ವಿವಿಧ ಜಾತಿಯ ಸಂಘಟನೆಗಳು ಸಂಘಟನೆಯ ಮೂಲಕವೇ ಶಕ್ತಿಯನ್ನು ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ಪಾದಾರ್ಪಣೆ ಮಾಡುತ್ತಿವೆ. ಅದರೆ, ಬೋವಿ ಸಮಾಜದಲ್ಲಿ ಸಂಘಟನೆಯ ಕೊರತೆಯಿಂದ ನಿರೀಕ್ಷಿತ ಫಲ ಇದುವರೆಗೂ ದೊರಕಿಲ್ಲ.

         ರಾಜ್ಯದಲ್ಲಿ ಬೋವಿ ಸಮಾಜಕ್ಕಾಗಿ ತ್ಯಾಗ ಮಾಡಿದ ದಿವಂಗತ ಮಂಜರಿ ಹನುಮಂತಪ್ಪನವರ ಸ್ಮರರ್ಣೋತ್ಸವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ರಸ್ತೆಗಳನ್ನು ನಿರ್ಮಿಸಲು, ಮನೆ ನಿರ್ಮಿಸಲು, ಯಾವುದೇ ರೀತಿಯ ಕಾಮಗಾರಿಗಳಿಗೆ ಬೋವಿ ಸಮಾಜದ ಸಹಕಾರವಿಲ್ಲದೆ ನಡೆಯುವುದಿಲ್ಲ.

         ಅದರೂ ಸಹ ಈ ಸಮಾಜಕ್ಕೆ ಸೂಕ್ತ ಪ್ರಾತಿನಿತ್ಯ ನೀಡುವಲ್ಲಿ ವಿಫಲತೆ ಎದ್ದು ಕಾಣುತ್ತಿದ್ದು, ಈ ಸಮಾವೇಶದ ಮೂಲಕ ಸಮಾಜವನ್ನು ಜಾಗೃತಗೊಳಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಟಿ.ನಾಗರಾಜ, ಶ್ರೀನಿವಾಸ್, ಆರ್.ಬಸವರಾಜ, ಡಿ.ತಿಮ್ಮಣ್ಣ, ಮನೋಹರ, ಆರ್.ಸತೀಶ್‍ಕುಮಾರ್ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link