ಬೀದರ್ ಟಿಕೆಟ್ ಗಾಗಿ ಮೈತ್ರಿ ನಾಯಕರಿಗೆ ಮನವಿ ಸಲ್ಲಿಸಿದ ಬುಖಾರಿ

ಬೆಂಗಳೂರು

       ಬೀದರ್ ಲೋಕಸಭಾ ಕ್ಷೇತ್ರದಿಂದ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಿಗೆ ಬೀದರ್ ಮುಸ್ಲಿಮ್ ಯುನೈಟೆಡ್ ಫ್ರಂಟ್ ಅಧ್ಯಕ್ಷ ಸೈಯದ್ ಶಾನುಲ್ ಹಖ್ ಬುಖಾರಿ ಆಗ್ರಹಿಸಿದರು.

       ಶುಕ್ರವಾರ ನಗರದ ಕ್ವೀನ್ಸ್‍ರ ಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕ ಭಾಗಕ್ಕೆ ಒಳಪಡುವ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ.24ರಷ್ಟಿದ್ದರೆ, ಮುಸ್ಲಿಮರ ಜನಸಂಖ್ಯೆ ಶೇ.21ರಷ್ಟಿದೆ ಎಂದರು.

       1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಮೌಲಾನ ಶೌಕತ್ ಅನ್ಸಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಆನಂತರ, 2009ರ ವರೆಗೆ ಈ ಕ್ಷೇತ್ರವನ್ನು ಮೀಸಲು ಕ್ಷೇತ್ರವಾಗಿತ್ತು. ಮಾಜಿ ಸಿಎಂ ಧರಂಸಿಂಗ್ ಎರಡು ಬಾರಿ ಇಲ್ಲಿ ಸ್ಪರ್ಧಿಸಿದರು ಎಂದು ಅವರು ಹೇಳಿದರು.

        ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೀದರ್ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿ ಗೆಲುವು ಸಾಧಿಸಲು ಪೂರಕವಾದ ವಾತಾವರಣವಿದೆ. ಹೈದರಾಬಾದ್- ಕರ್ನಾಟಕ ಭಾಗದಲ್ಲಿ ಐದು ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ಮೂರು ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿವೆ ಎಂದು ಅವರು ತಿಳಿಸಿದರು.

        ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 4-5 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ನಾವು ಮನವಿ  ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರ ಮುಖಂಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ  ಎಂದು ಶಾನುಲ್ ಹಖ್ ಬುಖಾರಿ ಹೇಳಿದರು.

         ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಕಾಂಗ್ರೆಸ್ 5, ಜೆಡಿಎಸ್ 1 ಹಾಗೂ ಬಿಜೆಪಿ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡವಾರು 45.62ರಷ್ಟು ಮತಗಳನ್ನು ಪಡೆದಿದ್ದರೆ, ಜೆಡಿಎಸ್ ಶೇ.12.14 ಹಾಗೂ ಬಿಜೆಪಿ ಶೇ.38.79ರಷ್ಟು ಮತಗಳನ್ನು ಪಡೆದಿದೆ ಎಂದು ಅವರು ತಿಳಿಸಿದರು.

       ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದಿರುವ ಮತಗಳನ್ನು ಗಮನಿಸಿದರೆ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.57.78ರಷ್ಟು, ಹಾವೇರಿಯಲ್ಲಿ ಶೇ.43.14ರಷ್ಟು, ಧಾರವಾಡದಲ್ಲಿ ಶೇ.44.44ರಷ್ಟು, ಮಂಗಳೂರಿನಲ್ಲಿ ಶೇ.43.92ರಷ್ಟು ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶೇ.56.91ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.

       ಮುಸ್ಲಿಮರಿಗೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ವೇದಿಕೆಯು ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಶಾನುಲ್ ಬುಖಾರಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೀದರ್ ಮುಸ್ಲಿಮ್ ಯುನೈಟೆಡ್ ಫ್ರಂಟ್ ಕಾರ್ಯಾಧ್ಯಕ್ಷ ಮುಹಮ್ಮದ್ ಅಸಾದುದ್ದೀನ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link