ತಂದೆ ತಾಯಿ ಸಾಕದಿದ್ದರೆ ಮಕ್ಕಳಿಗೆ ಜೈಲು ಶಿಕ್ಷೆ

ತುಮಕೂರು

     ವಯಸ್ಸಾದ ತಂದೆ ತಾಯಿಯನ್ನು ಸಾಕದ ಮಕ್ಕಳಿಗೆ ಜೈಲು ಶಿಕ್ಷೆ ವಿಧಿಸಬಹದಾಗಿದೆ ಎಂದು ತುಮಕೂರು ಎರಡನೇ ಅಧಿಕ ಮತ್ತು ಸತ್ರ ನ್ಯಾಯಾಧೀಶರಾದ ಟಿ. ಎಸ್. ಪಾಟೀಲ್ ಹೇಳಿದರು.

      ನಗರದ ಸೂಫಿಯಾ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸೂಫಿಯಾ ಕಾನೂನು ಕಾಲೇಜು, ಜಿಲ್ಲಾ ವಕೀಲರ ಸಂಘ ಗುರುವಾರ ಆಯೋಜಿಸಿದ್ದ ಹಿರಿಯ ನಾಗರೀಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಜೈಲು ಶಿಕ್ಷೆ ಮಾತ್ರವಲ್ಲದೆ, ತಂದೆ ತಾಯಿಯ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಸಿಕೊಂಡಿದ್ದರೆ ಅದನ್ನು ರದ್ದುಪಡಿಸಿ ಮತ್ತೆ ತಂದೆ ತಾಯಿ ಹೆಸರಿಗೆ ವಾಪಾಸ್ ಪಡೆಯಲು ಸಹ ಕಾಯ್ದೆಯಲ್ಲಿ ಅವಕಾಶವಿದೆ.

     ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳು ಅವರಿಗೆ ತಿಂಗಳಿಗೆ ಹತ್ತು ಸಾವಿರ ರೂ. ನಿರ್ವಹಣಾ ವೆಚ್ಚವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

     ದೇಶ ವಿಶ್ವಗುರುವಾಗುವತ್ತ ಹೆಜ್ಜೆ ಇಡುತ್ತಿದೆ. ಆದರೆ, ದೇಶದ ಸಂಸ್ಕøತಿಯನ್ನು ಮರೆಯುತ್ತಿದ್ದೇವೆ. ವಿಭಕ್ತ ಕುಟುಂಬಗಳ ಕಾರಣ, ಮಕ್ಕಳು ಹಣ ಮಾಡುವ ಧಾವಂತದಲ್ಲಿ ತಂದೆ ತಾಯಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ವಯಸ್ಸಾದ ತಂದೆ ತಾಯಿ ಆಶ್ರಮ ಸೇರುವಂತಾಗಿದೆ ಎಂದು ವಿಷಾದಿಸಿದರು.

     ನಾವು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡರೆ ಮುಂದೆ ನಮ್ಮ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಮ್ಮ ನಡೆನುಡಿಯನ್ನು ನಮ್ಮ ಮಕ್ಕಳು ಅನುಸರಿಸುತ್ತಾರೆ ಎಂಬುದನ್ನು ಮನಗಾಣಬೇಕು. ಕಾನೂನು ಮೂಲಕ ಹೆದರಿಸುವುದಕ್ಕಿಂತಾ ನಮ್ಮಗಳ ನೈತಿಕ ಮಟ್ಟ ಹೆಚ್ಚಾಗಬೇಕಾಗಿದೆ ಎಂದರು.

       ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಬಿ. ದಶರಥ ಮಾತನಾಡಿ, ಕಾನೂನಿನಲ್ಲಿ ಹಿರಿಯ ನಾಗರೀಕರಿಗೆ ಹಲವು ರಕ್ಷಣೆಗಳಿವೆ, ಸರ್ಕಾರ ಹಲವು ಸೌಲಭ್ಯ ನೀಡುತ್ತಿದೆ. ಇವುಗಳ ಬಗ್ಗೆ ಕಾನೂನು ಸೇವಾ ಪ್ರಾಧಿಕಾರದಿಂದ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

      ಹಿರಿಯ ನಾಗರೀಕರ ಹಕ್ಕುಗಳ ರಕ್ಷಣೆಗೆ ಎಲ್ಲರೂ ಸಹಕಾರ ನೀಡಬೇಕು, ಈ ಬಗ್ಗೆ ಅರಿವು ಮೂಡಿಸಬೇಕು. ದೇಶದ, ಕುಟುಂಬದ ಅಭಿವೃದ್ಧಿಗೆ ಹಿರಿಯ ನಾಗರೀಕರ ಕೊಡುಗೆಯನ್ನು ಮರೆಯಬಾರದು ಎಂದರು.

     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ. ಕೆ. ಅನಿಲ್ ಮಾತನಾಡಿ, ಹಿರಿಯ ನಾಗರೀಕರ ಮೇಲೆ ಹಲ್ಲೆ, ದಬ್ಬಾಳಿಕೆ ಹೆಚ್ಚುತ್ತಿದೆ. ಆಸ್ತಿಗಾಗಿ ಮಕ್ಕಳೇ ತಂದೆ ತಾಯಿಯನ್ನು ಕೊಲೆ ಮಾಡುವ ಹಂತಕ್ಕೆ ಹೋಗುತ್ತಿರುವುದು ಆತಂಕಕಾರಿ ವಿಚಾರ ಎಂದರು.ಸೂಫಿಯಾ ಕಾನೂನು ಕಾಲೇಜು ಅಧ್ಯಕ್ಷ, ಮಾಜಿ ಶಾಸಕ ಎಸ್. ಷಫಿ ಅಹಮದ್, ಕಾಲೇಜು ಪ್ರಾಚಾರ್ಯ ಎಸ್. ರಮೇಶ್, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ. ಆರ್. ಬೋಬಡೆ, ಕಾಲೇಜಿನ ಉಪ ಪ್ರಾಚಾರ್ಯ ಓಬಣ್ಣ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link