ಮಾದರಿ ನೀತಿ ಸಂಹಿತೆ ಜಾರಿ: ಏ.23ಕ್ಕೆ ಮತದಾನ

ದಾವಣಗೆರೆ

      ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನೆನ್ನೆ(ಭಾನುವಾರದಿಂದಲೇ)ಯಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ದಾವಣಗೆರೆ ಕ್ಷೇತ್ರಕ್ಕೆ ಏ.23ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದ್ದಾರೆ.

        ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.28ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಲಿದ್ದು, ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.8 ಉಮೇದುವಾರಿಕೆ ವಾಪಾಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಏ.23ರಂದು ಮತದಾನ ನಡೆಯಲಿದ್ದು, ಮೇ.23ರಂದು ಬೆಳಿಗ್ಗೆ 8 ಗಂಟೆಯಿಂದ ದಾವಣಗೆರೆಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

        ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ ನಡೆಸಲು 8 ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬರಂತೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಮಾದರಿ ನೀತಿ ಸಂಹಿತೆಯನ್ನು ಪಾಲಿಸಲು ರಾಜಕೀಯ ಪಕ್ಷಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ತಿಳುವಳಿಕೆ ನೀಡಲಾಗಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ ಪೋಸ್ಟರ್‍ಗಳನ್ನು ತೆರವು ಗೊಳಿಸು ಕಾರ್ಯ ನಡೆಯುತ್ತಿದೆ ಎಂದರು.

        ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ವಾಪಾಸ್ ಪಡೆಯಲಾಗಿದೆ ಹಾಗೂ ಸರ್ಕಾರಿ, ಅರೆ ಸರ್ಕಾರಿ, ನಿಗಮ ಹಾಗೂ ಸಂಘಸಂಸ್ಥೆಗಳಿಗೆ ಸಂಬಂಧಿಸಿದ ಪ್ರವಾಸಿ ಮಂದಿರ ಹಾಗೂ ಅತಿಥಿಗೃಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

        ಅಧಿಕಾರಿಗಳನ್ನು ಹೊರತು ಪಡಿಸಿ, ಜನಪ್ರತಿನಿಧಿಗಳು ಯಾವುದೇ ಯೋಜನೆಯ ಶಂಕುಸ್ಥಾಪನೆ ನೆರವೇರಿಸುವಂತಿಲ್ಲ. ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಯಾವುದೇ ರೂಪದಲ್ಲಿ ಆರ್ಥಿಕ ಸಹಾಯಧನವನ್ನು ಒದಗಿಸಲು ಹಾಗೂ ಒದಗಿಸುವುದಾಗಿ ಆಶ್ವಾಸನೆ ನೀಡಲು ಜನಪ್ರತಿನಿಧಿಗಳಿಗೆ ಅವಕಾಶವಿಲ್ಲ. ಶಾಸಕರು ಅಥವಾ ಇತರೆ ಯಾವುದೇ ಪ್ರಾಧಿಕಾರ ತನ್ನ ವಿವೇಚನಾಧಿಕಾರ ಬಳಸಿ ನಗದು, ವೆಚ್ಚಗಳನ್ನು ಭರಿಸುವುದಾಗಿ ಭರವಸೆ ನೀಡಲು ಅವಕಾಶವಿಲ್ಲ. ಲಭ್ಯತೆಗೆ ಅನುಗುಣವಾಗಿ ಅಭ್ಯರ್ಥಿಗಳು ಸಭೆ-ಸಮಾರಂಭ ನಡೆಸಲು ಹಾಗೂ ಹೆಲಿಪ್ಯಾಡ್ ಬಳಸಲು ನಿಯಮಾನುಸಾರ ಅನುಮತಿ ಪಡೆಯುವುದು ಕಡ್ಡಾಯ ಎಂದರು.

         ಯಾವುದೇ ಧರ್ಮ, ಜಾತಿ, ಭಾಷೆ ಆಧರಿಸಿ ಮತ ಯಾಚಿಸಲು ಅವಕಾಶವಿಲ್ಲ. ದೇವಸ್ಥಾನ, ಚರ್ಚ್, ಮಸೀದಿ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಅವಕಾಶವಿಲ್ಲ. ರಾಜಕೀಯ ಪಕ್ಷದ ಯೋಜನೆ, ಕಾರ್ಯಕ್ರಮ, ಪೂರ್ವಪರ ಹಿನ್ನಲೆ ಅಥವಾ ಕೆಲಸಗಳಿಗೆ ಮಾತ್ರ ಟೀಕೆ ಸೀಮಿತವಾಗಿರಬೇಕು. ವ್ಯಕ್ತಿ, ಕಾರ್ಯಕರ್ತರ ಖಾಸಗಿ ಜೀವನವನ್ನು ಗುರಿಯಾಗಿಸಿಕೊಂಡಿರಬಾರದು ಹಾಗೂ ಲಿಖಿತ ಅನುಮತಿ ಪಡದೇ ಬಾವುಟ, ಬ್ಯಾನರ್, ಬಂಟಿಂಗ್ ಅಳವಸಿಸಬೇಕು ಮತ್ತು ಗೋಡೆ ಬರಹ ಮಾಡಿಸಬೇಕೆಂದು ಹೇಳಿದರು.

        ಚುನಾವಣಾ ಕಾರ್ಯಕ್ಕೆ ನೇಮಕ ಗೊಂಡಿರುವ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ಮುಗಿಯುವ ವರೆಗೂ ರಜೆಯ ಮೇಲೆ ತೆರಳುವಂತಿಲ್ಲ. ಕೇಂದ್ರಸ್ಥಾನ ಬಿಡಬೇಕಾದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು 70 ಲಕ್ಷಕ್ಕೆ ನಿಗದಿ ಮಾಡಿದ್ದು, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಬಗ್ಗೆ ವಿವರ ನೋಡಿಕೊಳ್ಳಲು ಹೆಚ್ಚುವರಿಯಾಗಿ ಏಜೆಂಟರನ್ನು ನೇಮಿಸಲಾಗಿದೆ. ಅಭ್ಯರ್ಥಿ ಅಂತಿಮ ಆಗುವ ವರೆಗೂ ತಗಲುವ ವೆಚ್ಚವನ್ನು ಆಯಾ ಪಕ್ಷಗಳಿಗೆ ಹಾಗೂ ಅಭ್ಯರ್ಥಿ ಅಂತಿಮಗೊಂಡ ನಂತರ ನಡೆಯುವ ಕಾರ್ಯಕ್ರಮಗಳ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲಾಗುವುದು ಎಂದರು.

         ಪ್ರಚಾರಗಳಿಗೆ ಬಳಸುವ ವಾಹನಗಳಿಗೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ಚುನಾವಣಾಧಿಕಾರಿ ನೀಡುವ ಪರವಾನಿಗೆ ಪತ್ರವನ್ನು ವಾಹನದ ಮುಂದೆ ಕಾಣುವಂತೆ ಪ್ರದರ್ಶಿಸಬೇಕು. ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಚುನಾವಣಾ ವೆಚ್ಚದ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಪಂಚಾಯತ್‍ನ ಮುಖ್ಯ ಲೆಕ್ಕಾಧಿಕಾರಿ ಟಿ.ಆಂಜನೇಯ ಅವರನ್ನು ನೇಮಿಸಲಾಗಿದೆ.

        ಮತದಾರರಿಗೆ ಆಮಿಷವೊಡ್ಡುವುದು, ಅನಧಿಕೃತ ಮದ್ಯ ಮಾರಾಟ ಹಾಗೂ ಹಣ ಹಂಚಿಕೆ ತಡೆಯಲು 25 ಫ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದ್ದು, ಈ ತಂಡದ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಹೆಚ್ಚಿನ ಮೊತ್ತದ ನಗದು, ಅನಧಿಕೃತ ಮದ್ಯ, ಅನುಮಾನಸ್ಪದ ವಸ್ತು ಅಥವಾ ಶಸ್ತ್ರಾಸ್ತ್ರ ಸಾಗಾಣಿಕೆಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು 47 ಚೆಕ್ ಪೋಸ್ಟ್‍ಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.

        ಮತದಾರರಿಗೆ ಅಮೀಷವೊಡ್ಡುವುದು, ಅನಧಿಕೃತ ಮದ್ಯ ಮಾರಾಟ ಕಂಡು ಬಂದಲ್ಲಿ ಮಾಹಿತಿ ನೀಡಲು ಹಾಗೂ ಮತದಾರರ ಪಟ್ಟಿಯ ಬಗ್ಗೆ ಹಾಗೂ ವೆಚ್ಚಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ದೂರು ನೀಡಲು 1950 ಸಂಖ್ಯೆ ಉಚಿತ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. ಅಲ್ಲದೇ, 08192-272953 ದೂರವಾಣಿ ಸಂಖ್ಯೆಗೂ ಕರೆ ಮಾಡಿ ದೂರು ನೀಡಬಹುದು ಎಂದರು.
ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳು, ರ್ಯಾಲಿಗಳು ಹಾಗೂ ಚುನಾವಣಾ ವೆಚ್ಚಗಳ ಉಸ್ತುವಾರಿ ನೋಡಿಕೊಳ್ಳಲು ಅಸಿಸ್ಟೆಂಟ್ ಎಕ್ಸಪಂಡಿಚರ್ ಅಬ್ಜರವರ್ಸ್, ವಿಡಿಯೋ ಸರ್ವಲೆನಸ್ಸ್ ತಂಡ, ವಿಡಿಯೋ ವೀವಿಂಗ್ ಟೀಮ್, ಅಕೌಂಟಿಂಗ್ ಟೀಮ್ ರಚಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ.ಸಿಇಒ ಹೆಚ್.ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link