ಬೆಂಗಳೂರು
ಪ್ರಯಾಣಿಕನೊಬ್ಬನಿಗೆ ಧಮ್ಕಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೀಬರ್ಡ್ ಟ್ರಾವೆಲ್ಸ್ ಮಾಲೀಕರ ಮೇಲೆ ಪ್ರಯಾಣಿಕರೊಬ್ಬರು ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ತಿಂಗಳ 14ರ ಮಧ್ಯಾಹ್ನ 1ರ ವೇಳೆ ಟ್ರಾವೆಲ್ಸ್ ನವರ ದುರ್ವತೆಯನ್ನು ಪ್ರಶ್ನಿಸಲು ಪ್ರಯಾಣಿಕ ಭರತ್ ಕುಮಾರ್ ತೆರಳಿದಾಗ ಮಾಲೀಕ ನಾಗರಾಜ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರು ಸೀಬರ್ಡ್ ಬಸ್ ನಲ್ಲಿ ಅಥಣಿಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದರು. ಈ ವೇಳೆ ತುಮಕೂರು ಬಳಿ ಬಸ್ ಅಪಘಾತಕ್ಕೆ ತುತ್ತಾಗಿತ್ತು. ಘಟನೆಯಿಂದ ಯಾರಿಗೂ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೆ ಬಹುತೇಕ ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಇದರಿಂದ ದಿಕ್ಕು ತೋಚದೆ ಪ್ರಯಾಣಿಕರು ಸಹಾಯಕ್ಕಾಗಿ ಬೆಂಗಳೂರಿನ ಸೀಬರ್ಡ್ ಟ್ರಾವೆಲ್ಸ್ ಗೆ ಕರೆ ಮಾಡಿದ್ದಾರೆ.
ಆದರೆ ಟ್ರಾವೆಲ್ಸ್ ನವರು ಯಾವುದೇ ಸಹಾಯ ಮಾಡದೇ ಟ್ಯಾಕ್ಸಿ ಮಾಡಿಕೊಂಡು ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಪ್ರಯಾಣಿಕರಿಗೆ ಗಾಯಗಳಾಗಿದ್ದರಿಂದ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ.
ಪ್ರಯಾಣಿಕ ಭರತ್ ಕುಮಾರ್ ಎಂಬವರು ಟ್ರಾವೆಲ್ಸ್ ನವರ ದುರ್ವತನೆಯನ್ನು ಪ್ರಶ್ನಿಸೋದಕ್ಕೆ ಬೆಂಗಳೂರಿನ ಸೀಬರ್ಡ್ ಕಚೇರಿಗೆ ತೆರಳಿದ್ದಾರೆ. ಆಗ ಟ್ರಾವೆಲ್ಸ್ ಮಾಲೀಕ ನಾಗರಾಜ್ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಭರತ್ ಸೀಬರ್ಡ್ ಟ್ರಾವೆಲ್ಸ್ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.