ಶಿರಾ:
ಕಳೆದ 7 ತಿಂಗಳಿಂದಲೂ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದ್ದು ಈ ಕೂಡಲೇ ಕುಡಿಯುವ ನೀರನ್ನು ನೀಡುವಂತೆ ಒತ್ತಾಯಿಸಿ ತಾಲ್ಲೂಕಿನ ಮದಲೂರು ಗ್ರಾಮ ಪಂಚಾಯ್ತಿಯ ಹುಳಿಗೆರೆ ಗ್ರಾಮಸ್ಥರು ಶಿರಾ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಶುಕ್ರವಾರ ಗುಡ್ಪ್ರೈಡೆಯ ರಜಾದಿನವೆಂಬ ಅರಿವಿಲ್ಲದೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಬಳಿ ಟಾಟಾ ಎಸಿ ವಾಹನಗಳಲ್ಲಿ ಖಾಲಿ ಬಿಂದಿಗೆಗಳನ್ನು ಹಿಡಿದು ಬಂದ ಗ್ರಾಮಸ್ಥರು ಮದಲೂರು ಗ್ರಾಮ ಪಂಚಾಯ್ತಿಯ ನಿರ್ಲಕ್ಷ್ಯವನ್ನು ಖಂಡಿಸಿದರು.
ಹುಳಿಗೆರೆ ಗ್ರಾಮದ ಕೆಲವು ಗಲ್ಲಿಗಳಲ್ಲಿ ಯತೇಚ್ಚವಾಗಿ ನೀರನ್ನು ಪೂರೈಸುವ ಗ್ರಾಮ ಪಂಚಾಯ್ತಿ ಮತ್ತಲವು ಗಲ್ಲಿಗಳಿಗೆ ನೀರನ್ನು ಬಿಟ್ಟು 7 ತಿಂಗಳುಗಳೇ ಕಳೆದಿದೆ. ಮದಲೂರು ಗ್ರಾಮ ಪಂಚಾಯ್ತಿಯಲ್ಲಿ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.
ಮದಲೂರು ಗ್ರಾಮ ಪಂಚಾಯ್ತಿಯ ಅಧಿಕಾರಿಗಳಿಗೆ ಕೊಳಾಯಿ ಮೂಲಕ ನೀರು ನೀಡುವಂತೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಯುಗಾದಿ ಹಬ್ಬದ ದಿನದಂದು ಒಂದು ಟ್ಯಾಂಕರ್ ನೀರು ಪೂರೈಸಿದ್ದನ್ನು ಬಿಟ್ಟರೆ ಈವರೆಗೂ ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ ಎಂದು ಗ್ರಾಮಸ್ಥರು ಆರೋಪಗಳ ಸುರಿಮಳೆಗರೆದರು.
ನಮಗೆ ಈದಿನ ಸರ್ಕಾರಿ ರಜೆ ಇದೆ ಎಂದು ತಿಳಿದಿರಲಿಲ್ಲ. ಒಂದು ವೇಳೆ ತಿಳಿದಿದ್ದರೆ ಸೋಮವಾರವೇ ಬೃಹತ್ ಪ್ರತಿಭಟನೆ ಮಾಡುತ್ತಿದೆವು. ಈಗಲೂ ನಾವು ಸುಮ್ಮನೆ ಬಿಡುವುದಿಲ್ಲ. ಸೋಮವಾರ ಬೆಳಿಗ್ಗೆ ಗ್ರಾಮಸ್ಥರನ್ನೆಲ್ಲಾ ಕರೆದುಕೊಂಡು ಬಂದು ನೀರು ಸರಬರಾಜು ಇಲಾಖೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.
ಉಗ್ರಪ್ಪ, ರಾಮಸ್ವಾಮಿ, ಜಯಪ್ಪ, ಹನುಮಂತಪ್ಪ, ನರಸಿಂಹಣ್ಣ, ಕೆಂಚಪ್ಪ, ಸಿದ್ದೇಶ್ವರಪ್ಪ, ರವಿಚಂದ್ರ, ಮಣಿಕಂಠ, ರತ್ನಮ್ಮ, ಯಶೋಧಮ್ಮ, ಗೌರಮ್ಮ, ಮಂಜುಳಾ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಹಾಜರಿದ್ದರು.