1 ವರ್ಷದೊಳಗೆ ಎಲ್ಲಾ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣ : ಸಿ ಎಂ

ಬೆಂಗಳೂರು

   ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಸಂದೇಶಗಳನ್ನು ಯುವಜನತೆಗೆ ಪರಿಚಯ ಮಾಡಿಕೊಡಲು ಮುಂದಿನ ಒಂದೂವರೆ ವರ್ಷದೊಳಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ಕಟ್ಟಡಗಳನ್ನು ನಿರ್ಮಿಸಲಾಗುವುದು. ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

   ನಗರದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿ ಅವರ ೧೫೦ನೇ ಜನ್ಮವರ್ಷಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಗಾಂಧಿ ವಿಚಾರಧಾರೆಗಳನ್ನು ಪ್ರಚುರ ಪಡಿಸಲು ಮಹಾತ್ಮ ಗಾಂಧೀಜಿ, ಕಸ್ತೂರ್ ಬಾ ಅವರ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ನಗರದಲ್ಲಿ ನಡೆಸಲಾಗುವುದು ಎಂದರು.

   ನಗರದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಕಸ್ತೂರ್ ಬಾ ಅವರ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲು ಎಷ್ಟು ಹಣ ಖರ್ಚಾದರೂ ಬಿಡುಗಡೆಗೆ ಹಿಂದೆ – ಮುಂದೆ ನೋಡುವುದಿಲ್ಲ. ಅವರ ಆದರ್ಶ, ಸಂದೇಶಗಳನ್ನು ಪ್ರಸ್ತುತ ಪೀಳಿಗೆಗೆ ತಲುಪಿಸುವುದು ಮುಖ್ಯ ಎಂದು ಅವರು ಹೇಳಿದರು.

   ಬಳ್ಳಾರಿ, ಮಡಿಕೇರಿ, ಚಿಕ್ಕಬಳ್ಳಾಪುರ, ಮತ್ತಿತರ ಕಡೆ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡಿವೆ. ನಿರ್ಮಾಣ ಹಂತದಲ್ಲಿರುವ ೨೫ ಜಿಲ್ಲೆಗಳಲ್ಲಿ ತಲಾ ೩ ಕೋಟಿಯಂತೆ ೭೫ ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ೫ ಜಿಲ್ಲೆಗಳಿಗೆ ೨೦ ಲಕ್ಷ ರೂ. ನಂತೆ ಒಂದು ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

   ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಗಾಂಧಿ ಜೀವನ ಕುರಿತ ಅಧ್ಯಯನ ಕೇಂದ್ರಗಳನ್ನು ಆರಂಭಿಸುವಂತೆ, ಎಲ್ಲಾ ವಿವಿ ಕುಲಪತಿಗಳಿಗೆ ಇಂದೇ ಸೂಚನೆ ನೀಡಲಿದ್ದೇನೆ.ಮೊಬೈಲ್, ಕಂಪ್ಯೂಟರ್ ಯುಗದಲ್ಲಿ ಯುವ ಜನಾಂಗ ಮುಳುಗಿರುವುದು ಆತಂಕಕಾರಿ ಸಂಗತಿ. ಇಂದಿಗೂ ಹೆಚ್ಚು ಪ್ರಸ್ತುತವಾಗಿರುವ ಮಹಾತ್ಮ ಗಾಂಧೀಜಿ ಅವರ ಬದುಕಿನ ಮೌಲ್ಯವನ್ನು ಯುವ ಜನಾಂಗಕ್ಕೆ ತಲುಪಿಸುವುದು ಮುಖ್ಯವಾಗಿದೆ ಮಹಾತ್ಮ ಗಾಂಧೀಜಿ ಅವರನ್ನು ಎಲ್ಲರಿಗೂ ಹತ್ತಿರವಾಗುವಂತೆ ಮಾಡುವಲ್ಲಿ ಸರ್ಕಾರ, ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.

ವಿವಿಗಳಿಗೆ ಸೂಚನೆ

   ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರು ಮಾತನಾಡಿ, ಬಹುತೇಕ ಜಿಲ್ಲೆಗಳಲ್ಲಿ ಗಾಂಧಿ ಭವನ ಕಟ್ಟಡ ಅಪೂರ್ಣಗೊಂಡಿವೆ. ಕೂಡಲೇ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಧ್ಯಯನ ಕೇಂದ್ರಗಳು ಶಿಸ್ತುಬದ್ಧವಾಗಿ ನಡೆಸಲು ವಿವಿಗಳಿಗೆ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.

   ಪ್ರಸ್ತುತ ಯುಗದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ತಲೆಬಾಗುತ್ತೇವೆ. ಆದರೆ ಅವರ ತತ್ವ, ಆದರ್ಶಗಳು, ಸಂದೇಶಗಳನ್ನು ಪರಿಪಾಲಿಸುತ್ತಿದ್ದೇವೆ ಎಂದು ಎದೆಮುಟ್ಟಿಕೊಂಡು ಹೇಳುವ ಧೈರ್ಯ ಯಾರಿಗೂ ಇಲ್ಲದಂತಾಗಿದೆ. ಅಂತಹ ಕಲುಷಿತ ವಾತಾವರಣದಲ್ಲಿದ್ದೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

   ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ನಗರದಲ್ಲಿ ಮಹಾತ್ಮ ಗಾಂಧೀಜಿ ಅವರ ಕುರಿತಂತೆ, ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲು ಎಲ್ಲಾ ಅಗತ್ಯ ಸಹಕಾರವನ್ನು ನೀಡಬೇಕು. ಸಾಹಿತ್ಯ ಅಕಾಡೆಮಿ ವತಿಯಿಂದ ಗಾಂಧಿ ಸಾಹಿತ್ಯ ಸಮ್ಮೇಳನವನ್ನು ಕೂಡ ಆಯೋಜಿಸಬೇಕು ಎಂದು ಮನವಿ ಮಾಡಿದರು.

ಜಯದೇವಗೆ ಸನ್ಮಾನ

    ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಚಾಮರಾಜನಗರದ ದೀನಬಂಧು ಮಕ್ಕಳ ಮನೆಯ ಮುಖ್ಯಸ್ಥ ಜಿ.ಎಸ್. ಜಯದೇವ ಮತ್ತು ಚಿಕ್ಕಬಳ್ಳಾಪುರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸು.ರಂ. ರಾಮಯ್ಯ ಅವರನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ, ಗ್ರಾಮಸೇವಾ ಸಂಘದ ಸಂಸ್ಥಾಪಕ ಪ್ರಸನ್ನ ಹೆಗ್ಗೋಡು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೆಚ್ಚುವರಿ ಮಹಾನಿರ್ದೇಶಕ ಎಂ. ನಾಗೇಂದ್ರ ಸ್ವಾಮಿ, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೋ, ಮತ್ತಿತರರು ಉಪಸ್ಥಿತರಿದ್ದರು.

ಛಾಯಾಚಿತ್ರ ಪ್ರದರ್ಶನ

     ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ೧೫೦ನೇ ಜನ್ಮವರ್ಷಾಚರಣೆ ಅಂಗವಾಗಿ ನಗರದ ಗಾಂಧಿಭವನದಲ್ಲಿ ಬುಧವಾರದಿಂದ ಶನಿವಾರದವರೆಗೆ ಗಾಂಧೀಜಿಯವರ ಜೀವನ ಚರಿತ್ರೆಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.

   ಗುಜರಾತಿನ ಪೋರ್ ಬಂದರಿನಲ್ಲಿ ಜನಿಸಿದ ನಿವಾಸ, ಅವರ ಪೂರ್ವಜರ ಗೃಹ, ತಂದೆ, ತಾಯಿ ಅವರ ಓದಿದ ಆಲ್ಫ್ರೆಡ್ ಪ್ರೌಢಶಾಲೆ, ೭ನೇ ವಯಸ್ಸಿನ ಛಾಯಾಚಿತ್ರ ಕಾನೂನು ವಿದ್ಯಾರ್ಥಿಯಾಗಿ ಸಹೋದ್ಯೋಗಿಯೊಂದಿಗೆ ತೆಗೆಸಿಕೊಂಡು ಛಾಯಾಚಿತ್ರ ಸೇರಿದಂತೆ ನೂರಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.

   ಭಾರತೀಯ ಬೆರಳಚ್ಚು ನೀಡಿ ನೋಂದಣಿ ಪ್ರಮಾಣ ಪತ್ರವನ್ನು ಪಡೆಯಬೇಕು ಎಂಬ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ, ಪ್ರಮಾಣ ಪತ್ರಗಳನ್ನು ಸುಟ್ಟಿದ್ದು, ಸತ್ಯಾಗ್ರಹಿಯಾಗಿ ಗಾಂಧಿ ಅವರ ಜೀವನ ಸಂಗಾತಿ ಕಸ್ತೂರಿ ಬಾ ಅವರೊಂದಿಗೆ ಇದ್ದ ಸಬರಮತಿ ಆಶ್ರಮ ಗಾಂಧೀಜಿಯವರು ಮೊದಲ ಬಾರಿಗೆ ಧರಿಸಿದ ಬಿಳಿ ಟೋಫಿ ಚಿತ್ರಗಳು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ನೂರಾರು ಚಿತ್ರಗಳು

   ಮಹಾತ್ಮಗಾಂಧೀಜಿಯವರು ನಡೆಸಿದ ಉಪ್ಪಿನ ಸತ್ಯಾಗ್ರಹ ದುಂಡಿನ ಮೇಜಿನ ಸಭೆ ಸುಭಾಷ್ ಚಂದ್ರಬೋಸ್ ಗಡಿನಾಡ ಗಾಂಧಿ ಅವರೊಂದಿಗೆ ಛಾಯಾಚಿತ್ರ ಅಲ್ಲದೆ ಗಾಂಧೀಜಿಯವರು ಹತ್ತಿಯಿಂದ ಚರಕ ಸಹಾಯದಿಂದ ನೂಲುವುದು ಸೇರಿದಂತೆ ಅವರ ಜೀವನ ನೂರಾರು ಚಿತ್ರಗಳು ಇಲ್ಲಿ ಪ್ರದರ್ಶಿಸಲಾಗಿದೆ.

   ಮಹಾತ್ಮಗಾಂಧೀಜಿಯವರು ತಮ್ಮ ಜೀವನದ ಕೊನೆಯ ದಿನ ಛಾಯಾಚಿತ್ರಗಳು ಗಾಂಧೀಜಿಯವರು ಹಂತಕನ ಗುಂಡಿಗೆ ಬಲಿಯಾಗಿ ಅವರ ಅಂತಿಮ ಸಂಸ್ಕಾರಕ್ಕಾಗಿ ನಡೆದ ಕೊನೆಯ ಪಯಣ ಚಿತ್ರವು ಇಲ್ಲಿ ಪ್ರದರ್ಶಿಸಲಾಗಿದೆ. ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಗಾಂಧಿಭವನಕ್ಕೆ ಭೇಟಿ ನೀಡಿ ರಾಷ್ಟ್ರಪಿತನ ಅಪರೂಪದ ಛಾಯಾಚಿತ್ರಗಳನ್ನು ವೀಕ್ಷಿಸಬಹುದು.

   ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಜಂಟಿಯಾಗಿ ಆಯೋಜಿಸಿರುವ ಗಾಂಧೀಜಿಯವರ ಅಪರೂಪದ ಛಾಯಾಚಿತ್ರವನ್ನು ಪ್ರದರ್ಶನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಿ, ಪ್ರತಿ ಚಿತ್ರಗಳನ್ನು ಆಸಕ್ತಿಯಿಂದಲೇ ವೀಕ್ಷಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link