ತುಮಕೂರು
ಸರ್ಕಾರಗಳು ಹಿಂದುಳಿದ ವರ್ಗಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಈ ಹಿಂದೆ ದೊರೆಯುತ್ತಿದ್ದ ಸೌಲಭ್ಯಗಳನ್ನು ಹಿಂಪಡೆದು ಕಷ್ಟದ ಕೂಪಕ್ಕೆ ತಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕಾಳಿದಾಸ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ಪ್ರವರ್ಗ1, ಪ್ರವರ್ಗ 2 ಎನಲ್ಲಿ ಬರುವ 204 ಜನಾಂಗದವರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಹಿಂದುಳಿದ ಜನಾಂಗಗಳಿಗೆ ಒತ್ತಾಯ ಮಾಡಿ, ಪ್ರತಿಭಟನೆ ಮಾಡಿ ಸೌಲಭ್ಯ ಪಡೆಯುವ ಶಕ್ತಿ ಇಲ್ಲ. ಕೇವಲ ಹಿಂದಿನ ಸರ್ಕಾರಗಳು ಸ್ವಯಂ ಆಗಿ ಘೋಷಣೆ ಮಾಡಿರುವ ಸೌಲಭ್ಯಗಳನ್ನು ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ಇದೀಗ ಸರ್ಕಾರಗಳು ನಮ್ಮ ಸೌಲಭ್ಯಗಳನ್ನು ಕಿತ್ತುಕೊಂಡರೂ ಅದನ್ನು ಪ್ರಶ್ನಿಸುವ ಶಕ್ತಿಯೂ ಇಲ್ಲ. ಇದಕ್ಕಾಗಿ ಎಲ್ಲರನ್ನು ಒಗ್ಗೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೆಟ್ರಿಕ್ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಕಡಿತಗೊಳಿಸಲಾಗಿದ್ದು, ಈ ಬಗ್ಗೆ ಪ್ರತಿಭಟನೆ ಮಾಡಿ, ಸರ್ಕಾರದ ಗಮನಕ್ಕೆ ತಂದಾಗ ಮುಖ್ಯಮಂತ್ರಿಗಳು ಈ ವಿಷಯ ತಮ್ಮ ಗಮನಕ್ಕೆ ಬಂದಿರಲಿಲ್ಲ. ಆ ಆದೇಶವನ್ನು ಬದಲಾಯಿಸಲಾಗುವುದು ಎಂದು ಹೇಳಿದರೆ ಹೊರರು ಅದನ್ನು ಬದಲಾಯಿಸಲಿಲ್ಲ. ಫೆ.11ರಂದು ಕೂಡ ಬಜೆಟ್‍ನ ಪೂರ್ವಭಾವಿ ಸಭೆಯಲ್ಲಿ ಎಸ್‍ಸಿ ಎಸ್‍ಟಿ ಸಮುದಾಯಕ್ಕೆ ಮೀಸಲಿಟ್ಟಂತೆ ಹಿಂದುಳಿದ ಜಾತಿಗಳಿಗೂ ಅನುದಾನ ಮೀಸಲಿಡಬೇಕು ಎಂದು ಒತ್ತಾಯ ಮಾಡಲಾಯಿತಾದರೂ ಮುಖ್ಯಮಂತ್ರಿಗಳು ಅದಕ್ಕೆ ಪ್ರತಿಕ್ರಿಯೆ ನೀಡದೆ ಮುಂದಕ್ಕೆ ಹೋದರು ಎಂದರು.
ಹಿಂದುಳಿದ ಸಮುದಾಯಗಳಿಗೆ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಪ್ರೋತ್ಸಾಹ ಸಿಗಬೇಕು. ಅಲ್ಲಿಯವರೆಗೆ ನಮ್ಮ ಸಮುದಾಯಗಳು ಅಭಿವೃದ್ಧಿಯಾಗುವುದು ಕಷ್ಟಕರವಾಗುತ್ತದೆ. ಕೇಂದ್ರ ಸರ್ಕಾರದಿಂದ 35 ಸಾವಿರ ಕೋಟಿ ರೂ ಹಣ ಬರಬೇಕಿತ್ತು. ಆದರೆ ಅದು ಬಾರದ ಕಾರಣ ಮುಖ್ಯಮಂತ್ರಿಗಳು ಹಣಕಾಸಿನ ಬಿಕ್ಕಟ್ಟಿನ ನಡುವೆ ಆಲೋಚನೆ ಮಾಡಿ ಸಲಹೆಗಳನ್ನು ನೀಡಿ ಎಂದು ಸಭೆ ಆರಂಭದಲ್ಲಿಯೇ ತಿಳಿಸಿದರು ಎಂದು ರಾಮಚಂದ್ರಪ್ಪ ನುಡಿದರು.
ಉಪಾಧ್ಯಕ್ಷ ಆರ್.ವೇಣುಗೋಪಾಲ್ ಮಾತನಾಡಿ, 2001ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕೂಟವು ಹಿಂದುಳಿದ ಸಮಾಜಗಳ ಬಗ್ಗೆ ಅರಿವು ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಹಿಂದುಳಿದ ಎಲ್ಲಾ ಸಮುದಾಯಗಳು ಒಗ್ಗಟ್ಟಾದಾಗ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ರಾಜಕೀಯ ಪಕ್ಷಗಳು ಕೇವಲ ತಮ್ಮ ಜಾತಿಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವತ್ತ ನಿರತರಾಗಿದ್ದಾರೆ ಹೊರತು ಪಕ್ಷಾತೀತವಾಗಿ ಎಲ್ಲಾ ಸಮುದಾಯಗಳನ್ನು ಅಭಿವೃದ್ಧಿ ಮಾಡಬೇಕು ಎಂಬ ಆಲೋಚನೆ ಯಾರು ಮಾಡುತ್ತಿಲ್ಲ. ನಾವೆಲ್ಲಾ ಒಗ್ಗಟ್ಟಾಗಿ ನಿಂತು ನಮಗೆ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಮುಖಂಡ ಧನಿಯಾಕುಮಾರ್ ಮಾತನಾಡಿ ಶೇ.83 ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದ ಸಮುದಾಯಗಳು ಮನಸ್ಸು ಮಾಡಿದರೆ 10 ತಾಲ್ಲೂಕುಗಳಲ್ಲಿ ಕನಿಷ್ಠ 8 ರಿಂದ 9 ಜನ ಶಾಸಕರನ್ನು ಆಯ್ಕೆ ಮಾಡಬಹುದಿತ್ತು. ಶಿಕ್ಷಣ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ, ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದರು.
ಗೊಲ್ಲ ಸಮುದಾಯದ ಮುಖಂಡ ಚಂದ್ರಶೇಖರಗೌಡ ಮಾತನಾಡಿ, ಇಂದಿನ ದಿನಗಳಲ್ಲಿ ಯಾವುದಾದರೂ ಒಂದು ಸಮುದಾಯದ ದಾರ್ಶನಿಕರ ಜಯಂತಿ ನಡೆದರೆ ಅದು ಕೇವಲ ಅವರ ಜಾತಿಗೆ ಸೀಮಿತ ಎಂದು ಬಿಟ್ಟುಬಿಡುತ್ತೇವೆ. ಮೊದಲು ನಾವುಗಳೇ ಎಲ್ಲಾ ಸಮುದಾಯಗಳು ಎಂದು, ಹಿಂದುಳಿದವರು ಎಲ್ಲಾ ಎಂದೇ ಎಂಬ ಭಾವನೆ ತಂದುಕೊಂಡಾಗ ನಮ್ಮಲ್ಲಿ ಒಗ್ಗಟ್ಟು ಮೂಡುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮಾಜದ ಮುಖಂಡರು ಹಾಗೂ ಹಿಂದುಳಿದ ಸಮಾಜ ಒಕ್ಕೂಟದ ಪದಾಧಿಕಾರಿಗಳಾದ ಎಸ್.ಮರಿಬಸವಚಾರ್, ವೆಂಕಟೇಶ್‍ಮೂರ್ತಿ, ಆರ್.ವೇಣುಗೋಪಾಲ್, ಚಂದ್ರಶೇಖರಪ್ಪ, ಆರ್.ವೆಂಕಟರಾಮಯ್ಯ, ಚಿಕ್ಕವೆಂಕಟಯ್ಯ, ಕೃಷ್ಣಮೂರ್ತಿ, ಪುಟ್ಟರಾಜು, ಶಿವಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.