ಕನಿಷ್ಠ 21 ಸಾವಿರ ರೂ. ವೇತನ-10 ಸಾವಿರ ರೂ. ಪಿಂಚಣಿಗೆ ಒತ್ತಾಯ

ಮಧುಗಿರಿ

      ರಾಷ್ಟ್ರೀಯ ಸಮಾನ ಕನಿಷ್ಠ ವೇತನ 21 ಸಾವಿರ ರೂಪಾಯಿ ನೀಡಬೇಕು. ಎಲ್ಲರಿಗೂ ಸರ್ಕಾರದಿಂದಲೆ 10 ಸಾವಿರ ರೂ. ಕನಿಷ್ಠ ಖಾತ್ರಿ ಪಿಂಚಣಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಖಾಸಗಿ ಬಸ್ ನಿಲ್ದಾಣದ ಸಮೀಪ ಕಾರ್ಮಿಕ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೇಡಿಕೆಗಳು:

     ಬೆಲೆ ಏರಿಕೆ ನಿಯಂತ್ರಣಕ್ಕಾಗಿ, ಸಾರ್ವತ್ರಿಕ ಪಡಿತರ ವ್ಯವಸ್ಥೆ, ಅಸಂಘಟಿತ ಕಾರ್ಮಿಕರಿಗೆ ಶಾಸನಬದ್ದ ಭವಿಷ್ಯನಿಧಿ ಮತ್ತು ಪಿಂಚಣಿ, ಸಾಮಾಜಿಕ ಭದ್ರತಾ ಮಂಡಳಿಗಳ ನಿಧಿಗಾಗಿ ಹಾಗೂ ಕಲ್ಯಾಣ ಯೋಜನೆಗಳಿಗೆ ಖಾತ್ರಿ ಪಿಂಚಣಿಗಾಗಿ ಎಲ್ಲರಿಗೂ ಮಾಸಿಕ ಪಿಂಚಣಿ ಕನಿಷ್ಠ 10 ಸಾವಿರ ರೂಪಾಯಿ ನೀಡಬೇಕು.

     ಕಾರ್ಪೋರೇಟ್ ಬಂಡವಾಳ ಪರವಿದ್ದು, ಕಾರ್ಮಿಕ ವಿರೋಧಿಯಾದ ಕಾರ್ಮಿಕ ಕಾನೂನುಗಳನ್ನು ಕೈ ಬಿಟ್ಟು, ಕಾರ್ಮಿಕ ಪರ ಕಾನೂನುಗಳು ತಕ್ಷಣ ಜಾರಿಯಾಗಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಬೇಕು. ಸ್ಕೀಂ ನೌಕರರನ್ನು ನೌಕರರೆಂದು ಪರಿಗಣಿಸಬೇಕೆಂಬ ಭಾರತ ಕಾರ್ಮಿಕ ಸಮ್ಮೇಳನದ ತೀರ್ಮಾನವನ್ನು ಜಾರಿ ಮಾಡಬೇಕು.

   ಸ್ಕೀಂ ಯೋಜನೆಗಳ ಖಾಸಗೀಕರಣ ವಿರೋಧಿಸಿ ಮತ್ತಿತರರ ಬೇಡಿಕೆಗಳನ್ನು ಈಡೇರಿಸಬೇಕು ಈ ಸಂದರ್ಭದಲ್ಲಿ ಆಗ್ರಹಿಸಿದರು.ನಿರ್ಣಾಯಕ ಆಯಕಟ್ಟಿನ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ವಿರೋಧಿಸಿ ವರ್ಗವನ್ನು ಒಂದುಗೂಡಿಸಿ ಹೋರಾಟವನ್ನು ತೀವ್ರಗೊಳಿಸಿ ನೀತಿಗಳನ್ನು ಅದರ ಹಿಂದಿರುವ ರಾಜಕೀಯವನ್ನು ಹಿಮ್ಮೆಟ್ಟಿಸಿ ಕಾರ್ಮಿಕ ಹಕ್ಕುಗಳನ್ನು ಬಲಪಡಿಸಲು “ಕಾರ್ಮಿಕ ಹಕ್ಕುಗಳನ್ನು ಉಳಿಸಿ, ಬನ್ನಿ ಭಾಗವಹಿಸಿ, ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಿ, ಕಾರ್ಮಿಕ ವರ್ಗದ ಐಕ್ಯತೆ ಚಿರಾಯುವಾಗಲಿ, ಇಂಕ್ವಿಲಾಬ್ ಜಿಂದಾಬಾದ್, ಸಿಐಟಿಯು ಜಿಂದಾಬಾದ್’’ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

   ಪ್ರತಿಭಟನೆಯಲ್ಲಿ ಎಂ.ಡಿ ಪಾರ್ವತಮ್ಮ, ಎಸ್ ಸುಕನ್ಯ, ಬಿಜಿ ಸರೋಜ, ನಾಗರತ್ನ, ಬೆಟ್ಟಪ್ಪ, ಅಶ್ವತ್ಥಪ್ಪ, ಸುಬ್ರಹ್ಮಣ್ಯ, ಲಕ್ಷೀಪತಿ, ಮಂಗಮ್ಮ, ರೇಖಾ, ರೈತ ಸಂಘದ ಶಂಕರಪ್ಪ, ಸೇರಿದಂತೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಅಕ್ಷರ ದಾಸೋಹ, ಕಟ್ಟಡ ಕಾರ್ಮಿಕರು, ಗ್ರಾಮ ಪಂಚಾಯತಿ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ