ಬೆಂಗಳೂರು
ತಕ್ಷಣವೇ ವೇತನ ಪರಿಷ್ಕರಣೆಗೆ ಆಗ್ರಹಿಸಿ ಅ. ೧೪ ರಿಂದ ಹಿಂದೂಸ್ತಾನ್ ಏರೊನಾಟಿಕ್ ಲಿಮಿಟೆಡ್ (ಎಚ್‌ಎಎಲ್)ನ ನೌಕರರು ಅ. ೧೪ ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.ವೇತನ ಪರಿಷ್ಕರಣೆ ಕೋರಿ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲದಿರುವುದರಿಂದ ಅನಿವಾರ್ಯವಾಗಿ ಮುಷ್ಕರ ನಡೆಸುವುದನ್ನು ಬಿಟ್ಟರೆ ಮುಂದೆ ಬೇರೆ ದಾರಿ ಇಲ್ಲ ಎಂದು ಎಚ್‌ಎಎಲ್‌ನ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯದೇವ ಚಂದ್ರಶೇಖರ್ ತಿಳಿಸಿದ್ದಾರೆ.
ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ವ್ಯವಸ್ಥಾಪಕ ಮಂಡಳಿ ನೀಡಿರುವ ಆಹ್ವಾನ ಮತ್ತು ಒಕ್ಕೂಟ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಅಜಗಜಾಂತರ ವ್ಯತ್ಯಾಸವಿದೆ. ವ್ಯವಸ್ಥಾಪಕ ಮಂಡಳಿ ಮುಂದಿಟ್ಟಿರುವ ಪ್ರಸ್ತಾಪವನ್ನು ಒಪ್ಪಿಕೊಂಡರೆ ನೌಕರರಿಗೆ ಸಾಕಷ್ಟು ನಷ್ಟವಾಗಲಿದೆ. ಆದರೆ, ವ್ಯವಸ್ಥಾಪಕ ಮಂಡಳಿ ನೌಕರರ ಬೇಡಿಕೆಯನ್ನು ನ್ಯಾಯ ಸಮ್ಮತವಾಗಿಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ನೌಕರರ ಬೇಡಿಕೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ರಕ್ಷಣಾ ಸಚಿವಾಲಯದ ಅಧಿಕಾರಿಗಳಿಗೆ ಇಷ್ಟವಿಲ್ಲ, ಈ ಹಿನ್ನೆಲೆಯಲ್ಲಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಹಿಂದೂಸ್ತಾನ್ ಏರೊನಾಟಿಕ್ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದರು.
ಡಿ. ೩೧-೨೦೧೬ ರಿಂದ ನೌಕರರ ವೇತನವನ್ನು ಪರಿಷ್ಕರಣೆ ಮಾಡಿಲ್ಲ. ಕೂಡಲೇ ಎಚ್‌ಎಎಲ್ ನೌಕರರ ವೇತನ ಪರಿಷ್ಕರಣೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ