ಬುಗುಡನಹಳ್ಳಿ ಭರ್ತಿ : ಮೊದಲ ಹಂತವಾಗಿ ಆಯ್ದೆಡೆಗಳಲ್ಲಿ ಹೇಮಾವತಿ

ತುಮಕೂರು
ವಿಶೇಷ ಲೇಖನ :ಆರ್.ಎಸ್.ಅಯ್ಯರ್

      ತುಮಕೂರು ನಗರದ ನಾಗರಿಕರಿಗೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿಯ ಹೇಮಾವತಿ ಜಲಸಂಗ್ರಹಾಗಾರವು ಇದೀಗ ಭರ್ತಿ ಆಗಿರುವ ಹಿನ್ನೆಲೆಯಲ್ಲಿ, ತುಮಕೂರು ನಗರದ ಆಯ್ದ ಬಡಾವಣೆಗಳÀಲ್ಲಿ ಮೊದಲ ಹಂತದಲ್ಲಿ ಪ್ರಯೋಗಾತ್ಮಕವಾಗಿ, ಸಂಕ್ರಾಂತಿ ಹಬ್ಬದ ಬಳಿಕ ಪ್ರತಿನಿತ್ಯ ಕುಡಿಯುವ ನೀರನ್ನು ಪೂರೈಕೆ ಮಾಡುವ ಬಗ್ಗೆ ಸಿದ್ಧತೆ ನಡೆದಿದೆ.
      ನಗರದ ಜನತೆಗೆ 24 ಗಂಟೆಗಳ ಕಾಲ ವಾರದ ಏಳೂ ದಿನಗಳು ನೀರನ್ನು ಪೂರೈಸಲು ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಲಿ (ಕೆ.ಯು.ಡಬ್ಲ್ಯು.ಎಸ್.ಡಿ.ಬಿ.)ಯು ಈಗಾಗಲೇ ನಗರಾದ್ಯಂತ ನೂತನ ಪೈಪ್ ಲೈನ್ ಕಾಮಗಾರಿ ಮುಗಿಸಿದ್ದು, ಮನೆ-ಮನೆಗೆ ಮೀಟರ್ ಸಹಿತ ಹೊಸ ನಲ್ಲಿ ಸಂಪರ್ಕವನ್ನು ನೀಡಿದೆ. ಇದನ್ನು ಬಳಸಿಕೊಂಡು ಪ್ರತಿನಿತ್ಯ ಒಂದು ಗಂಟೆಯಷ್ಟು ಅವಧಿ ಹೇಮಾವತಿ ನೀರನ್ನು ಸರಬರಾಜು ಮಾಡಲು ತುಮಕೂರು ಮಹಾನಗರ ಪಾಲಿಕೆಯು ಮಂಡಲಿಯ ಜೊತೆಗೂಡಿ ಯೋಜಿಸುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ನಗರದ ಆಯ್ದ ಪ್ರದೇಶಗಳಲ್ಲಿ ಜ.15 ರ ಸಂಕ್ರಾಂತಿ ಹಬ್ಬದ ಬಳಿಕ ಈ ನೂತನ ಮಹತ್ವಾಕಾಂಕ್ಷಿ ಪ್ರಯೋಗ ಜಾರಿಗೆ ಬರಲಿದೆ. 
       ತುಮಕೂರು ನಗರವು ಒಟ್ಟು 35 ವಾರ್ಡ್‍ಗಳನ್ನು ಹೊಂದಿದೆ. ಇವೆಲ್ಲಕ್ಕೂ 24/7 ನೀರು ಪೂರೈಕೆ ಮಾಡಲು ಅನುಕೂಲವಾಗುವಂತೆ ಮಂಡಲಿಯು ಈಗಾಗಲೇ ನಗರದಲ್ಲಿ 37 ವಲಯ (ಡಿ.ಎಂ.ಎ.- ಡಿಸ್ಟ್ರಿಕ್ಟ್ ಮೀಟರಿಂಗ್ ಏರಿಯಾ) ಗಳನ್ನು ವ್ಯವಸ್ಥೆ ಮಾಢಿಕೊಂಡಿದೆ. ಪ್ರಸ್ತುತ ಇಂತಹ 15 ಡಿ.ಎಂ.ಎ.ಗಳು ಸಂಪೂರ್ಣ ಸಿದ್ಧವಿದ್ದು, ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಮೊದಲ ಹಂತದ ಪ್ರಯೋಗಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಹಂತ-ಹಂತವಾಗಿ ಮಿಕ್ಕುಳಿದ ಎಲ್ಲ ಡಿ.ಎಂ.ಎ. ವ್ಯಾಪ್ತಿಯಲ್ಲೂ ಹೇಮಾವತಿ ನೀರನ್ನು ದಿನವೂ ಸರಬರಾಜು ಮಾಡಲು ಯೋಜಿಸಲಾಗುತ್ತಿದೆ ಎಂದು ಮೂಲಗಳು ಹೇಳುತ್ತಿವೆ. . 
      ಈ ಹೊಸ ವ್ಯವಸ್ಥೆಯು ಜಾರಿಗೆ ಬಂದರೆ ಆಯಾ ಬಡಾವಣೆಯ ವಾಲ್ವ್‍ಮನ್ ನೀರು ಬಿಡಲು ಗಲ್ಲಿ-ರಸ್ತೆಗಳನ್ನು ಸುತ್ತಬೇಕಿಲ್ಲ. ಆಯಾ ಬಡಾವಣೆಯ ನೀರಿನ ಟ್ಯಾಂಕ್ ಬಳಿ ಅಳವಡಿಸಿರುವ ವಾಲ್ವ್ ಅನ್ನು ತಿರುಗಿಸಿದರೆ ಸಾಕು; ನಿಗದಿತ ಪ್ರದೇಶದ ನಲ್ಲಿ ಸಂಪರ್ಕಗಳಿಗೆ ತಕ್ಷಣವೇ ನೀರು ಹರಿಯಲಿದೆ. ಈ ಹೊಸ ವ್ಯವಸ್ಥೆಯಲ್ಲಿ ನೀರು ಪೈಪ್‍ಲೈನ್‍ನಲ್ಲಿ ವ್ಯರ್ಥ (ಲೀಕೇಜ್) ಆಗಲು ಅವಕಾಶವಿರದು. ನೀರಿನ ದುರುಪಯೋಗವೂ ಸಾಧ್ಯವಾಗದು. ಅಕ್ರಮಗಳಿಗೂ ಸಾಧ್ಯವಾಗದು. ನಿಗದಿತ ಸಮಯ ಎಲ್ಲರಿಗೂ ಸಮಾನವಾಗಿ ನೀರು ದೊರಕಲಿದೆ ಎಂಬುದು ಅಧಿಕಾರಿಗಳ ಅನಿಸಿಕೆ.  
      ಈಗ ಮೂರು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಆದರೆ ಇನ್ನುಮುಂದೆ ನಿಗದಿತ ಪ್ರದೇಶಗಳಲ್ಲಿ ಪ್ರತಿನಿತ್ಯ ಒಂದು ಗಂಟೆ ಅವಧಿ ನೀರು ಪೂರೈಕೆ ಆಗಲಿದೆ. ಇದಕ್ಕೆ ಮೂಲ ಕಾರಣ ಮೊದಲನೆಯದಾಗಿ ಈಗಾಗಲೇ ನಗರಾದ್ಯಂತ 24/7 ಕುಡಿಯುವ ನೀರು ಪೂರೈಕೆಗಾಗಿ ಹೊಸದಾಗಿ ನೀರಿನ ಪೈಪ್ ಹಾಗೂ ಮನೆ-ಮನೆಗೆ ಮೀಟರ್ ಅಳವಡಿಸಿರುವುದು; ಎರಡನೆಯದಾಗಿ ಈ ಬಾರಿ ಬುಗುಡನಹಳ್ಳಿ ಜಲಸಂಗ್ರಹಾಗಾರ ತುಂಬಿ ತುಳುಕುತ್ತಿರುವುದು; ಮೂರನೆಯದಾಗಿ ಫೆಬ್ರವರಿ ಮಾಹೆಯಲ್ಲಿ ಮತ್ತೊಮ್ಮೆ ಹೇಮಾವತಿ ನಾಲೆಯಿಂದ ಬುಗುಡನಹಳ್ಳಿಗೆ ನೀರು ಹರಿದು ಬರುವ ಖಚಿತತೆ ಇರುವುದು.
      ಇನ್ನು ಮುಂದೆ ದಿನವೂ ಒಂದು ಗಂಟೆ ಕಾಲ ಹೊಸ ಪೈಪ್‍ಲೈನ್ ಮೂಲಕ ನೀರು ಪೂರೈಕೆಯಾಗುವುದಾದರೆ, ಈವರೆಗೆ ಬಳಕೆಯಲ್ಲಿರುವ ಹಳೆಯ ಪೈಪ್‍ಲೈನ್ ಮೂಲಕ ನೀರು ಸರಬರಾಜಾಗುವುದನ್ನು ಸಹಜವಾಗಿಯೇ ಸ್ಥಗಿತಗೊಳಿಸಲಾಗುತ್ತದೆ. ಏನಿದ್ದರೂ ಈ ಹೊಸ ವ್ಯವಸ್ಥೆಯ ಮೂಲಕವೇ ನೀರು ಸರಬರಾಜಾಗಲಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap