ಹರಪನಹಳ್ಳಿ:
ಟೀನ್ ಮಾಂಕ್ ಸಲ್ಯುಷನ್ಸ್ ಇಂಟರ್‍ನ್ಯಾಷನಲ್ ಆನ್‍ಲೈನ್ ಟ್ರೇಡಿಂಗ್ ಕಂಪನಿಯ ಸಹಯೋಗದೊಂದಿಗೆ ಏರ್ಪಡಿಸಿದ್ದ ತೀಕ್ಷ್ಮಣ ಪ್ರತ್ಯಂಗರ ದೇವಿ ಹೋಮ ಅದ್ದೂರಿಯಾಗಿ ನೆರವೇರಿತು.
ರಾಜಕಾರಣಿಗಳು, ರಿಯಲ್ ಎಸ್ಟೇಟ್, ಫೈನಾನ್ಸಿಯರ್ಸ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಗುರೂಜಿ ಅವರು ನಿರ್ಮಿಸಿದ್ದ ಹೋಮಕ್ಕೆ ಸಾಂಬಾರು ಪದಾರ್ಥ, 1008 ಕೆ.ಜಿ.ಒಣ ಮೆಣಸಿನಕಾಯಿ ಅರ್ಪಿಸಿ ಲೋಕ ಕಲ್ಯಾಣಕ್ಕೆ ಪ್ರಾರ್ಥನೆ ಸಲ್ಲಿಸಿದರು.
ಕಳೆದ ಹದಿನೈದು ದಿನದಿಂದ ಸಿದ್ಧತೆ ಆರಂಭಿಸಿದ್ದ ಆಯೋಜಕರು ಯಜ್ಞ ನಡೆಯುವ ಸ್ಥಳದಲ್ಲಿ ಪುಷ್ಪಾಲಂಕಾರ ಮಾಡಿದ್ದರು. ವೀಕ್ಷಿಸಲು ಆಗಮಿಸುವ ಭಕ್ತರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಆರಂಭದಲ್ಲಿ ಸ್ಥಳಕ್ಕೆ ಧಾವಿಸಿ ಗುರೂಜಿ ಅಘೋರ ಟೀನ್ ಗಣಪತಿ ರ್ಯಾಟ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು, ಅವರಿಗೆ ಭಸ್ಮದ ಅಭಿಷೇಕ ನಡೆಯಿತು.
ಅಘೋರ ಟೀನ್ ಗಣಪತಿ ರ್ಯಾಟ್ ಮಾತನಾಡಿ, ಅಮಾವಾಸ್ಯೆ ದಿನದಂದು ತೀಕ್ಷ್ಮ ಪ್ರತ್ಯಂಗರ ಹೋಮ ಮಾಡುವುದರಿಂದ ಅಂದುಕೊಂಡಂತೆ ದೇವಿ ಈಡೇರಿಸುತ್ತಾಳೆ. ಪುರಾತನ ಕಾಲದಿಂದ ಭರತ ಖಂಡದ 29 ರಾಷ್ಟ್ರಗಳಲ್ಲಿ 108 ಕೆಜಿಯಿಂದ 10008 ಕೆಜಿ ವರೆಗಿನ ಹೋಮವನ್ನು ನೆರವೇರಿಸಿಕೊಂಡು ಬರುತ್ತಿದ್ದು ಪಟ್ಟಣದಲಿ ತೀಕ್ಷ್ಣ ಪ್ರತ್ಯಂಗರ ಹೋಮ ನಡೆಸುತ್ತಿರುವುದಾಗಿ ತಿಳಿಸಿದರು.
ಹೋಮದಿಂದ ರಾಜಕೀಯ, ಸಿನಿಮಾ, ಫೈನಾನ್ಸಿಯರ್ಸ್‍ಗಳು ತಮ್ಮ ವ್ಯವಹಾರದ ಅಭಿವೃದ್ದಿ ಹಾಗೂ ಪ್ರತಿಯೊಬ್ಬರ ಆಯುಷ್ಯ ವೃದ್ದಿ ಆಗುತ್ತದೆ ಎಂದು ತಿಳಿಸಿದರು.
ಮುಖಂಡ ಹೆಚ್.ಎ.ಸುರೇಂದ್ರಬಾಬು ಮಾತನಾಡಿ, ತಾಲೂಕಿನಲ್ಲಿ ಸಮಾನ ಮನಸ್ಕರು ಲೋಕಕಲ್ಯಾಣಾರ್ಥ ಹೋಮ ಮಾಡಲು ಕೇಳಿದಾಗ, ಗುರೂಜಿ ಅವರು ಸ್ವತಃ ಯಜ್ಞ ನಡೆಸಿಕೊಟ್ಟಿದ್ದಾರೆ. ಇದರಿಂದ ಸಕಲರಿಗು ಒಳ್ಳೆಯದಾಗಲಿ, ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ದವಾಗಲು ನಾವು ಪ್ರಾರ್ಥಿಸಿದ್ದಾಗಿ ತಿಳಿಸಿದರು.
ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಮಾತನಾಡಿ. 1008 ಕೆಜಿ ಒಣಮೆಣಸಿನಕಾಯಿ ಹೋಮದಲ್ಲಿ ಹಾಕಿದಾಗ ಇಡೀ ಊರೇ ಘಾಟಿನಲ್ಲಿ ತುಂಬಿ ಹೋಗುತ್ತದೆ ಎಂದುಕೊಂಡಿದ್ದ ನಮಗೆ ಹೋಮದಿಂದ ಎದ್ದ ಹೊಗೆ ಪರಿಮಳಯುಕ್ತವಾಗಿದ್ದದ್ದು ಆಶ್ಚರ್ಯ ತಂದಿತ್ತು. ಲೋಕ ಕಲ್ಯಾಣಕ್ಕಾಗಿ ಇಂತಹ ಮಹಾಯಜ್ಞ ನಮ್ಮ ಪಟ್ಟಣದಲ್ಲಿ ಜರುಗಿದ್ದು ನಮ್ಮ ಪುಣ್ಯ ಎಂದರು.
ಹೋಮಕ್ಕಾಗಿ ಬಳಸಿದ ಸಾಮಗ್ರಿಗಳು:
1008 ಕೆಜಿ ಒಣಮೆಣಸಿನಕಾಯಿ, ಬೆಲ್ಲ, 1008 ತೆಂಗಿನಕಾಯಿ, ಸೇಬು, ಮೋಸಂಬಿ, ದಾಳಿಂಬೆ, ಬಾದುಷಾ, ಜಹಂಗೀರ್, ಮೈಸೂರುಪಾಕ್, ರಮ್ ಟೆಟ್ರಾಪ್ಯಾಕ್, ನಿಂಬೆಹಣ್ಣು, ದೃಷ್ಟಿಗೊಂಬೆ, 1008 ಕೆಜಿ ಎಲ್ಲಾ ತರಹದ ತರಕಾರಿ, 7 ಕೆ.ಜಿ ಅರಿಷಿಣ, ಕುಂಕುಮ, ಗೊಡಂಬಿ, ಬಾದಾಮಿ, ದ್ರಾಕ್ಷಿ, ಏಲಕ್ಕಿ, ಲವಂಗ, ಉಪ್ಪು, ಮೆಣಸು, 11 ಟನ್ ಕಟ್ಟಿಗೆ, 7 ಬಣ್ಣದ ಅನ್ನ, 7 ತರಹದ ಹೂವುಗಳು, 7 ಬಾಳೆಗೊನೆಗಳು 54 ಜೆಜಿ ತುಪ್ಪಾ, 55 ಲೀಟರ್ ಪಂಚತೈಲ, 7 ಕೆಜಿ ಬೆಳ್ಳುಳ್ಳಿ, 108 ತ್ರಿಶೂಲ, 108 ಬಾಗೀನ, ಸೀರೆ ಕುಪ್ಪಸ, 7 ಕೆಜಿ ಕರ್ಪೂರ ಇತ್ಯಾಧಿ ಸಾಮಗ್ರಿಗಳನ್ನು ಹೋಮಕುಂಡಕ್ಕೆ ಅರ್ಪಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
