ಬೆಂಗಳೂರು
ರಾಜ್ಯದಲ್ಲಿ ಮತ್ತೊಂದು ವಂಚನೆ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದ್ದು, ನಮಗೆ ಹಣ ಮರುಪಾವತಿಯಾಗಿಲ್ಲ ಎಂಬ ಅನೇಕ ಹೂಡಿಕೆದಾರರ ಆರೋಪದ ಹಿನ್ನೆಲೆಯಲ್ಲಿ ಕಣ್ವ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಕಣ್ವ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ಗುರುವಾರ ನಾಲ್ಕು ದೂರುಗಳು ದಾಖಲಾಗಿದ್ದವು. ಹೀಗಾಗಿ ನಿನ್ನೆ ವಿಚಾರಣೆಗೆ ಕರೆಸಿದ್ದ ಪೊಲೀಸರು ತಡರಾತ್ರಿಯವರೆಗೂ ವಿಚಾರಣೆ ನಡೆಸಿ, ಬಳಿಕ ನಂಜುಡಯ್ಯ ಅವರನ್ನು ಬಂಧಿಸಿದ್ದಾರೆ.ಇತ್ತಿಚೆಗಷ್ಟೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಐಎಂಎ ಕಂಪನಿಯ ಬಹುಕೋಟಿ ವಂಚನೆಯ ಬಳಿಕ ಕಣ್ವ ಗ್ರೂಪ್ನಲ್ಲಿ ಹಣ ತೊಡಗಿಸಿದವರು ಭಯಗೊಂಡಿದ್ದರು. ಇದಾದ ಬಳಿಕ ಕಣ್ವ ಗ್ರೂಪ್ ಮಾಲೀಕನನ್ನು ಹಣ ಮರಳಿಸುವಂತೆ ಒತ್ತಾಯಿಸಿದ್ದರು. ಆದರೆ, ಕೆಲವರಿಗೆ ಹಣವನ್ನು ಹಿಂದಿರುಗಿಸಿದ್ದ ನಂಜುಂಡಯ್ಯ, ಅನೇಕರಿಗೆ ಹಣ ಮರುಪಾವತಿ ಮಾಡಿರಲಿಲ್ಲ. ಇದೇ ವಿಚಾರವಾಗಿ ನಿನ್ನೆ ಪ್ರತಿಭಟನೆ ಕೂಡ ನಡೆಸಿ, ಬಸವೇಶ್ವರ ನಗರ ಪೊಲೀಸರಿಗೆ ದೂರು ನೀಡಿದ್ದರು.
ಸದ್ಯ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ 350 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಮತ್ತು ವ್ಯವಹಾರ ನಡೆದಿದೆ ಎನ್ನಲಾಗಿದೆ. ಕಣ್ವ ಗ್ರೂಪ್ಸ್ನಲ್ಲಿ ನಾಲ್ಕು ಸಾವಿರ ಕಾರ್ಮಿಕರು ಕೆಲಸ ಮಾಡುತಿದ್ದಾರೆ. ಇದೀಗ ಎಲ್ಲರ ಬದುಕು ಅತಂತ್ರವಾಯ್ತು ಎಂಬ ಆರೋಪವೂ ಕೇಳಿ ಬರುತ್ತಿದೆ. ಹೀಗಾಗಿ ಪ್ರಕರಣದ ತನಿಖೆ ಸಿಸಿಬಿಗೆ ಹಸ್ತಾಂತರವಾಗುವ ಸಾಧ್ಯತೆ ದಟ್ಟವಾಗಿದೆ ಲಿಮಿಟೆಡ್ನಲ್ಲಿ 18 ಲಕ್ಷಗಳನ್ನು ಹೂಡಿಕೆ ಮಾಡಿದ್ದ ವಿಕ್ಕಿ ಎಂಬುವವರಿಗೆ 12.5ರ ದರದಲ್ಲಿ ಬಡ್ಡಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ಅವರಿಗೆ ಕಳೆದ 3 ತಿಂಗಳಿನಿಂದ ಬಡ್ಡಿ ನೀಡಿಲ್ಲ. ಬಡ್ಡಿ ಕೇಳಿದರೆ ಇಲ್ಲಸಲ್ಲದ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂದು ದೂರಿದ್ದಾರೆ.
ವಿಮಾ ಏಜೆಂಟ್ ಆಗಿರುವ ನೆಲಮಂಲದ ಅಪ್ರಮೇಯ ಎಂಬುವರು 2014ರಲ್ಲಿ 50 ಸಾವಿರ ಹೂಡಿಕೆ ಮಾಡಿದ್ದು, 5 ವರ್ಷಗಳಲ್ಲಿ ಅದು 1 ಲಕ್ಷವಾಗಿ ಬರಬೇಕಾಗಿದೆ. ಕಳೆದ ಏಪ್ರಿಲ್ನಲ್ಲೇ ಹಣ ಬರುವ ಮಾಹಿತಿ ನೀಡಿದ್ದರಾದರೂ ಇಲ್ಲಿಯವರೆಗೆ ಹಣ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಸಿದ್ಧ ಉಡುಪುಗಳ ಮಾರಾಟಗಾರ ಕಣ್ವಾ ಫ್ಯಾಶನ್ಗೆ ಬಟ್ಟೆಯನ್ನು ಪೂರೈಸುತ್ತಿದ್ದು, ಅವರಿಗೆ 8 ಲಕ್ಷ ರೂ.ಗಳ ಬಾಕಿ ಹಣ ನೀಡಬೇಕಾಗಿದೆ. ಹುಣಸೂರು ಜಿಲ್ಲೆಯ ಕೊರಟಗೆರೆಯಲ್ಲಿರುವ ಗಾರ್ಮೆಂಟ್ ಕಾರ್ಖಾನೆ ಮುಚ್ಚಲಾಗಿದ್ದು, ಇಲ್ಲಿಯವರೆಗೆ ನನಗೆ ಹಣ ನೀಡಿಲ್ಲ ಎಂದು ದೂರಿದ್ದಾರೆ.
ಕಣ್ವಾ ಗ್ರೂಪ್ನಲ್ಲಿ ಕಣ್ವಾ ಡೆವಲಪಱ್ಸ್, ಕಣ್ವಾ ಗ್ರೂಪ್, ಕಣ್ವಾ ಟೂಱ್ಸ್ ಅಂಡ್ ಟ್ರಾವೆಲ್ಸ್, ಕಣ್ವಾ ಸ್ಟಾರ್ ರೆಸಾರ್ಟ್ ಇನ್ನಿತರ ವ್ಯವಹಾರಗಳನ್ನು ನಡೆಸಲಾಗುತ್ತಿದೆ.ವಂಚನೆ ಸಂಬಂಧ ದೂರು ದಾಖಲಿಸಿ ಕಣ್ವಾ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ನ ಆಡಳಿತ ಮಂಡಳಿಯ ಮುಖ್ಯಸ್ಥರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ರಮೇಶ್ ಬನೋತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








