ಬೆಂಗಳೂರು
ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಪ್ರಯಾಣಿಕರ ಮುಂಗಡ ಕಾಯ್ದಿರಿಸಿದ್ದ ಪ್ರಯಾಣಿಕರಲ್ಲಿ ಶೇ 32 ರಷ್ಟು ಮಂದಿ ಟಿಕೆಟ್ ರದ್ದುಗೊಳಿಸಿದ್ದಾರೆ
ಸಾಮಾನ್ಯವಾಗಿ ಪ್ರತಿದಿನ ಟಿಕೆಟ್ ರದ್ಧತಿ ಪ್ರಮಾಣ ಶೇ 6 ರಿಂದ 8 ರಷ್ಟು ಇರುತ್ತಿತ್ತು. ಆದರೆ ಗುರುವಾರ ಒಂದೇ ದಿನ ಈ ಪ್ರಮಾಣ ಶೇ 32 ರಷ್ಟು ಏರಿಕೆಯಾಗಿದೆ. ಒಟ್ಟು 7150 ಮಂದಿ ಪ್ರಯಾಣಿಕರು ತಮ್ಮ ಪ್ರಯಾಣ ರದ್ದುಮಾಡಿದ್ದಾರೆ.ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯವಾಣಿ ಸ್ಥಾಪಿಸಿದ್ದು, ಈ ಸಹಾಯವಾಣಿ ಕೇಂದ್ರಕ್ಕೆ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಹಾಗೂ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮೈಸೂರು (ಗ್ರಾಮಾಂತರ), ಮಂಗಳೂರು, ಪುತ್ತೂರು, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಕೇಂದ್ರೀಯ ವಿಭಾಗ ಮತ್ತು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ, ವಿಭಾಗೀಯ ಸಂಚಲನಾಧಿಕಾರಿಗಳಿಗೆ, ಖುದ್ದು ದೂರವಾಣಿಕರೆ ಮಾಡಿ ಪ್ರವಾಹ ಸ್ಥಳಗಳಲ್ಲಿನ ಬಸ್ ಕಾರ್ಯಚರಣೆ, ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಪ್ರವಾಹ ಸಂತ್ರಸ್ಥರಿಗೆ ಬಸ್ಸುಗಳಲ್ಲಿ ಪರಿಹಾರ ವಸ್ತುಗಳನ್ನು ಉಚಿತವಾಗಿ ಸಾಗಿಸಲು ಅನುಮತಿ ನೀಡಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಭಾಗ ಮಟ್ಟದಲ್ಲಿ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕವಹಿಸಿ, ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಬದಲಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವಾಗ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರವಾಹ ಸಮಸ್ಯಾತ್ಮಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಕೇಂದ್ರ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಭಾಯಿಸಬೇಕು. ರಜೆ ಮೇಲೆ ತೆರಳಬಾರದು ಎಂದು ಸೂಚಿಸಿದರು.
ವಾರಾಂತ್ಯದ ಧೀರ್ಘಾವಧಿ ರಜೆ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವುದು, ಬಸ್ ಕಾರ್ಯಾಚರಣೆಗೂ ಮೊದಲು ಸದರಿ ಮಾರ್ಗದಲ್ಲಿನ ರಸ್ತೆ, ಮಳೆ, ಸೇತುವೆ, ನೀರಿನ ಹರಿವು ಮುಂತಾದವುಗಳ ಬಗ್ಗೆ ಕೂಲಂಕುಷ ಮಾಹಿತಿಯನ್ನು ಕ್ರೋಡೀಕರಿಸಿ, ನಂತರ ಮುಂದುವರೆಯಬೇಕು ಎಂದು ಆದೇಶಿಸಿದರು.
ಪ್ರಯಾಣಿಕರನ್ನೊಳಗೊಂಡ ಯಾವುದೇ ಬಸ್ಸು, ಪ್ರವಾಹ, ಮಳೆಗೆ ಸಿಲುಕಿದಲ್ಲಿ, ತಕ್ಷಣ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿ ತುರ್ತು ಕ್ರಮ ವಹಿಸಬೇಕು. ಸಾರ್ವಜನಿಕರು ಬಸುಗಳ ಕಾರ್ಯಾಚರಣೆ, ರದ್ಧತ, ಮಾರ್ಗ ಬದಲಾವಣೆ, ಪರಿಹಾರ ಸಾಮಗ್ರಿಗಳ ಉಚಿತ ರವಾನೆ, ಇನ್ನಿತರ ಮಾಹಿತಿ ಸಂಬಂಧ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.