ಬಳ್ಳಾರಿಯಲ್ಲಿ ಲಾಕ್‍ಡೌನ್ ಸಡಿಲಿಕೆ, ನಿರ್ಬಂಧ ಮುಂದುವರಿಕೆ : ಡಿಸಿ ನಕುಲ್

ಬಳ್ಳಾರಿ:

     ಕೇಂದ್ರ, ರಾಜ್ಯ ಸರ್ಕಾರಗಳ ಮಾರ್ಗದರ್ಶನದಂತೆ ಬಳ್ಳಾರಿ ಜಿಲ್ಲೆಯಲ್ಲೂ ಲಾಕ್‍ಡೌನ್‍ಗೆ ಸಡಿಲಿಕೆ ಮಾಡಲಾಗಿದ್ದು, ಸಮಯದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಹಾಗಂತ ಎಲ್ಲ ವಾಣಿಜ್ಯ ಮಳಿಗೆಗಳು ತೆಗೆಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದರು.

     ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೇ ಬಡಜನರಿಗೆ ಆದಾಯದ ಕೊರತೆಯಾಗಿದು, ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಗೆ ಅವಕಾಶ ನೀಡಲಾಗಿದೆ. ಹೊಟೇಲ್‍ಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ನೀಡಲಾಗಿದೆ. ಕಾಲುವೆ ಸೇರಿ ಇತರೆ ದೊಡ್ಡ ದೊಡ್ಡ ಕಾಮಗಾರಿಗಳಿಗೆ ಜಿಲ್ಲಾಡಳಿತದಿಂದ ಅನುಮತಿ ಪಡೆದು ಕಾರ್ಯಾರಂಭ ಮಾಡಬಹುದಾಗಿದೆ. ಸ್ವಂತ ವಾಹನದಿಂದ ಜಿಲ್ಲೆಯ ಒಳಗೆ ಸಂಚರಿಸಬಹುದಾಗಿದ್ದು, ಜಿಲ್ಲೆಯಿಂದ ಜಿಲ್ಲೆಗೆ ಸಂಚಾರವಿಲ್ಲ.

     ಸಾರಿಗೆ ಬಸ್, ಆಟೋ ಸೇರಿ ಪ್ರಯಾಣಿಕ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಧಾರ್ಮಿಕ ಕಾರ್ಯಕ್ರಮಗಳಿಗೂ ಅವಕಾಶವಿಲ್ಲ. ಸಾಲಾಗಿರುವ ವಾಣಿಜ್ಯ ಮಳಿಗೆಗಳು ತೆಗೆಯಲು ನಿರ್ಬಂಧವಿದ್ದು, ಕೇವಲ ಸಿಂಗಲ್ ಇರುವ ಮಳಿಗೆಯನ್ನಷ್ಟೇ ತೆಗೆಯಬಹುದಾಗಿದೆ ಎಂದು ವಿವರಿಸಿದ ಡಿಸಿ ನಕುಲ್ ಅವರು, ಸೋಮವಾರ ನಿಯಮ ಉಲ್ಲಂಘಿಸಿದ 48 ಆಟೋಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯ ಹಡಗಲಿ, ಸಿರುಗುಪ್ಪ ತಾಲೂಕುಗಳಲ್ಲಿ ಒಟ್ಟು 304 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ಜಂಟಿ ಸಮೀಕ್ಷೆಯನ್ನೂ ಮಾಡಲಾಗಿದೆ. ಈ ವಾರದಲ್ಲಿ ಬಾಧಿತ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಲಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಭತ್ತ 2361 ಹೆಕ್ಟೇರ್ ಹಾನಿಯಾಗಿದ್ದು, ಸಿರಗುಪ್ಪವೊಂದರಲ್ಲಿಯೇ 2014 ಹೆಕ್ಟೇರ್ ಹಾನಿಯಾಗಿದ್ದು, ಸಮೀಕ್ಷೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

     ಬಳ್ಳಾರಿ ನಗರದ ವಿವಿಧೆಡೆ ತಾತ್ಕಾಲಿಕವಾಗಿ ಮಾಡಲಾಗಿರುವ ತರಕಾರಿ ಮಾರಾಟ ವ್ಯವಸ್ಥೆ ಮೇ 3ರವರೆಗೆ ಮುಂದುವರಿಯಲಿದ್ದು, ನಂತರ ಸರ್ಕಾರದ ಸೂಚನೆ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಎಸ್‍ಪಿ ಸಿ.ಕೆ.ಬಾಬಾ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಲಾಕ್‍ಡೌನ್‍ನಲ್ಲಿ ಈಗಾಗಲೇ ಸಡಿಲಿಕೆ ಮಾಡಲಾಗಿದೆ. ಎಲ್ಲ ರೀತಿಯ ಮಳಿಗೆಗಳು ತೆರೆಯಲು ಅವಕಾಶವಿಲ್ಲ. ಹೊಟೇಲ್‍ಗಳಲ್ಲಿ ಕೂತು ತಿನ್ನಲು ನಿರ್ಬಂಧವಿದ್ದು, ಮನೆಗೆ ಕೊಂಡೊಯ್ಯಲಷ್ಟೇ ಅವಕಾಶ ನೀಡಲಾಗಿದೆ.

      ಪ್ರಯಾಣಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರೆಯಲಿದೆ. ಜಿಲ್ಲೆ ಮತ್ತು ಅಂತರಾಜ್ಯ ಚೆಕ್‍ಪೋಸ್ಟ್‍ಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ. ಸಿರುಗುಪ್ಪ ಭಾಗದಲ್ಲಿ ನೆರೆಯ ಆಂಧ್ರದ ಆದೋನಿಯಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ಮಾಹಿತಿಯಿದೆ. ಈ ಕುರಿತು ಇನ್ನಷ್ಟು ಕ್ರಮಕೈಗೊಳ್ಳಲಾಗುತ್ತದೆ. ಕ್ವಾರಂಟೈನ್ ಪ್ರದೇಶಗಳಾದ ಗುಗ್ಗರಹಟ್ಟಿ, ಹೊಸಪೇಟೆ ನಗರ, ಸಿರುಗುಪ್ಪ ತಾಲೂಕು ಎಚ್.ಹೊಸಳ್ಳಿ ಗ್ರಾಮದಲ್ಲಿ ನಿರ್ಬಂಧ ಮುಂದುವರೆಯಲಿದೆ. ನಿಯಮ ಉಲ್ಲಂಘಿಸಿದ ಆಟೋಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ ಮತ್ತು ಡಿಎಚ್‍ಒ ಡಾ.ಜನಾರ್ಧನ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap