ಬೆಂಗಳೂರು
ಮೇಲುಸೇತುವೆ ರಸ್ತೆಯಿಂದ ಕೆಳಗೆಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕಾಮಾಕ್ಷಿಪಾಳ್ಯದ ನಾಲ್ಕನೇ ಕ್ರಾಸ್‍ನ ನರಸಿಂಹಮೂರ್ತಿ (28) ಆತ್ಮಹತ್ಯೆ ಮಾಡಿಕೊಂಡವರು,ಆಂಧ್ರ ಮೂಲದ ನರಸಿಂಹಮೂರ್ತಿ ಕಾಮಾಕ್ಷಿಪಾಳ್ಯದ ವಿನಾಯಕ ಲೇತ್ ವಕ್ರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದು, 5 ವರ್ಷಗಳ ಹಿಂದೆ ಪ್ರಜಂತಾ ಎಂಬುವರನ್ನು ವಿವಾಹವಾಗಿದ್ದ ಅವರಿಗೆ ಹೆಣ್ಣುಮಗುವಿದೆ.
ಇತ್ತೀಚೆಗಷ್ಟೇ ಪತ್ನಿಗೆ ಹೆರಿಗೆಯಾಗಿ ಗಂಡುಮಗುವಿಗೆ ಜನ್ಮನೀಡಿದ್ದು ಪತ್ನಿ ತವರಿಗೆ ತೆರಳಿದ್ದರು,ಗುರುವಾರ ಕೆಲಸಕ್ಕೆ ಹೋಗಿದ್ದ ನರಸಿಂಹಮೂರ್ತಿ 3 ತಿಂಗಳ ಹಿಂದೆ ಜನಿಸಿದ ಗಂಡು ಮಗು ಮೃತಪಟ್ಟಿದ್ದು ನನಗೆ 3 ದಿನಗಳ ಕಾಲ ರಜೆ ಬೇಕು ಎಂದು ಹೇಳಿದ್ದ ಅಲ್ಲದೇ ತನ್ನೊಂದಿಗಿದ್ದ ತಮ್ಮನಿಗೂ ಅದೇ ರೀತಿ ಹೇಳಿ ಬೆಳಿಗ್ಗೆ ಮನೆಯಿಂದ ಹೊರಟಿದ್ದ ನರಸಿಂಹಮೂರ್ತಿ ಬೆಳಿಗ್ಗೆ 7ರ ವೇಳೆ ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲುಸೇತುವೆ ರಸ್ತೆಯ ಸಾಯಿ ಹೊಂಡಾ ಶೋ ರೂಂ ಬಳಿ ಕೆಳಗೆ ಹಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ, ನರಸಿಂಹಮೂರ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮಗು ಮೃತಪಟ್ಟಿರುವುದೆ ಕಾರಣ ಎಂದು ಸಹೋದರ ಹಾಗೂ ವಿನಾಯಕ ಲೇತ್ ವಕ್ರ್ಸ್‍ನ ಇತರ ಕೆಲಸಗಾರರಿಂದ ತಿಳಿದುಬಂದಿತ್ತು.
ಆದರೆ ನರಸಿಂಹಮೂರ್ತಿಯ ಪತ್ನಿ ಪ್ರಜಂತಾ ಮಗು ಮೃತಪಟ್ಟಿಲ್ಲ ಆರೋಗ್ಯವಾಗಿದೆ ಎಂದು ಪೋಟೋ ಸಮೇತ ಪೊಲೀಸರಿಗೆ ಕಳುಹಿಸಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.ಪ್ರಕರಣ ದಾಖಲಿಸಿರುವ ಪೀಣ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








