ಬೆಂಗಳೂರು
ಮುಂಗಾರು ಮಳೆಯಿಂದಾಗಿ ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ವಿದ್ಯುತ್ ಕಂಬಗಳು ಬಿದ್ದು ಜನ ಸಾಮಾನ್ಯರು ತೊಂದರೆಗೀಡಾದ ಪ್ರಕರಣಗಳು ವರದಿಯಾಗಿವೆ.ಹೀಗಾಗಿ ಅಗತ್ಯ ಮತ್ತು ತುರ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಸಂಭವಿಸಿದ ಮಳೆಯ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಿಬಿಎಂಪಿ , ಬಿಡಿಎ ಹಾಗೂ ಬೆಸ್ಕಾಂ ,ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿ, ಕಳೆದೆರಡು ದಿನದಲ್ಲಿ ಸುರಿದ ಮಳೆಯಿಂದಾಗಿ ಬೆಂಗಳೂರು ವಿದ್ಯುತ್ ಕಂಪನಿಯ 295 ಕಂಬಗಳು ಮುರಿದಿದ್ದು, ಅವುಗಳಲ್ಲಿ ಬೆಂಗಳೂರಿನಲ್ಲಿ 80 ಕಂಬಗಳು ಬಿದ್ದಿವೆ. ಒಟ್ಟಾರೆ 76 ಲಕ್ಷ ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ತಿಳಿಸಿದರು.
ತೆರೆದ ವಿದ್ಯುತ್ ತಂತಿಗಳನ್ನು ಸರಿಸಪಡಿಸುವುದು, ಮುರಿದ ಮರದ ಕೊಂಬೆಗಳನ್ನು ತೆರವುಗೊಳಿಸುವುದು ಹಾಗೂ ಪರಿವರ್ತಿತ ಕೇಂದ್ರಗಳ ದುರಸ್ಥಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಪೋಲಿಸರಿಂದ 134 ಅಪಾಯದ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ 63 ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದರು.
ಹೊಸ ಅಥವಾ ಹಳೆಯ ಬಡಾವಣೆಗಳಲ್ಲಿ ವಿದ್ಯುತ್ ವಿಸ್ತರಣೆಗಳನ್ನು ಕೈಗೊಳ್ಳುವ ಸಂದರ್ಭಗಳಲ್ಲಿ ಬೆಸ್ಕಾಂ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಇದರಿಂದಾಗಿ ವಿದ್ಯುತ್ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಶಿಖಾ ಅವರು ತಿಳಿಸಿದರು.
ಬೆಂಗಳೂರಿನ ಎಲ್ಲ ಬೀದಿ ದೀಪಗಳನ್ನು ಎಲ್ಇಡಿ ಗೆ ಪರಿವರ್ತಿಸುವ ಕಾರ್ಯ ಆರಂಭವಾಗಿದೆ. ಬೆಂಗಳೂರಿನಲ್ಲಿ ಕಸ ವಿಲೇವಾರಿ, ರಸ್ತೆ ದುರಸ್ಥಿ, ಫುಟ್ ಪಾತ್ ನಿರ್ಮಾಣ, ಟೆಂಡರ್ ಶ್ಯೂರ್ ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದಶಿ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮಾಹಿತಿ ನೀಡಿದರು.
ಕಂದಾಯ ನಿವೇಶನಗಳಲ್ಲಿ ವಿದ್ಯುತ್ ತಂತಿಗಳ ಸಮೀಪ ಕಟ್ಟಡ ನಿರ್ಮಾಣವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು ಇದರಿಂದಾಗಿ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿದೆ. ನಗರಸಭಾ ಸದಸ್ಯರುಗಳು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಗಳು ಸೂಚಿಸಿದರು. ಬಿಬಿಎಂಪಿ, ಬಿಡಿಎ, ಬೆಸ್ಕಾಂ ಇಲಾಖೆಗಳ ಸಮನ್ವಯ ಸಮಿತಿ ಸಭೆಯನ್ನು ಕರೆದು 10-15 ದಿನಗಳಲ್ಲಿ ಸಮಸ್ಯೆ ಯನ್ನು ಬಗೆಹರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಗೋಪಾಲಯ್ಯ, ಬಿಬಿಎಂಪಿ ಮಹಾಪೌರರಾದ ಗಂಗಾಂಬಿಕಾ ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಡಿಎ ಆಯುಕ್ತರಾದ ರಾಕೇಶ್ ಸಿಂಗ್, ಕಾಲೇಜು ಶಿಕ್ಷಣ ಇಲಾಖೆ ಆಯಕ್ತರಾದ ಡಾ: ಎನ್ ಮಂಜುಳಾ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ ಸಭೆಯಲ್ಲಿ ಭಾಗವಹಿಸಿದ್ದರು.