ಬೆಂಗಳೂರು
ಪೊಲೀಸರ ಮೇಲೆ ಹಲ್ಲೆ,ಕಳ್ಳತನ ಸುಲಿಗೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಅಶೋಕ್ ಅಲಿಯಾಸ್ ಅರ್ಜುನ್ ಕಾಲಿಗೆ ಗುಂಡು ಹೊಡೆದು ಬಾಣಸವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಲಗಾಲಿಗೆ ಗುಂಡೇಟು ತಗುಲಿರುವ ಬಾಗಲೂರು ಲೇಔಟ್‍ನ ರೌಡಿ ಅಶೋಕ್(22)ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬಂಧಿಸಲು ಬೆನ್ನಟ್ಟಿ ಹೋದಾಗ ರೌಡಿ ಅಶೋಕ್ ಡ್ಯಾಗರ್ ನಿಂದ ಹಲ್ಲೆ ನಡೆಸಿದ್ದರಿಂದ ಗಾಯಗೊಂಡಿರುವ ಪೊಲೀಸ್ ಪೇದೆ ಸೌದಾಗರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿ ಸೇರಿದ್ದ ಅಶೋಕ್ ಕೆಲ ದಿನಗಳ ಹಿಂದೆ ಪೊಲೀಸರ ಮೇಲೆ ಹಾಕಿ ಸ್ಟಿಕ್‍ನಿಂದ ಹಲ್ಲೆ ಮಾಡಿದ್ದನು ಈ ಸಂಬಂಧ ಪ್ರಕರಣ ದಾಖಲಿಸಿ ಅಶೋಕ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಆಶೋಕ್ ಬಾಣಸವಾಡಿಯ ಮೆಹರ್ ಅಲಿ ಎಂಬವರ ಮನೆಗೆ ಮನೆಗೆ ನುಗ್ಗಿ ದರೋಡೆ ಮಾಡಿ ಪರಾರಿಯಾಗಿದ್ದ.ಈ ಸಂಬಂಧ ಪ್ರಕರಣ ದಾಖಲಿಸಿ ರೌಡಿಯ ಪತ್ತೆಗೆ ತೀವ್ರ ಶೋಧ ನಡೆಸಲಾಗಿತ್ತು ಎಂದು ಡಿಸಿಪಿ ರಾಹುಲ್‍ಕುಮಾರ್ ಶಹಪೂರವಾಡ ತಿಳಿಸಿದ್ದಾರೆ.
ರೌಡಿ ಆಶೋಕ್ ಬಂಧನಕ್ಕೆ ರಚಿಸಲಾಗಿದ್ದ ತಂಡದ ನೇತೃತ್ವವಹಿಸಿದ್ದ ಬಾಣಸವಾಡಿ ಪೊಲೀಸ್ ಇನ್ಸ್‍ಪೆಕ್ಟರ್ ವೀರೂಪಾಕ್ಷಸ್ವಾಮಿ ಅವರು ನಿನ್ನೆ ರಾತ್ರಿ 11.15ರ ವೇಳೆ ಅಶೋಕ್ ಕಸ್ತೂರಿನಗರದ ಬಳಿ ಆಶೋಕ್ ಇರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಗಿಳಿದಿದ್ದಾರೆ.ಪೊಲೀಸರು ಬಂದಿರುವುದನ್ನು ಕಂಡ ಆಶೋಕ್ ಓಡ ತೊಡಗಿದ್ದು ಆತನನ್ನು ಬಂಧಿಸಲು ಪೇದೆ ಸೌದಾಗರ್ ಬೆನ್ನಟ್ಟಿ ಹೋದಾಗ ಡ್ಯಾಗರ್ ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ವೀರೂಪಾಕ್ಷಸ್ವಾಮಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಮತ್ತೆ ಸೌದಾಗರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಮತ್ತೊಂದು ಗುಂಡು ಹಾರಿಸಿದ್ದು ಅದು ಬಲಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ ಕೂಡಲೇ ಆತನನ್ನು ಬಂಧಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಲಿಗೆ ಕಳ್ಳತನ ಕೊಲೆಯತ್ನ ಬೆದರಿಕೆ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿ ಆಶೋಕ್ ಬಂಧಿಸಲು ಬರುವ ಪೊಲೀಸರ ಮೇಲೆ ಹಲ್ಲೆ ನಡೆಸುವಲ್ಲಿ ಕುಖ್ಯಾತಿ ಪಡೆದಿದ್ದ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿ ಕುಖ್ಯಾತಿ ಪಡೆಯಲು ಯತ್ನ ನಡೆಸಿದ್ದನು ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
