ಹೊಸ ಬಾಬ್ ಸಿಡಿಸಿದ ಯತ್ನಾಳ್ ..!

ಬೆಂಗಳೂರು

     ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲು ಕೇಂದ್ರದ ಇಬ್ಬರು ಸಚಿವರು ಷಡ್ಯಂತ್ರ ಹೂಡಿದ್ದಾರೆ ಎಂದು ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಬಾಂಬ್ ಇಂದು ಬಾಂಬ್ ಸಿಡಿಸಿರುವುದು ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

     ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ,ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದು;ಇದು ನಿಜವೇ ಆಗಿದ್ದರೆ ಯಡಿಯೂರಪ್ಪ ಅವರು ತಕ್ಷಣವೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಹೇಳಿದ್ದಾರೆ.

    ಅಲ್ಲಿಗೆ ವಿಷಯ ವಿವಿಧ ಚರ್ಚೆಗಳಿಗೆ ಗ್ರಾಸವಾಗಿದ್ದು ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಪದಚ್ಯುತಗೊಳಿಸಲು ಯತ್ನಿಸುತ್ತಿರುವ ಇಬ್ಬರು ಕೇಂದ್ರ ಸಚಿವರ್ಯಾರು?ಎಂಬ ಬಗ್ಗೆ ಗುಸು-ಗುಸು,ಪಿಸು-ಪಿಸು ಆರಂಭವಾಗಿದೆ.ಅಂದ ಹಾಗೆ ಇಂದು ಬೆಳಿಗ್ಗೆ ಈ ಬಾಂಬ್ ಸಿಡಿಸಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರು,ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಿದ ಕಾರಣಕ್ಕಾಗಿಯೇ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಪರಿಹಾರ ಬರುವುದು ವಿಳಂಬವಾಯಿತು ಎಂದರು.

    ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಇಳಿಸಲು ಕೇಂದ್ರ ಸಚಿವ ಸಂಪುಟದಲ್ಲಿರುವ ಇಬ್ಬರು ಮಂತ್ರಿಗಳು ಷಡ್ಯಂತ್ರ ನಡೆಸಿದ್ದಾರೆ.ಆದರೆ ಈ ಷಡ್ಯಂತ್ರ ಮುಂದುವರಿದರೆ ಬಿಜೆಪಿಗೆ ಕಷ್ಟದ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು.ನೆರೆಪರಿಹಾರಕ್ಕಾಗಿ ಹಣ ಬಿಡುಗಡೆ ಮಾಡಿ ಎಂದು ನಾನು ಹೇಳಿದರೆ ಷೋಕಾಸ್ ನೋಟೀಸ್ ಕೊಡಲಾಗಿದೆ.ಆದರೆ ನಾನು ಈ ನೋಟೀಸ್‍ಗೆ ತಪ್ಪಿಯೂ ಉತ್ತರಿಸುವುದಿಲ್ಲ.ಬೇಕಿದ್ದರೆ ಅವರು ನನ್ನನ್ನು ಪಕ್ಷದಿಂದಲೇ ತೆಗೆಯಲಿ.ನನ್ನ ತಾಖತ್ತೇನು ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆ ಎಂದು ಹೇಳಿದರು.

      ಈ ಮಧ್ಯೆ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಿಎಂ,ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು,ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ಕೇಂದ್ರದ ಇಬ್ಬರು ಸಚಿವರು ಷಡ್ಯಂತ್ರ ನಡೆಸಿರುವುದು ನಿಜವೇ ಆಗಿದ್ದರೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂದರು.ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ.ಇದಕ್ಕೆ ಕಾರಣ ಅದೇ ಆಗಿದ್ದರೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಮರಳಿ ವಿಧಾನಸಭಾ ಚುನಾವಣೆಗೆ ಹೋಗುವುದು ಒಳ್ಳೆಯದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

 

Recent Articles

spot_img

Related Stories

Share via
Copy link