ಚಿತ್ರದುರ್ಗ
ಸಾಮಾನ್ಯವಾಗಿ ಚಿತ್ರದುರ್ಗ ಅಂದ್ರೆ ತಕ್ಷಣ ನೆನಪಾಗೋದು ಅಲ್ಲಿನ ಐತಿಹಾಸಿಕ ಕಲ್ಲಿನ ಕೋಟೆ. ಕೋಟೆಯಲ್ಲಿ ಎತ್ತ ನೋಡಿದರೂ ಒಂದೇ ಬಣ್ಣದ ಕಲ್ಲಿನಲ್ಲಿ ಕಟ್ಟಿದ ಬುರುಜುಗಳು, ಬೃಹದಾಕಾರದ ಬಂಡೆಗಳು. ಆದ್ರೆ ಈ ದಿನ ಮಾತ್ರ ಕೋಟೆ ರಂಗು ರಂಗಾಗಿತ್ತು, ಕೋಟೆಯ ತುಂಬೆಲ್ಲಾ ಎಲ್ಲಿ ಕಣ್ ಹಾಯಿಸಿದ್ರೂ ಯುವಕ ಯುವತಿಯರ ಸಡಗರ ಸಂಭ್ರಮದ ಕಲರವ ಮೇಳೈಸಿತ್ತು
ಎಲ್ಲಿ ನೋಡಿದ್ರೂ ರಂಗು ರಂಗಿನ ಬಟ್ಟೆ ತೊಟ್ಟ ಯುವಕ ಯುವತಿಯರ ಸಂಭ್ರಮ, ಮರದಡಿಯಲ್ಲಿ ಕುಳಿತು ಹೊಸ ಹೊಸ ಕನಸುಗಳನ್ನ ವಿನಿಮಯ ಮಾಡಿಕೊಳ್ತಿರೋ ಯುವ ಪ್ರೇಮಿಗಳು, ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದವರ ದೃಶ್ಯ ಕಂಡು ಬಂತು.
ಹೌದು.. ಹೊಸ ವರ್ಷ ಬಂತು ಅಂದ್ರೆ ಸಾಕು ಚಿತ್ರದುರ್ಗದ ಕಲ್ಲಿನ ಕೋಟೆಗೆ ಹೊಸ ರಂಗು ಬರುತ್ತೆ. ಪ್ರತಿನಿತ್ಯ ಇಲ್ಲಿಗೆ ಪ್ರವಾಸಿಗರು ಬರೋದು ಸರ್ವೇ ಸಾಮಾನ್ಯವಾದ್ರೂ, ಹೊಸವರ್ಷದ ದಿನ ಮಾತ್ರ ಕೋಟೆಯತ್ತ ಹರಿದುಬರುವ ಜನಸಾಗರ ಕಲ್ಲಿನ ಕೋಟೆಗೆ ಬಣ್ಣ ಬಳಿದಂತೆ ಕಾಣುತ್ತಾರೆ. ಕಾಲೇಜು ಯುವಕ ಯುವತಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ವಯೋವೃದ್ದರಾದಿಯಾಗಿ ಕೋಟೆಗೆ ಭೇಟಿ ನೀಡಿ ಹೊಸ ವರ್ಷವನ್ನ ಸಂಭ್ರಮದಿಂದ ಆಚರಿಸ್ತಾರೆ.
ಅಷ್ಟೇ ಅಲ್ಲದೆ ಬೇರೆ ಬೇರೆ ಊರುಗಳಿಂದ ಹೊಸವರ್ಷದ ದಿನ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಕೇಕ್ ಕತ್ತರಿಸಿ ಸಂಭ್ರವನ್ನ ಆಚರಿಸೋದನ್ನ ನೋಡಿದ ಸ್ಥಳೀಯರು ನಮ್ಮ ದುರ್ಗ ನಮ್ಮ ಹೆಮ್ಮೆ ಅಂತ ಬೀಗುತ್ತಾರೆ..ಇನ್ನೂ ಎರಡೆರಡು ರಾಮಾಚಾರಿ ಸಿನಿಮಾಗಳು ಬಂದಿರೋದ್ರಿಂದ ಸಹಜವಾಗಿಯೇ ದೂರದ ಊರುಗಳ ಪ್ರವಾಸಿಗರಿಗೆ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಪ್ರತೀ ವರ್ಷ ನಾಡಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸಿ ಐತಿಹಾಸಿಕ ಕಲ್ಲಿನ ಕೋಟೆಯನ್ನ ಕಣ್ತುಂಬಿಕೊಳ್ಳುವ ಜೊತೆಗೆ ಸಹೋದ್ಯೋಗಿಗಳು, ಸ್ನೇಹಿತರು ಸೇರಿದಂತೆ ಅನೇಕ ಜನರು ಕುಟುಂಬ ಸಮೇತರಾಗಿ ಹೊಸವರ್ಷದ ದಿನ ಇಲ್ಲಿಗೆ ಆಗಮಿಸುತ್ತಿದ್ದಾರೆ.
ಇನ್ನೂ ಕೆಲವರು ಹೊಸವರ್ಷದ ನೆನಪು ಐತಿಹಾಸಿಕ ನೆನಪಾಗಿರಲಿ ಅಂದ್ಕೊಂಡು ಚಿತ್ರದುರ್ಗಕ್ಕೆ ಭೇಟಿ ನೀಡಿ ದುರ್ಗದ ಸಿಡಿಲುಗು ಜಗ್ಗದ ಉಕ್ಕಿನ ಕೋಟೆಯ ಮೇಲೇರಿ ಹೊಸವರ್ಷಾಚರಣೆ ಮಾಡುತ್ತಾರೆ..ವಿಶ್ವದ ಮೂಲೆ ಮೂಲೆಗಳಲ್ಲೂ ಹೊಸ ವರ್ಷವನ್ನ ಅವರದೇ ಆದ ರೀತಿಯಲ್ಲಿ ವಿಶೇಷವಾಗಿ ಬರಮಾಡಿಕೊಂಡರೆ, ಚಿತ್ರದುರ್ಗ ಜಿಲ್ಲೆಯ ಬಹುತೇಕ ಜನರು ಪ್ರತೀ ವರ್ಷ ಜನವರಿ ತಿಂಗಳ ಮೊದಲ ದಿನ ಕೋಟೆಯ ಮೇಲೇರಿ ಕೇಕ್ ಕತ್ತರಿಸಿ ಸಂಭ್ರಮಿಸುವ ಮೂಲಕ ಹೊಸವರ್ಷವನ್ನ ಸ್ವಾಗತಿಸುತ್ತಾರೆ. ಏನೇ ಆಗ್ಲಿ ಯಾವುದೇ ಬಣ್ಣ ಬಳಿಯದೇ ಇದ್ದರೂ ಚಿತ್ರದುರ್ಗದ ಕಲ್ಲಿನ ಕೋಟೆ ಮಾತ್ರ ಹೊಸವರ್ಷದ ದಿನ ಬರುವ ಪ್ರವಾಸಿಗರಿಂದ ಬಣ್ಣ ಬಳಿದಂತೆ ರಂಗು ರಂಗಾಗಿ ಕಾಣಿಸಿದ್ರೆ, ಕೋಟೆ ತುಂಬಾ ಯುವಕ ಯುವತಿಯರ ಕಲರವ ದುರ್ಗಕ್ಕೆ ಕಳೆ ಕಟ್ಟುವಂತೆ ಮಾಡಿದ್ದು ವಿಶೇಷ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
