ಚಳ್ಳಕೆರೆ
ರಾಜ್ಯ ಪೌರಾಡಳಿತ ಇಲಾಖೆ ನಗರೋತ್ಥಾನ ಯೋಜನೆಯಡಿ ಈಗಾಗಲೇ 25 ಕೋಟಿ ಹಣವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡುಗಡೆಗೊಳಿಸಿದ್ದು, ನಗರದ ಹಲವಾರು ರಸ್ತೆಗಳ ಡಾಂಬರೀಕರಣ, ಚರಂಡಿ ನಿರ್ಮಾಣ, ನಗರಸಭೆಯ ನೂತನ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದರು.
ಅವರು, ಮಂಗಳವಾರ ನಗರಸಭೆಯ ನೂತನ ಕಟ್ಟಡದ ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಮಾಹಿತಿ ನೀಡಿ ಈಗಾಗಲೇ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ನಗರಸಭೆಯ ಹಳೆಯ ಕಟ್ಟಡದ ಜಾಗದಲ್ಲಿ ಈಗ ನೂತನ ತಾಂತ್ರಿಕಾಂಶಗಳಿಂದ ಕೂಡಿದ ಹೊಸ ಶೈಲಿಯ ಕಟ್ಟಡ ನಿರ್ಮಾಣವಾಗುತ್ತದೆ.
ಶಾಸಕ ಟಿ.ರಘುಮೂರ್ತಿಯವರ ಸೂಚನೆ ಮೇರೆಗೆ ನೂತನ ಕಟ್ಟಡ ಕಾಮಗಾರಿಯನ್ನು ಫೆ. ಅಂತ್ಯದೊಳಗೆ ಪೂರೈಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ದಸರಾ ಹಾಗೂ ಇನ್ನಿತರೆ ಹಬ್ಬಗಳ ಹಿನ್ನೆಲೆಯಲ್ಲಿ ಕಾಮಗಾರಿ ಕುಂಠಿತವಾಗದಂತೆ ಗುತ್ತಿಗೆದಾರರು ಈಗಾಗಲೇ ಕಳೆದ ದಿನಗಳಿಂದ ಹಗಲು ರಾತ್ರಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ನಗರಸಭೆಯ ನೂತನ ಕಟ್ಟಡದ ಮೇಲ್ಚಾವಣಿ ಕಾಮಗಾರಿ ಅಂತಿಮ ಹಂತದಲ್ಲಿದೆ.
ನಗರದಲ್ಲಿ ಈಗಾಗಲೇ ಎಲ್ಲಾ ಪ್ರಧಾನ ರಸ್ತೆಗಳಲ್ಲಿ ಹೈಮಾಸ್ ವಿದ್ಯುತ್ ಲೈಟನ್ನು ಅಳವಡಿಸಲಾಗಿದೆ. ವಿಶಾಲವಾದ ರಸ್ತೆ ನಿರ್ಮಾಣವಾಗಿದ್ದು, ಪಾದಚಾರಿಗಳ ಮಾರ್ಗವನ್ನು ಸಹ ಆಧುನೀಕರಣಗೊಳಿಸಲಾಗಿದೆ. ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ನಗರದ ನಾಗರೀಕರು ನಗರಸಭೆಯ ಎಲ್ಲಾ ಅಭಿವೃದ್ಧಿ ಪರ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು. ನಗರವು ವೇಗವಾಗಿ ಬೆಳವಣಿಗೆಯ ಜೊತೆಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ನಗರವನ್ನು ಮತ್ತಷ್ಟು ಸುಂದರಗೊಳಿಸಲು ಪ್ರತಿಯೊಬ್ಬ ನಾಗರೀಕರು ನಗರಸಭೆಯ ಸಹಕಾರದ ಜೊತೆಗೆ ಕಂದಾಯವನ್ನು ಸಹ ಪಾವತಿ ಮಾಡುವಂತೆ ಮನವಿ ಮಾಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
