ಹುಳಿಯಾರು
3 ಜನರ ಕಳ್ಳರ ತಂಡವೊಂದು ವ್ಯವಸ್ಥಿತವಾಗಿ ಆರು ಅಂಗಡಿಗಳ ಬಾಗಿಲು ಒಡೆದು ನಗದು ದೋಚಿ ಪರಾರಿಯಾಗಿರುವ ಘಟನೆ ಹುಳಿಯಾರಿನಲ್ಲಿ ಬುಧವಾರ ರಾತ್ರಿ 12-30 ರಿಂದ 3 ಗಂಟೆಯ ಸಮಯದಲ್ಲಿ ನಡೆದಿದೆ.
ಹುಳಿಯಾರಿನ ಮಾರ್ಕೇಟ್ ಯಾರ್ಡ್‍ನ 3 ಅಂಗಡಿಗಳು ಸೇರಿದಂತೆ ಹುಳಿಯಾರು ರಾಮಗೋಪಾಲ್ ಸರ್ಕಲ್‍ನ ಬಾರ್, ದಿನಸಿ ಅಂಗಡಿ, ಕಬ್ಬಿಣದ ಅಂಗಡಿ, ಸೇರಿ ಒಟ್ಟು ಆರು ಅಂಗಡಿಗಳಲ್ಲಿ ರೋಲಿಂಗ್ ಷಟರ್ ಮೀಟಿ ಅಂಗಡಿಗಳ ಒಳಗೆ ನುಗ್ಗಿರುವ ಕಳ್ಳರು ಅಂಗಡಿಗಳಲ್ಲಿನ ಬೀರು, ಕ್ಯಾಷ್ ಟೇಬಲ್, ಲಾಕರ್‍ಗಳನ್ನು ಹೊಡೆದು ಹಣ ದೋಚಿದ್ದಾರೆ.
ಹುಳಿಯಾರಿನ ಈರುಳ್ಳಿ ಶಿವಣ್ಣ ಅವರ ಸಿಸಿ ಕ್ಯಾಮರದಲ್ಲಿ ಚಲನವಲನ ಪತ್ತೆಯಾಗಿದ್ದು 3 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇನ್ ಶರ್ಟ್ ಮಾಡಿಕೊಂಡು ತಲೆಗೆ ಮಂಕಿ ಕ್ಯಾಪ್ ಧರಿಸಿ ಟಾರ್ಚ್ ಹಿಡಿದು ಇವರು ಒಳ ನುಗ್ಗಿದ್ದಾರೆ.
ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಎಲ್.ಆರ್.ಬಾಲಾಜಿ ಅವರ ಸಪ್ತಗಿರಿ ಟ್ರೇಡರ್ಸ್‍ನಲ್ಲಿಟ್ಟಿದ್ದ 7 ಲಕ್ಷ ರೂ. ಸೇರಿದಂತೆ ಗಜಣ್ಣ ಅವರ ಅಂಗಡಿ, ಚಿಕ್ಕಬಿದರೆ ಚಂದ್ರಣ್ಣ ಅವರ ನಂದಿ ಟ್ರೇಡರ್ಸ್, ತೋಟದಮನೆ ಶೇಖರಣ್ಣ ಅವರ ಎಸ್‍ಎಸ್‍ಆರ್ ಸ್ಟಿಲ್ಸ್, ವಿಶ್ವನಾಥ್ ಅವರ ಕೆಸಿಎಸ್ ಟ್ರೇಡರ್ಸ್ ಹಾಗೂ ಕನಕ ಬಾರ್‍ನಲ್ಲಿ ಹಣ ಕದ್ದಿದ್ದಾರೆ.
ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಸಿಪಿಐ ಸುರೇಶ್, ಪಿಎಸ್‍ಐ ಲಕ್ಷ್ಮೀಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತುಮಕೂರಿನ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
