ಬೆಂಗಳೂರು
ಸುಶಿಕ್ಷಿತ ಸಮಾಜ ನಿರ್ಮಾಣ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಶಿಕ್ಷಣಕ್ಕೆ ಹಿಂದಿನಿಂದಲೂ ಆದ್ಯತೆ ನೀಡುವ ಪ್ರವೃತ್ತಿ ನಮ್ಮದು. ಶಿಕ್ಷಣ, ಆರೋಗ್ಯ ಮೊದಲಾದವುಗಳು ನಮ್ಮ ಸರ್ಕಾರದ ಆದ್ಯತಾ ಕ್ಷೇತ್ರಗಳಾಗಿವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಉನ್ನತ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ಮೈತ್ರಿ ಸಹಾಯವಾಣಿ, ವಿಜಯಿಭವ-ಯೂಟ್ಯೂಬ್ ಚಾನಲ್ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಪೋರ್ಟಲ್‌ಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಂತ ಸಂತೋಷದಿಂದ ಕಾಲೇಜು ಶಿಕ್ಷಣ ಇಲಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ್ದೇನೆ. ಶಿಕ್ಷಣ ಜಗತ್ತನ್ನೇ ಬದಲಾಯಿಸಬಲ್ಲ ಪ್ರಬಲ ಅಸ್ತ್ರ ಎಂದು ನೆಲ್ಸನ್ ಮಂಡೇಲಾ ಹೇಳಿದ್ದಾರೆ. ಆದ್ದರಿಂದ ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ನಿನ್ನೆಯಷ್ಟೇ ಮಂಡಿಸಿರುವ ಆಯವ್ಯಯದಲ್ಲಿ ನಮ್ಮ ಸರ್ಕಾರ 29 ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನಿಗದಿಪಡಿಸಿದೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇಂದಿನ ಯುವಕರಿಗೆ ಚಾರಿತ್ರ್ಯ ನಿರ್ಮಾಣದ ಜೊತೆಗೆ ಉದ್ಯೋಗಾವಕಾಶ ದೊರೆಯಲು ಪೂರಕವಾಗುವಂತಹ ಶಿಕ್ಷಣ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ರಾಜ್ಯದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಆಡಳಿತ ವ್ಯವಸ್ಥೆಯನ್ನು ತಂತ್ರಜ್ಞಾನದ ನೆರವಿನಿಂದ ಸಮರ್ಥವಾಗಿ ನಿರ್ವಹಿಸಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ರಾಜ್ಯದ ಉನ್ನತ ಶಿಕ್ಷಣದ ನಿವ್ವಳ ನೋಂದಣಿ ಅನುಪಾತವನ್ನು ಹೆಚ್ಚಿಸಲು ಇಂಟರ‍್ಯಾಕ್ಟೀವ್ ಆನ್-ಲೈನ್ ಕೋರ್ಸ್‍ಗಳನ್ನು ಪ್ರಾರಂಭಿಸಲಾಗುವುದು ಹಾಗೂ ಇದಕ್ಕೆ ಅವಶ್ಯವಿರುವ ಗುಣಾತ್ಮಕ ಇ-ಕಂಟೆಂಟ್ ಸಿದ್ಧಪಡಿಸಲಾಗುವುದು ಎಂದರು.
ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಬೋಧಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ಪಾರದರ್ಶಕವಾಗಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಗೆ ಅವಕಾಶ ದೊರೆಯುವುದಲ್ಲದೆ, ಶಿಕ್ಷಣದ ಗುಣಮಟ್ಟ ಹೆಚ್ಚಲೂ ಸಹಜವಾಗಿಯೇ ಸಾಧ್ಯವಾಗುತ್ತದೆ. ಬೆಂಗಳೂರಿನಲ್ಲಿರುವ ಐತಿಹಾಸಿಕ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐ.ಐ.ಟಿ. ಮಾದರಿಯಲ್ಲಿ ಸ್ವಾಯತ್ತಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಈ ಉದ್ದೇಶಕ್ಕಾಗಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ ಜಿಯೋಸ್ಪೇಶಿಯಲ್ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಏಷ್ಯಾ ಖಂಡದ ದೇಶಗಳ ಶಿಕ್ಷಣ ಸಚಿವರ ಶೈಕ್ಷಣಿಕ ಸಮಾವೇಶ ಮತ್ತು ಬೃಹತ್ ವಸ್ತು ಪ್ರದರ್ಶನವನ್ನು ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಾಗುವುದು. ಇಂದಿನ ಸಮಾರಂಭದಲ್ಲಿ ಹೊಸ ಕಟ್ಟಡ ಉದ್ಘಾಟನೆಯ ಜೊತೆಗೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಮೈತ್ರಿ ಎಂಬ ಸಹಾಯವಾಣಿ ಪ್ರಾರಂಭಿಸಿರುವುದು ಅತ್ಯಂತ ಶ್ಲಾಘನೀಯ ಕ್ರಮವಾಗಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ಸಮಸ್ಯೆಗಳ ಕುರಿತು ಮಾರ್ಗದರ್ಶನ ಪಡೆಯಬಹುದಾಗಿದೆ. ಎರಡನೇದಾಗಿ ‘ವಿಜಯೀಭವ’ ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲಾಗುತ್ತಿದೆ. ಇದರ ಮೂಲಕ ಯುವಜನರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸ್ಫೂರ್ತಿ ನೀಡಲು ಉತ್ತಮ ವೇದಿಕೆ ಸೃಷ್ಟಿಸಿದಂತಾಗಿದೆ. ಈ ಎಲ್ಲ ಪ್ರಯತ್ನಗಳನ್ನೂ ಇಲಾಖೆಯು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಆಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಪರಿವರ್ತನೆ ತರುವಂತಾಗಲಿ ಎಂದು ನಾನು ಹಾರೈಸುತ್ತೇನೆ. ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಉತ್ತಮ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಿದೆ. ಆ ಮೂಲಕ ಸುಶಿಕ್ಷಿತ, ಸುಭಿಕ್ಷ ಸಮಾಜ ನಿರ್ಮಾಣಕ್ಕೆ ಶ್ರಮಿಸಲಿದೆ ಎಂದು ಹೇಳಿದರು.ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ