ಬೆಂಗಳೂರು
ಮಾರುವೇಶದಲ್ಲಿ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಿರುವ ಉತ್ತರ ವಿಭಾಗದ ಪೊಲೀಸರು ಯಶವಂತಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ, 14 ರೌಡಿಗಳು ಸೇರಿದಂತೆ, 340 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮಧ್ಯರಾತ್ರಿಯವರೆಗೆ ಗಲ್ಲಿಗಳು, ಜಂಕ್ಷನ್ಗಳು, ಕಿರಿದಾದ ರಸ್ತೆಗಳಲ್ಲಿ ಗುಂಪುಸೇರಿ ರಾತ್ರಿ ಪಾಳೆಯದಲ್ಲಿ ಕೆಲಸ ಮುಗಿಸಿಕೊಂಡು ಬರುವವರಿಗೆ ಕಿರಿಕಿರಿ ಉಂಟುಮಾಡುತ್ತ, ದೌರ್ಜನ್ಯ ಎಸಗುವವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮಾರುವೇಶದಲ್ಲಿ ಸುಮಾರು 50ಕ್ಕೂ ಹೆಚ್ಚುಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ, ಅಬಕಾರಿ ನಿಯಮ ಮೀರಿ ಮದ್ಯ ಮಾರಾಟ ಮಾಡುವ ಬಾರ್ ಅಂಡ್ ರೆಸ್ಟೊರೆಂಟ್ಗಳ ಮೇಲೆ ಕೂಡ ದಾಳಿ ನಡೆಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದರು.
ಬಾರ್ಗಳ ಮುಂಭಾಗ ಗುಂಪಾಗಿ ಸೇರುವುದು, ಗಲಾಟೆ ಮಾಡುವುದು, ಸ್ಥಳೀಯರಿಗೆ ಕಿರಿಕಿರಿ ಉಂಟುಮಾಡುವುದು, ಬೀದಿ ಕಾಮಣ್ಣರು, ಪುಡಿ ರೌಡಿಗಳು ಸೇರಿದಂತೆ, 340 ಮಂದಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ 12 ಮಂದಿ ರೌಡಿಗಳು, 9 ಮಂದಿ ಹಳೆ ಆರೋಪಿಗಳು ಸೇರಿದ್ದಾರೆ.
ವಶಪಡಿಸಿಕೊಂಡ ಎಲ್ಲರನ್ನೂ ಮುನಿಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ಪೆರೇಡ್ ನಡೆಸಿ, ಅವರ ಮೊಬೈಲ್ ಸಂಖ್ಯೆ, ಉದ್ಯೋಗ, ವಿಳಾಸ, ಇನ್ನಿತರ ಮಾಹಿತಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








