ಬೆಂಗಳೂರು
ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಪೂರ್ಣಗೊಂಡಿದೆ. ಎಲ್ಲರೂ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಮೂಲಭೂತ ಕರ್ತವ್ಯಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ನೈತಿಕತೆ ಮಾಯವಾಗಿದ್ದು, ಅಧಿಕಾರ ಹಿಡಿಯುವ ರಾಜಕೀಯ ವಿಜೃಂಭಿಸುತ್ತಿದೆ. ಏಳು ದಶಕ ಕಳೆದಿದ್ದರೂ ಸಹ ನಮಗೆ ಇನ್ನೂ ಸಾಮಾಜಿಕ, ನೈತಿಕ ಸ್ವಾತಂತ್ರ್ಯ ದೊರೆತಿಲ್ಲ ಎಂದು ಶಿಕ್ಷಣ ತಜ್ಞ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೊಡೆ ಪಿ. ಕೃಷ್ಣ ಕಳವಳ ವ್ಯಕ್ತಪಡಿಸಿದ್ದಾರೆ.
ಮಹಾತ್ಮಾಗಾಂಧೀಜಿ 1948ರ ಜನವರಿ 30 ರಂದು ಹುತಾತ್ಮರಾಗುವ ಮುನ್ನ ತಮ್ಮ ಹರಿಜನ ಪತ್ರಿಕೆಯಲ್ಲಿ ? ನಮಗೆ ಈಗ ಸಿಕ್ಕಿರುವುದು ರಾಜಕೀಯ ಸ್ವಾತಂತ್ರ್ಯ ಮಾತ್ರ. ಸಾಮಾಜಿಕ ಮತ್ತು ನೈತಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ನಮಗೆ ದಕ್ಕಿದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದಿದ್ದರು. ಆದರೆ ನಾವು ಏಳು ದಶಕಗಳನ್ನು ದಾಟಿ ಬಂದಿದ್ದೇವೆ. ಆದರೆ ಇನ್ನೂ ನಮಗೆ ಪೂರ್ಣ ಸ್ವಾತಂತ್ರ್ಯ ದೊರೆತಿಲ್ಲ. ಗಾಂಧೀಜಿ ಕಂಡ ಕನಸು ಇನ್ನೂ ನನಸಾಗಿಲ್ಲ ಎಂದು ವಿಷಾಧಿಸಿದ್ದಾರೆ.
74ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ನಾವು ಭೌತಿಕವಾಗಿ, ಆರ್ಥಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದ್ದರೂ ಸಹ ಇನ್ನೂ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಿಲ್ಲ. ಇನ್ನೂ ಅನಕ್ಷರತೆ, ಬಡತನ ನಿವಾರಣೆಯಾಗಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಿದೆ. ಮಹಾತ್ಮಾ ಗಾಂಧೀಜಿ ಕಂಡಿದ್ದ ಸರ್ವೋದಯದ ಕನಸು ನನಸಾಗಿಲ್ಲ. ಕಟ್ಟಕಡೆಯ ಮನುಷ್ಯನ ಹಿತ ರಕ್ಷಣೆಯಾಗಬೇಕು ಎನ್ನುವುದು ಗಾಂಧೀಜಿ ಅವರ ಆಶಯವಾಗಿತ್ತು. ಆದರೆ ಇದು ಈಡೇರಿಲ್ಲ. ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಕೊನೆಯ ಹಂತದಲ್ಲಿರುವ ಮನುಷ್ಯನನ್ನೂ ಇನ್ನೂ ಸಮರ್ಪಕವಾಗಿ ತಲುಪುತ್ತಿಲ್ಲ ಎಂದರು.
ಆಡಳಿತ ವಿಕೇಂದ್ರೀಕರಣದ ಮೂಲಕ ಗ್ರಾಮ ಸ್ವರಾಜ್ಯ ನಿರ್ಮಿಸಬೇಕು ಎನ್ನುವುದು ಗಾಂಧೀಜಿ ಅವರ ಬಹುದೊಡ್ಡ ಕನಸಾಗಿತ್ತು. ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಗ್ರಾಮಗಳಿಗೆ ಅಧಿಕಾರ ನೀಡಲಾಗಿದೆ. ಸಾಕಷ್ಟು ಸಂಪನ್ಮೂಲವನ್ನು ಸಹ ವೆಚ್ಚ ಮಾಡಲಾಗುತ್ತಿದೆ. ಆದರೆ ಇದಿಷ್ಟರಿಂದಲೇ ವಿಕೇಂದ್ರೀಕರಣದ ಕನಸು ಈಡೇರುವುದಿಲ್ಲ. ರಾಜಕೀಯದ ಜತೆ ಸಾಮಾಜಿಕ, ಆರ್ಥಿಕ ಅಧಿಕಾರ ಎಲ್ಲರಿಗೂ ದೊರೆಯಬೇಕು ಎಂದರು.
ನಾವು ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಮೂಲಭೂತ ಕರ್ತವ್ಯಗಳನ್ನು ಮರೆತಿದ್ದೇವೆ. ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯ ಸಹ ಅಷ್ಟೇ ಪ್ರಧಾನವಾದದ್ದು. ಅದರಲ್ಲೂ ಯುವ ಸಮೂಹ ಕರ್ತವ್ಯಗಳ ಕಡೆಗೆ ಗಮನಹರಿಸಬೇಕು. ನಮ್ಮ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಕ್ಕೆ ಗೌರವ ಕೊಡಬೇಕು. ದೇಶದ ಏಕತೆ, ಸಮಗ್ರತೆ, ಸಾರ್ವಭೌಮತೆಯನ್ನು ಎತ್ತಿ ಹಿಡಿಬೇಕು. ಕೋಮು ಸೌಹಾರ್ದತೆ, ಬ್ರಾತ್ರುತ್ವವನ್ನು ಎಲ್ಲರೂ ಪಾಲಿಸುವಂತಹ ಅಮೂಲ್ಯವಾದ ಕರ್ತವ್ಯವನ್ನು ಸಂವಿಧಾನದ 51ನೇ ಪರಿಚ್ಛೇದದಲ್ಲಿ ನೀಡಲಾಗಿದೆ. ಇದರ ಪರಿಪಾಲನೆಗೆ ಒತ್ತು ನೀಡಬೇಕು ಎಂದು ಡಾ. ವೂಡೆ ಪಿ ಕೃಷ್ಣ ಕಿವಿ ಮಾತು ಹೇಳಿದರು.
ಗಾಂಧೀ ತತ್ವ ಚಿಂತನೆಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅತ್ಯಗತ್ಯ. ಇಡೀ ಜಗತ್ತಿನಲ್ಲಿ ಗಾಂಧೀಜಿ ಕುರಿತಂತೆ ಹೆಚ್ಚು ಕೃತಿಗಳು ಹೊರ ಹೊಮ್ಮಿವೆ. ಗಾಂಧೀಜಿಯಷ್ಟು ವಿಮರ್ಶೆಗೊಳಪಟ್ಟ ಮತ್ತೊಬ್ಬ ನಾಯಕ ಇನ್ನೊಬ್ಬರಿಲ್ಲ. ಜಗತ್ತಿನಾದ್ಯಂತ ಜನರಿಗೆ ಗಾಂಧೀಜಿ ಹೆಚ್ಚು ಅಪ್ಯಾಯವಾಗುತ್ತಿದ್ದಾರೆ. ಆದರೆ ನಮ್ಮ ಜನತೆ ಗಾಂಧೀಜಿಯಿಂದ ದೂರ ಸರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಹಾಗೆಂದು ಗಾಂಧೀಜಿ ಟೀಕಾತೀತರೇನಲ್ಲ.
ಯುವ ಸಮೂಹ ಗಾಂಧೀಜಿಯನ್ನು ಟೀಕೆ ಮಾಡಲಿ, ವ್ಯಂಗ್ಯ ಮಾಡಲಿ. ಗಾಂಧೀಜಿಗೆ ಸವಾಲು ಬೇಕಾದರೂ ಹಾಕಲಿ. ಆದರೆ ಎಲ್ಲದಕ್ಕೂ ಮುಂಚೆ ಗಾಂಧೀಜಿ ಎಂದರೆ ಯಾರು, ಏನು ಎಂಬ ಬಗ್ಗೆ ಕನಿಷ್ಠ ಅಧ್ಯಯನ ಮಾಡುವುದು ಸೂಕ್ತ. ಗಾಂಧೀಜಿ ಬಗ್ಗೆ ಏನನ್ನೂ ತಿಳಿದುಕೊಳ್ಳದೇ ಟೀಕಿಸುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇನ್ನು ಈಗಿನ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಸಹ ಅಧಿಕಾರ ಹಿಡಿಯುವುದೇ ಮೂಲ ಮಂತ್ರವಾಗಿದೆ. ಅಧಿಕಾರ ಕೇಂದ್ರಿತ ರಾಜಕಾರಣ ಬಿಟ್ಟು ಜನ ಕೇಂದ್ರಿತ ರಾಜಕೀಯದತ್ತ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ಒಲವು ಬೆಳೆಸಿಕೊಳ್ಳಬೇಕು ಎಂದು ಡಾ. ವೂಡೆ ಪಿ ಕೃಷ್ಣ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








