ಬೆಂಗಳೂರು
ಉತ್ತರ ಪ್ರದೇಶದ ಹತ್ರಾಸ್ ನಲ್ಲಿನ ಅತ್ಯಾಚಾರ-ಹತ್ಯೆ ಪ್ರಕರಣ ಖಂಡಿಸಿ ರಾಜ್ಯ ಕಾಂಗ್ರೆಸ್ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜಾಗಿದೆ.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದ ಜನತೆ ಪ್ರತಿಭಟನೆ ನಡೆಸುತ್ತಿದ್ದು, ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರಪ್ರದೇಶದಲ್ಲಿ ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ.
ನಿರ್ಭಯಾ ಪ್ರಕರಣದಲ್ಲಿ ಪ್ರಧಾನಿಯೇ ಮುಂದೆ ನಿಂತು ಸಂತ್ರಸ್ತೆ ಮನೆಯವರನ್ನು ಕರೆಯಿಸಿಕೊಂಡಿದ್ದರು. ಆದರೆ ಉತ್ತರಪ್ರದೇಶದ ಈ ಪ್ರಕರಣದಲ್ಲಿ ಅವರ ತಂದೆ ತಾಯಿಗೂ ಕೂಡ ಆಕೆಯನ್ನು ನೋಡಲು ಅವಕಾಶ ನೀಡಿಲ್ಲ. ಇದರ ವಿರುದ್ಧ ಸೋಮವಾರ ಬೆಳಗ್ಗೆ 11 ಕ್ಕೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳ ವಿರುದ್ಧ 2 ಕೋಟಿ ಸಹಿ ಸಂಗ್ರಹ ಮಾಡುವ ಯೋಜನೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಆರಂಭಿಸಿದ್ದಾರೆ. ಪ್ರತಿ ಪಂಚಾಯತ್‍ಗಳ ಮಟ್ಟದಲ್ಲಿ ಸಹಿ ಸಂಗ್ರಹ ಮಾಡಬೇಕು. ಪ್ರತಿ ಪಂಚಾಯತ್‍ಗಳಲ್ಲಿ 1 ಸಾವಿರ ಜನರ ಸಹಿ ಮಾಡಿಸಬೇಕು. ಅಕ್ಟೋಬರ್ 31 ರೊಳಗೆ ಸಹಿ ಸಂಗ್ರಹ ಮಾಡಿ ಕೆಪಿಸಿಸಿ ಗೆ ಕಳುಹಿಸಿ ಕೊಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಈ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಕೊರೊನಾ ಸಂದರ್ಭದಲ್ಲಿ ಸ್ಯಾನಿಟೈಸರ್, ಪಿಪಿಇ ಕಿಟ್ ಖರೀದಿಯಲ್ಲೂ ಹಗರಣ ನಡೆದಿದೆ. ಪ್ರತಿಯೊಂದು ವಿಷಯದಲ್ಲಿ ನಮ್ಮಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದಿದ್ದು, ನಿಜ ನಾವೆಲ್ಲ ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಗೆಲ್ಲುವುದು ಕಷ್ಟವಲ್ಲ. ಹಾಗೆಂದು ಗೆಲವು ಸುಲಭವಲ್ಲ. ಬಿಜೆಪಿಯವರು ಹಣ ಹಂಚಿ ಗೆಲ್ಲುವ ಶಕ್ತಿ ಹೊಂದಿದ್ದಾರೆ. ಜನರು ಹಣದ ಹಿಂದೆ ಹೋಗದಂತೆ ನೋಡಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
