ಬೆಂಗಳೂರು
ಕಳೆದ ಐದು ತಿಂಗಳಿನಿಂದ ವೇತನ ಬಿಡುಗಡೆಯಾಗದೇ ಬದುಕು ಸಾಗಿಸಲು ಕಷ್ಟಕರವಾಗಿದೆ.ಮನವಿ, ಹೋರಾಟಗಳು ಸಮ್ಮಿಶ್ರ ಸರ್ಕಾರದ ಕಿವಿಗೆ ಬೀಳುತ್ತಿಲ್ಲ ಎಂದು ನಗರದಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಳಲು ತೋಡಿಕೊಂಡರು.
ಪುರಭವನದ ಮುಂಭಾಗ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಂಗನವಾಡಿ ಕಾರ್ಯಕರ್ತರು-ಸಹಾಯಕಿಯರು ಐದು ತಿಂಗಳಿನಿಂದ ವೇತನವಿಲ್ಲದೇ ಸಂಕಷ್ಟದಲ್ಲಿದ್ದು ಕೂಡಲೇ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 204 ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳು, ಇವುಗಳಲ್ಲಿ 181 ಗ್ರಾಮಾಂತರ, 11 ನಗರ ಹಾಗೂ 12 ಬುಡಕಟ್ಟು ಯೋಜನೆಗಳಿವೆ. 61, 187 ಅಂಗನವಾಡಿ ಕೇಂದ್ರ, 3,331 ಮಿನಿ ಅಂಗನವಾಡಿ ಕೇಂದ್ರಗಳಿದ್ದು, 1.28 ಲಕ್ಷಕ್ಕೂ ಅಧಿಕ, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ಈ ಶ್ರಮಿಕರಿಗೆ ಐದು ತಿಂಗಳಿಂದ ವೇತನ ನೀಡಿಲ್ಲ ಎಂದು ಪ್ರತಿಭಟನೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಯೊಬ್ಬರು ಅಳಲು ತೋಡಿಕೊಂಡರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಪಾಲನೆ ಮಾತ್ರವಲ್ಲದೆ, ಸರ್ಕಾರದ ಹಲವು ಕೆಲಸ ಕಾರ್ಯಗಳನ್ನು ನಾವು ನಿರ್ವಹಿಸಬೇಕಾಗಿದೆ. ಜೊತೆಗೆ ಪದೇ ಪದೇ ವಿವಿಧ ಜಿಲ್ಲಾ- ತಾಲೂಕು ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ.ಆದರೆ, ಸೂಕ್ತ ಸಮಯಕ್ಕೆ ವೇತನ ದೊರೆಯದಿದ್ದರೆ, ನಾವು ಸಾಲಗಾರರಾಗುತ್ತವೆ ಎಂದು ದೊಡ್ಡಬಳ್ಳಾಪುರದ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ನೊಂದು ನುಡಿದರು.
ಪತಿ ನಿಧನದ ನಂತರ ಕುಟುಂಬ ನಿರ್ವಹಣೆಯ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರದಿಂದ ಬರುವ ಗೌರವ ಧನದ ಮೇಲೆ ಜೀವನ ಆಧಾರವಾಗಿದೆ. ಆದರೆ ಐದು ತಿಂಗಳಿನಿಂದ ವೇತನ ಇಲ್ಲದ ಕಾರಣ ತುಂಬಾ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ, 22 ಸಾವಿರ ಸ್ಥಳೀಯರಿಂದ ಸಾ ಪಡೆದಿದ್ದೇನೆ ಎಂದು ಅಂಗನವಾಡಿ ಸಹಾಯಕಿ ಜಯಶ್ರೀ ಪ್ರಸಾದ್ ಕಣ್ಣೀರು ಹಾಕಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಹಾಮಂಡಳಿ ಅಧ್ಯಕ್ಷ ಜಿ.ಆರ್.ಶಿವಶಂಕರ್, ವೇತನ ನೀಡುವ ಜೊತೆಗೆ,ರಾಜ್ಯದಲ್ಲಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರು ನಿರೀಕ್ಷೆಗೆ ಮೀರಿದಷ್ಟು ತೊಂದರೆ ಇದ್ದು, ಬೀದಿಪಾಲಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ನಿವೃತ್ತಿಯಾದ ಈ ಮಹಿಳೆಯರಿಗೆ ಹಾಗೂ ವೈದ್ಯಕೀಯ ಸೌಲಭ್ಯ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಮಾತೃ ಪೂರ್ಣ ಯೋಜನೆಯ ಬಗ್ಗೆ ಸರ್ಕಾರ ಸಮಗ್ರವಾಗಿ ಅಧ್ಯಯನ ಸಮೀಕ್ಷೆ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಫಲಾನುಭವಿಗಳ ದೃಷ್ಟಿಯಿಂದ ಹಾಲಿ ಚಾಲ್ತಿಯಲ್ಲಿದ್ದ ಪೌಷ್ಟಿಕ ಆಹಾರವನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಬೇಕು. ಅಥವಾ ಆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
