ಲಾಕ್‍ಡೌನ್‍ನಿಂದ ಈ ವರೆಗಿನ ವೇತನಕ್ಕೆ ಒತ್ತಾಯ

ದಾವಣಗೆರೆ

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಯುತ್ತಿರುವ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ವೇತನ ಮತ್ತು ಜೂನ್ ತಿಂಗಳಿನಿಂದ ಬಾಕಿ ಇರುವ ವೇತನ ಪಾವತಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ (ಎಐಯುಟಿಯುಸಿ ಸಂಯೋಜಿತ)ದ ನೇತೃತ್ವದಲ್ಲಿ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.

    ಇಲ್ಲಿನ ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಮಾಯಿಸಿದ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಕಾರ್ಮಿಕರು ತಮ್ಮ ಬೇಡಿಕೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಳೆದ 17-18 ವರ್ಷಗಳಿಂದಲೂ ರಾಜ್ಯದಲ್ಲಿ 8 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೇವಲ ಕನಿಷ್ಟ ಕೂಲಿ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಲಾಕ್‍ಡೌನ್ ಪ್ರಾರಂಭವಾದಗಿನಿಂದ ಹೊರಗುತ್ತಿಗೆ ಕಾರ್ಮಿಕರು ಕೆಲಸವಿಲ್ಲದೇ ವೇತನವೂ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಇವರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಆರೋಪಿಸಿದರು.

    ರಾಜ್ಯದ ಬಹುತೇಕ ಕಡೆ ಗುತ್ತಿಗೆದಾರರು ಕಾರ್ಮಿಕರಿಗೆ ಇಎಸ್‍ಐ ಮತ್ತು ಇಪಿಎಫ್ ಹಣ ಪಾವತಿ ಮಾಡಿರುವ ದಾಖಲಾತಿಗಳನ್ನು ಸಮರ್ಪಕವಾಗಿ ನೀಡಿಲ್ಲ್ಲ. ಆದರೂ ಗುತ್ತಿಗೆದಾರರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊರೊನಾಸಂಕಷ್ಟದ ಸಮಯದಲ್ಲಿಕಾರ್ಮಿಕರಿಗೆ ಸಹಾಯವಾಗಲೆಂದು ಪಿಎಫ್ ಮತ್ತುಇಎಸ್‍ಐ ಸಂಸ್ಥೆಗಳಿಂದ ಹಲವಾರು ವಿಶೇಷ ಸೌಲಭ್ಯಗಳನ್ನು ಘೋಷಿಸಿದ್ದರೂ ಕಾರ್ಮಿಕರ ಬಳಿ ಸೂಕ್ತ ದಾಖಲೆಗಳಿಲ್ಲದ ಕಾರಣ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

   ಈಗಾಗಲೇ ಬಿಸಿಯೂಟ ಕಾರ್ಮಿಕರಿಗೆ ಜೂನ್‍ನಿಂದ ಆಗಸ್ಟ್‍ವರೆಗೂ ವೇತನ ಮಂಜೂರು ಮಾಡಲಾಗಿದೆ. ಅದೇರೀತಿ ಹಾಸ್ಟೆಲ್ ಕಾರ್ಮಿಕರಿಗೂ ವೇತನ ನೀಡಿ, ಕೆಲಸ ನೀಡಬೇಕು. ಗುತ್ತಿಗೆದಾರರು ಇಎಸ್‍ಐ ಮತ್ತು ಇಪಿಎಫ್ ಪಾವತಿ ಮಾಡಿರುವ ದಾಖಲೆಗಳನ್ನು ಕಾರ್ಮಿಕರಿಗೆ ಒದಗಿಸಬೇಕು. ನೇರ ನೇಮಕಾತಿಯಿಂದ ಕೆಲಸ ಕಳೆದುಕೊಂಡಿರುವ ಹೆಚ್ಚುವರಿ ಹೊರಗುತ್ತಿಗೆ ಕಾರ್ಮಿಕರನ್ನು ಖಾಲಿ ಇರುವ, ಖಾಲಿ ಆಗುವ ಸ್ಥಳಗಳಿಗೆ ಆದ್ಯತೆ ಮೇರೆಗೆ ಮರು ನೇಮಕ ಮಾಡಬೇಕು. ಹೆಚ್ಚುವರಿ ಹೊರ ಗುತ್ತಿಗೆ ನೌಕರರಿಗೆ ಸರ್ಕಾರವು ಮಂಜೂರು ಮಾಡಿರುವ 6 ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

   ಪ್ರತಿಭಟನೆಯಲ್ಲಿ ಎಐಯುಟಿಯುಸಿ ಮುಖಂಡ ಪರಶುರಾಮ್, ಕಾರ್ಮಿಕರಾದ ಈಶ್ವರ್, ನಿಂಗಪ್ಪ, ಮಂಜುಳಮ್ಮ, ಯತೀಶ್, ಸರೋಜಮ್ಮ, ಯಶೋಧ, ರಂಗಮ್ಮ, ರವಿಚಂದ್ರ, ರಂಗಸ್ವಾಮಿ, ಈಶ್ವರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link