ಬೆಂಗಳೂರು
ಸುಲಿಗೆ,ಹಲ್ಲೆ, ಕಳವು,ಬೆದರಿಕೆ ಕೊಲೆಯತ್ನ ಕೃತ್ಯಗಳನ್ನು ನಡೆಸುತ್ತಾ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕುಖ್ಯಾತ ರೌಡಿ ಹರೀಶ್ ಅಲಿಯಾಸ್ ರಾಬ್ರಿ ಹರೀಶ್ ಕಾಲಿಗೆ ಗುಂಡು ಹೊಡೆದು ಪೀಣ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡೇಟು ಬಲಗಾಲಿಗೆ ತಗುಲಿ ಗಾಯಗೊಂಡಿರುವ ನಂದಿನಿ ಲೇಔಟ್‌ನ ವಿದ್ಯಾನಂದ ನಗರದ ರಾಬ್ರಿ ಹರೀಶ್ (೨೩) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಮಹಜರು ನಡೆಸುವ ವೇಳೆ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ಪೇದೆಗಳಾದ ಲಕ್ಷ್ಮಿನಾರಾಯಣ ಹಾಗೂ ರವಿಗೆ ರಾಬ್ರಿ ಹರೀಶ್ ಅವರ ಕೈಗಳಿಗೆ ಚಾಕುವಿನಿಂದ ಇರಿದಿದ್ದಾನೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಯಿತು ಎಂದು ಹೇಳಿದರು.ಕಳೆದ ಆ. ೩೦ ರಂದು ರಾತ್ರಿ ಪೀಣ್ಯದ ದಾಸರಹಳ್ಳಿ ಬಳಿ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ, ನಗದು ದೋಚಿ ಪರಾರಿಯಾಗಿದ್ದ ರಾಬ್ರಿ ಹರೀಶ್‌ಗಾಗಿ ಪೀಣ್ಯ ಪೊಲೀಸರು ತೀವ್ರ ಶೋಧ ನಡೆಸಿದ್ದರು.ಅಲ್ಲಿಂದ ತಲೆಮರೆಸಿಕೊಂಡಿದ್ದ ಆತ ಶುಕ್ರವಾರ ತಿರುಪತಿಯಲ್ಲಿ ಅಡಗಿರುವ ಮಾಹಿತಿಯಾಧರಿಸಿ ಪೀಣ್ಯ ಪೊಲೀಸ್ ಇನ್ಸ್‌ಪೆಕ್ಟರ್ ಮುದ್ದುರಾಜ್ ಮತ್ತವರ ಸಿಬ್ಬಂದಿ ಅಲ್ಲಿಗೆ ತೆರಳಿ ಆತನನ್ನು ಬಂಧಿಸಿ ಠಾಣೆಗೆ ಕರೆತಂದಿತ್ತು.
ಚಾಕುವಿನಿಂದ ಹಲ್ಲೆ
ರಾತ್ರಿ ವಿಚಾರಣೆಯ ನಂತರ ಕೃತ್ಯ ನಡೆಸಿದ ಸ್ಥಳದ ಮಹಜರು ಮಾಡಲು ರಾಬ್ರಿ ಹರೀಶ್‌ನನ್ನು ಕರೆದುಕೊಂಡು ವಾಪಸ್ ಬರುವಾಗ ಅಬ್ಬಿಗೆರೆಯ ಕೆರೆಯಂಗಳದ ಬಳಿ ಮೂತ್ರ ವಿಸರ್ಜನೆಯ ನೆಪ ಮಾಡಿದ್ದಾನೆ.ಆತನನ್ನು ಕೆಳಗಿಳಿಸಿ ಸಿಬ್ಬಂದಿಗಳಾದ ಲಕ್ಷ್ಮಿನಾರಾಯಣ ಹಾಗೂ ರವಿ ಹಿಂದೆ ಹೋಗಿದ್ದು, ಸ್ವಲ್ಪ ದೂರ ಹೋದ ನಂತರ ಅವರಿಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಮುದ್ದುರಾಜ್ ಅವರು ಎಚ್ಚರಿಕೆ ನೀಡಿದ್ದು ಅದನ್ನು ಲೆಕ್ಕಿಸದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಸ್ವಯಂರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಅದು ಬಲಗಾಲಿಗೆ ತಗಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ
ಗಾಯಗೊಂಡ ರಾಬ್ರಿ ಹರೀಶ್‌ನಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚಾಕು ಇರಿತದಿಂದ ಕೈಗೆ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಗಳಾದ ರವೀಶ್, ಲಕ್ಷ್ಮಿನಾರಾಯಣ್‌ಗೆ ಚಿಕಿತ್ಸೆ ಕೊಡಿಸಲಾಗಿದೆ.
ರಾಬ್ರಿಯಿಂದ ಕುಖ್ಯಾತಿ
ಕಳೆದ ಆರೇಳು ವರ್ಷಗಳಿಂದ ಕಳ್ಳತನ, ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಸವಾಲಾಗಿ ಪರಿಗಣಿಸಿದ್ದ ಹರೀಶ್, ರಾಬ್ರಿ ಹರೀಶ್ ಎಂಬ ಕುಖ್ಯಾತಿ ಪಡೆದಿದ್ದ. ನಂದಿನಿ ಲೇಔಟ್, ಪೀಣ್ಯ, ರಾಜಗೋಪಾಲ ನಗರ, ನಂದಿನಿ ಲೇಔಟ್ ೬ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತನ ವಿರುದ್ಧ ೧೦ ಪ್ರಕರಣಗಳು ದಾಖಲಾಗಿದ್ದವು.
ಆರೋಪಿಯ ಅಪರಾಧ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು.ಮೂಱ್ನಾಲ್ಕು ಬಾರಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದರೂ ಮತ್ತೆ ಹಳೇ ಚಾಳಿ ಮುಂದುವರೆಸಿದ್ದ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








