ಚಿತ್ರದುರ್ಗ:
ಡಯಾಬಿಟಿಸ್ ರೋಗಿಗಳಿಗೆ ಇದುವರೆವಿಗೂ ಸರ್ಕಾರದಿಂದ ಒಂದೇ ಒಂದು ಇನ್ಸುಲಿನ್ ಕೂಡ ಸಿಕ್ಕಿಲ್ಲ. ಒಂದು ವರ್ಷಕ್ಕೆ ಒಂದು ಡಯಾಬಿಟಿಸ್ ಮಗುವಿನ ಚಿಕಿತ್ಸೆಗೆ ಇಪ್ಪತ್ತು. ಸಾವಿರ ರೂ.ಗಳು ಬೇಕು. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಬೇಸಿಕ್ ಡೇಕೇರ್ ಸೆಂಟರ್ ಬೆಂಗಳೂರಿನ ಸಮತ್ವಾಮ್ ಮಧುಮೇಹ ಚಿಕಿತ್ಸಾ ಕೇಂದ್ರದ ಡಾ.ಎಸ್.ಎಸ್.ಶ್ರೀಕಂಠ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 32 ವರ್ಷಗಳಿಂದ 3500 ಡಯಾಬಿಟಿಸ್ ಮಕ್ಕಳ ಸೇವೆ ಮಾಡಲಾಗಿದೆ. ಈಗ ಆರುನೂರು ಮಕ್ಕಳ ಸೇವೆ ಮಾಡಲಾಗುತ್ತಿದೆ. ಏಪ್ರಿಲ್ 24 ರಿಂದ ಸಾಣೆಹಳ್ಳಿಯಲ್ಲಿ ಆರಂಭಗೊಂಡಿರುವ ಕ್ಯಾಂಪ್‍ನಲ್ಲಿ ಮಧುಮೇಹಿಗಳಿಗೆ ಚಿಕಿತ್ಸೆ ನೀಡಲಾಗುವುದು. ಒಮ್ಮೆ ಮಧುಮೇಹ ಆವರಿಸಿದರೆ ಜೀವನಪರ್ಯಂತ ಇನ್ಸುಲಿನ್ ತೆಗೆದುಕೊಳ್ಳಬೇಕು. ಹಾಗಾಗಿ ಸರ್ಕಾರ ಇತ್ತ ಗಮನ ಹರಿಸಿ ಇನ್ಸುಲಿನ್ ಒದಗಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಕೇಂದ್ರದಲ್ಲಿ ಜಾತಿ, ಮತ, ಧರ್ಮ ಯಾವುದೇ ಬೇಧ ಭಾವವಿಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಇದ್ದಾರೆ. ಕಾಯಿಲೆಗೆ ಬಡವ-ಶ್ರೀಮಂತ ಎನ್ನುವ ತಾರತಮ್ಯವಿಲ್ಲ. ಹಾಗಾಗಿ ಡಯಾಬಿಟಿಸ್‍ಗೆ ಒಮ್ಮೆ ತುತ್ತಾದರೆ ಕೊನೆಯವರೆಗೆ ಇನ್ಸುಲಿನ್ ತೆಗೆದುಕೊಳ್ಳುವುದೊಂದೆ ಮಾರ್ಗ. ಆರು ದಿನಗಳ ಕಾಲ ಸಾಣೆಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿರುವ ಕ್ಯಾಂಪ್‍ನ ಪ್ರಯೋಜನ ಪಡೆದುಕೊಳ್ಳಬಹುದೆಂದು ಡಯಾಬಿಟಿಸ್ ರೋಗಿಗಳನ್ನು ಕೋರಿದರು.
ಡಯಾಬಿಟಿಸ್ ರೋಗಿಗಳಿಗೆ ನಮ್ಮ ಕೇಂದ್ರದಿಂದ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಆಸ್ಟ್ರೇಲಿಯಾ, ಡೆನ್ಮಾರ್ಕ್‍ನಿಂದ ದಾನಿಗಳು ಮುಂದೆ ಬರುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೆರವಿಗೆ ಮುಂದೆ ಬರಬೇಕು ಎಂದು ಆಗ್ರಹಿಸಿದರು.
ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಯಾಬಿಟಿಸ್‍ಗೆ ತುತ್ತಾಗಿರುವ ಪುಟಾಣಿಗಳು ಮೂರ್ನಾಲ್ಕು ವರ್ಷಗಳಿಂದಲು ನಮಗೆ ಡಯಾಬಿಟಿಸ್ ಇದೆ.
ಜೀವನವೆ ಬೇಡ ಎನ್ನುವಷ್ಟು ಬೇಸರವಾಗಿತ್ತು. ಬೇಸಿಕ್ ಡೇಕೇರ್ ಸೆಂಟರ್‍ಗೆ ಬಂದ ಮೇಲೆ ಲವಲವಿಕೆಯಿಂದ ಇದ್ದೇವೆ. ನಿಶ್ಯಕ್ತಿ ಎಂಬುದೇ ದೂರವಾಗಿದೆ. ಆರೋಗ್ಯವಂತರಿಗಿಂತಲೂ ನಾವು ತುಂಬಾ ಖುಷಿಯಾಗಿದ್ದೇವೆ. ಇನ್ಸುಲಿನ್ ಜೊತೆಗೆ ದಿನವೂ ಧ್ಯಾನ, ವ್ಯಾಯಾಮ ಮಾಡಿಸುತ್ತಿರುವುದು ನಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಮಗಾದ ಅನುಭವವನ್ನು ಹಂಚಿಕೊಂಡರು.
ಸ್ಪೂರ್ತಿ, ಸಿದ್ದರಾಜು, ಮನೋಜ್, ಸಸೋಫಿಯ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.