ಪ್ಲಾಸ್ಟಿಕ್ ಮರು ಬಳಕೆ ಬಗ್ಗೆ ಗಂಭೀರ ಚಿಂತನೆ ನಡೆಯಲಿ

ದಾವಣಗೆರೆ:

      ಪ್ಲಾಸ್ಟಿಕ್ ನಿಷೇಧ ಸಾಧ್ಯವೇ ಇಲ್ಲ. ಹೀಗಾಗಿ ಪ್ಲಾಸ್ಟಿಕ್ ಮರು ಬಳಕೆ ಬಗ್ಗೆ ಗಂಭೀರ ಚಿಂತನೆ ನಡೆಯಬೇಕೆಂದು ಚಿತ್ರದುರ್ಗ ಎಸ್‍ಜೆಎಂ ಫಾರ್ಮಸಿ ಕಾಲೇಜು ಪ್ರಾಧ್ಯಾಪಕ ಡಾ.ಎಚ್.ಕೆ.ಎಸ್.ಸ್ವಾಮಿ ಪ್ರತಿಪಾದಿಸಿದರು.

      ನಗರದ ಸೀತಮ್ಮ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಹೊಳಲ್ಕೆರೆ ನಿಸರ್ಗ ಫೌಂಡೇಶನ್, ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಏರ್ಪಡಿಸಿದ್ದ ಪರಿಸರ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಮರು ಬಳಕೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಅದಕ್ಕೊಂದು ಪರಿಹಾರ ಕಂಡು ಹಿಡಿಆಗ ಮಾತ್ರ ಕಸ ಕಡಿಮೆಯಾಗುತ್ತದೆ ಎಂದರು.

      ಪ್ಲಾಸ್ಟಿಕ್ ಅನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಯಾವುದೇ ಕಾರಣಕ್ಕೂ ಬಳಸಿ ಬಿಸಾಡಬಾರದು. ಪ್ಲಾಸ್ಟಿಕ್ ಲೋಟದಲ್ಲಿ ಟೀ, ಕಾಫಿ ಕುಡಿಯಬಾರದು. ಪೇಪರ್ ಲೋಟಕ್ಕೆ ಬಳಸಿದ ಮೇಣ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಕಾರಣದಿಂದ ಪೇಪರ್ ಲೋಟ ಸಹ ಬಳಸಬಾರದು. ಎಲ್ಲೇ ಹೋಗುವಾಗ ಒಂದು ಸ್ಟೀಲ್ ಲೋಟ ಇಟ್ಟುಕೊಳ್ಳಿ. ಹಾಗೆಯೇ ಪ್ಲಾಸ್ಟಿಕ್ ತಟ್ಟೆಯಲ್ಲಿ ಊಟ ಮಾಡಬಾರದು. ಒಮ್ಮೆ ಉಪಯೋಗಿಸಿ ಬಿಸಾಕುವ ತಟ್ಟೆಯಲ್ಲೂ ತಿನ್ನಬಾರದು ಎಂದು ಕಿವಿಮಾತು ಹೇಳಿದರು.

      ಜಂಕ್‍ಫುಡ್‍ನಿಂದ ದೂರ ಇರಬೇಕು. ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸಿ. ಹೊರಗಡೆ ತಿನ್ನಲೇಬೇಕಿದ್ದರೆ ಹಣ್ಣು ಹಂಪಲು ತಿನ್ನಿ. ಆದರೆ ಒಳ್ಳೆಯ ಕಲರ್ ನೋಡಿ ಚೆನ್ನಾಗಿದೆ ಎಂದು ಭಾವಿಸಬೇಡಿ. ಕಲರ್ ಬರಲು ರಾಸಾಯನಿಕ ಬಳಸಿರುತ್ತಾರೆ. ಇದರ ಬಗ್ಗೆಯೂ ಜಾಗೃತರಾಗಿರಬೇಕೆಂದು ಹೇಳಿದರು.

      ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಗಳಿಂದ ದೂರ ಇದ್ದರೆ ಆರೋಗ್ಯವೂ ಉಳಿಯುತ್ತದೆ. ಪರಿಸರವೂ ಉಳಿಯುತ್ತದೆ ಎಂದ ಅವರು, ಅಭಿವೃದ್ಧಿ ಅಂದರೆ ಕಾಂಕ್ರಿಟ್ ರಸ್ತೆ ಅಲ್ಲ. ಕಾಂಕ್ರಿಟ್‍ನಿಂದ ನೀರು ಇಂಗುವುದು ಕಡಿಮೆಯಾಗುತ್ತದೆ. ಅಸ್ತಮಾ ಜಾಸ್ತಿಯಾಗುತ್ತದೆ. ಲಿಪ್‍ಸ್ಟಿಕ್, ಸೆಂಟ್‍ಗಳೂ ಆರೋಗ್ಯಕ್ಕೆ ಮಾರಕವಾಗಿರುವ ಕಾರಣ ಇವುಗಳ ಬಳಕೆಯಿಂದಲೂ ದೂರ ಉಳಿಯಬೇಕೆಂದು ಸಲಹೆ ನೀಡಿದರು.

        ಕಾರ್ಯಕ್ರಮದಲ್ಲಿ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಉಪ ಪ್ರಾಚಾರ್ಯ ಎ.ಆರ್. ಮಂಜುನಾಥ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎನ್.ರಾಜು, ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ನಿಸರ್ಗ ಫೌಂಡೇಶ್‍ನ ಅಧ್ಯಕ್ಷ ಟಿ.ಎಚ್. ವಸಂತ್ ಸ್ವಾಗತಿಸಿದರು. ಶಿಕ್ಷಕಿ ಫಸಿಹಾ ಸುಲ್ತಾನ್ ವಂದಿಸಿದರು. ಶಿಕ್ಷಕ ಕೆ.ಎಂ. ಕೊಟ್ರೇಶ್ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap