ನೌಕರರ ಬೇಡಿಕೆ ಈಡೇರಿಕೆಗೆ ಸೂಕ್ತ ಕ್ರಮ : ಪ್ರಭು ಚೌಹಾಣ್

ಬೆಂಗಳೂರು

    ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿಗೆ ಮುಂಬಡ್ತಿ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದರು.ನಗರದ ಕಬ್ವನ್ ಪಾರ್ಕಿನ ಕರ್ನಾಟಕ ಸಚಿವಾಲಯ ನೌಕರರ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಸಹಾಯಕರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ತಾಂತ್ರಿಕ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಸಿಬ್ಬಂದಿಯ ಯಾವುದೇ ಬೇಡಿಕೆ ಇರಲಿ. ಕ್ಷಣಮಾತ್ರದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಈಡೇರಿಸಲಾಗುವುದು ಎಂದರು

     ಇಲಾಖೆ ಸಿಬ್ಬಂದಿಯ ಯಾವುದೇ ಬೇಡಿಕೆ ಇರಲಿ ಅಥವಾ ಯಾವುದೇ ಸಮಸ್ಯೆ ಇರಲಿ. ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು ಎಂದು ನುಡಿದರು.

       ಇಲಾಖೆಯು ನನಗೆ ಕುಟುಂಬ, ಪರಿವಾರ ಇದ್ದ ಹಾಗೆ. ನಿಜವಾದ ಗೋವು ರಕ್ಷಕರು ಎಂದರೆ, ಪಶು ಪಾಲನ ಸಿಬ್ಬಂದಿ. ಅವರಿಗೆ ಯಾವುದೇ ತೊಂದರೆ ಆಗಬಾರದು.ಇದಕ್ಕಾಗಿ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತೇನೆ.ಈ ಬಗ್ಗೆ ಸಿಬ್ಬಂದಿಗೆ ಚಿಂತೆ ಬೇಡ.ಒಳ್ಳೆಯ ಕೆಲಸ ಮಾಡಿ, ಗ್ರಾಮೀಣ ಭಾಗದ ಜನರಿಗೆ ನೆರವಾಗಿ ಎಂದು ಸೂಚಿಸಿದರು.

     ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎನ್.ಷಡಕ್ಷರಿ ಮಾತನಾಡಿ, ಇಲಾಖೆ ಕಾರ್ಯದರ್ಶಿಯ ರೊಂದಿಗೆ ಚರ್ಚೆ ನಡೆಸಿ. ಅರ್ಹ ಮತ್ತು ಅನರ್ಹ ರಿಗೆ ಬಡ್ತಿ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.ಸಂಘದ ಅಧ್ಯಕ್ಷ ಎಸ್.ಎ.ಸಫೀರ್ ಮಾತನಾಡಿ, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಪಶುವೈದ್ಯಕೀಯ ಸಹಾಯಕರ ಹುದ್ದೆಯ ಪ್ರಥಮ ತಾಂತ್ರಿಕ ನೇರ ನೇಮಕಾತಿ ಹುದ್ದೆಯಾಗಿದ್ದು, ಈ ವೃಂದದ ಒಟ್ಟು ಬಲ 2144ಆಗಿದೆ.

    ಇದರಲ್ಲಿ 1246 ಹುದ್ದೆ ಭರ್ತಿಯಾಗಿದೆ. ಈಪೈಕಿ, ಇನ್ನು 898 ಹುದ್ದೆಗಳು ಖಾಲಿ ಇವೆ.ಹಾಗಾಗಿ, ಪ್ರಸ್ತುತ ವಾರ್ಷಿಕ ಸಾಲಿನಿಂದಲೇ ಖಾಲಿ ಹುದ್ದೆ ಭರ್ತಿ ಮಾಡಬೇಕೆಂದು ಅವರು ಸಚಿವರಿಗೆ ಮನವಿ ಸಲ್ಲಿಸಿದರು .ಪಶುವೈದ್ಯಕೀಯ ಸಹಾಯಕರಿಂದ ಹಿಡಿದು ಜಾನುವಾರು ಅಧಿಕಾರಿಗಳವರೆಗೂ ವಿವಿಧ ಹಂತದ ವೃಂದದ ನೌಕರರ ಮೇಲೆ, ಜಾನುವಾರು ಗಳಿಂದ ಆಗುವ ದಾಳಿ, ಅಪಾಯ ಹಾಗೂ ಕರ್ತವ್ಯ ನಿರ್ವಹಣೆಗೆ ರೈತರ ಮನೆ ಬಾಗಿಲಿಗೆ ತೆರಳುವ ಸಂದರ್ಭದಲ್ಲಿ ಸಂಭವಿಸುವ ಅಪಘಾತಗಳ ಚಿಕಿತ್ಸಾ ವೆಚ್ಚವನ್ನು ಇಲಾಖೆಯೇ ಭರಿಸಬೇಕು ಎಂದು ಒತ್ತಾಯಿಸಿದರು.

    ಅದೇ ರೀತಿ, ಕಲ್ಯಾಣ ನಿಧಿ ಸ್ಥಾಪಿಸುವುದು ಮತ್ತು ನಮ್ಮ ವೃಂದಗಳ ನೌಕರರ ಹಿತ ಕಾಯಲು ವೇತನದಲ್ಲಿ ಪಶುವೈದ್ಯರಿಗೆ ನೀಡುತ್ತಿರುವ ವಿಶೇಷ ಭತ್ಯೆ ಸೌಲಭ್ಯ, ಇತರ ನೌಕರರ ವರ್ಗದವರೆಗೂ ಶೇಕಡ 10 ರಷ್ಟು ವಿಶೇಷ ಭತ್ಯೆ ವಿಸ್ತರಿಸಬೇಕೆಂದು ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ, ಉಪನ್ಯಾಸಕಿ ಡಾ.ಲೀನಾ ಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ.ದಿನೇಶ್, ಖಜಾಂಚಿ ಪಿ.ಕೇಶವ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link