ಬೆಂಗಳೂರು
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲು ಅಮಿತ್ ಷಾ, ಯಡಿಯೂರಪ್ಪ ಹಾಗೂ ಸಂತೋಷ್ ಎಂಬ ಶಕುನಿ ಮಾಮಾಗಳು ಕಾರಣ ಎಂದು ಮಾಜಿ ಸಂಸದ, ಕಾಂಗ್ರೆಸ್‍ನ ಮಾಧ್ಯಮ ಮತ್ತು ಸಂಪರ್ಕ ವಿಭಾಗದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ದೂರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಕುನಿ ಮಾಮಾಗಳ ಜತೆ ಇನ್ನೂ ಹಲ ಮಂದಿ ಶಕುನಿ ಮಾಮಾಗಳಿದ್ದಾರೆ. ಇವರೆಲ್ಲ ಸೇರಿ ಸರ್ಕಾರ ಪತನವಾಗುವಂತೆ ಮಾಡಿ ಹೊಸ ಸರ್ಕಾರ ಟೇಕ್ ಆಫ್ ಆಗದಂತೆ ಮಾಡಿ ಜನರಿಗೆ ಹಿಂಸೆ ಕೊಡುತ್ತಿದ್ದಾರೆ ಎಂದರು.
ಹೀಗೆ ಸರ್ಕಾರ ಬೀಳಿಸಿದ ನಂತರ ಮಂತ್ರಿಗಳನ್ನು ಮಾಡಲು ಎಷ್ಟು ದಿನ ತೆಗೆದುಕೊಂಡಿರಿ? ಅದೆಷ್ಟು ಮಂದಿಯನ್ನು ಡಿಸಿಎಂ ಮಾಡಲು ಹೊರಟಿರಿ ಎಂದು ಪ್ರಶ್ನಿಸಿದ ಅವರು, ಜನರ ಹಿತ ರಕ್ಷಿಸುವ ಬದಲು ಅಧಿಕಾರ ಹಂಚಿಕೆಗೆ ಕಿತ್ತಾಟ ನಡೆಸಿರುವುದೆ ಕಳೆದೊಂದು ತಿಂಗಳ ಯಡಿಯೂರಪ್ಪ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಇವರು ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿದರು. ಆದರೆ ರಾಜೀನಾಮೆ ನೀಡಿದ ಶಾಸಕರಿಗೂ ತಮಗೂ ಸಂಬಂಧವಿಲ್ಲ ಎಂದರು. ಈಗ ಅವರಿಗಾಗಿ ಸಚಿವ ಸಂಪುಟದಲ್ಲಿ ಜಾಗ ಖಾಲಿ ಇಟ್ಟುಕೊಂಡಿದ್ದಾರೆ.ರಾಜೀನಾಮೆ ನೀಡಿದವರು ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹಗೊಂಡಿರುವುದು ಸರಿಯಾಗಿಯೇ ಇದೆ ಎಂದ ಅವರು, ಆ ಹೊತ್ತು ತಮ್ಮ ಅನುಕೂಲಕ್ಕಾಗಿ ಇವರ ರಾಜೀನಾಮೆ ಕೊಡಿಸಿದವರು, ಈಗ ಅವರು ಅತಂತ್ರ ಪರಿಸ್ಥಿತಿಯಲ್ಲಿರುವಂತೆ ಮಾಡಿದ್ದಾರೆ.
ಹದಿನೇಳು ಮಂದಿ ಶಾಸಕರನ್ನು ವ್ಯವಸ್ಥಿತವಾಗಿ ಮುಗಿಸಲು ಶಕುನಿ ಮಾಮಾಗಳು ಹೊರಟಿದ್ದಾರೆ. ಯಾವ್ಯಾವ ರೀತಿ ಅವರನ್ನು ಮುಗಿಸಲಾಗುತ್ತದೆ ಎಂಬುದು ಕಣ್ಣೆದುರಿಗೆ ಇದೆ ಎಂದರು.ಪ್ರವಾಹದಿಂದಾಗಿ ಜನ ತತ್ತರಿಸಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಿ ಕೊಡುವ ಬದಲು ತಮ್ಮಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ. ಅದನ್ನು ತಡೆಗಟ್ಟುವ ಕೆಲಸ ಮಾಡುವವರಿಲ್ಲ. ಆದರೆ ಇವರಿಗೆ ಕಿತ್ತಾಟವೇ ಎಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರ ಇದ್ದಾಗ ಬರಪರಿಹಾರಕ್ಕೆಂದು ಕೇಳಿದ ಹಣದಲ್ಲಿ 1029 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಇತ್ತೀಚಿನ ನೆರೆಯಿಂದಾದ ಅನಾಹುತಕ್ಕೆ ಸಂಬಂಧಿಸಿದಂತೆ ಒಂದು ರೂಪಾಯಿ ಪರಿಹಾರ ನೀಡಿಲ್ಲ ಎಂದು ಹೇಳಿದರು.
ನೆರೆಪೀಡಿತ ಪ್ರದೇಶಗಳ ಅಧ್ಯಯನದ ಸಲುವಾಗಿ ಸ್ಟಡಿ ಟೀಂ ಬಂದಿದೆ. ಆದರೆ ಅವರು ಏನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ವಾಸ್ತವದಲ್ಲಿ ಅವರು ಯಾವ ಸ್ಟಡಿಯನ್ನೂ ಮಾಡುತ್ತಿಲ್ಲ ಎಂದು ಉಗ್ರಪ್ಪ ಹೇಳಿದರು.
ಸಂಘ ಪರಿವಾರದ ನಾಯಕ ಸಂತೋಷ್ ಅವರು ನೆಹರೂ ಅವರ ಬಗ್ಗೆ ಮಾಡಿದ ಟೀಕೆಯ ಕುರಿತು ವ್ಯಂಗ್ಯವಾಡಿದ ಅವರು, ನೆಹರೂ ಅವರು ಈ ರಾಷ್ಟ್ರಕ್ಕೇನು ಮಾಡಿದರು ಎಂಬುದು ಜಗತ್ತಿಗೇ ಗೊತ್ತಿದೆ. ಸಂತೋಷ್ ಅವರಿಗೆ ಗೊತ್ತಿಲ್ಲ ಎಂದರು.ತಮಗೆ ಗೊತ್ತಿಲ್ಲ ಎಂಬ ಕಾರಣಕ್ಕಾಗಿ ನೆಹರೂ ಅವರ ಬಗ್ಗೆ ಇಷ್ಟ ಬಂದಂತೆ ಅವರು ಮಾತನಾಡಿರುವುದು ಸರಿಯಲ್ಲ. ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯುವ ಸಂಸ್ಕøತಿಯವರಿಗೆ ಇವೆಲ್ಲ ಅರ್ಥವಾಗುವುದಿಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








