ಆರ್ಥಿಕ ಸದೃಢತೆಗೆ ವೈಜ್ಞಾನಿಕ ಕೃಷಿ ಕೈಗೊಳ್ಳಿ

ದಾವಣಗೆರೆ

   ರೈತರು ಆರ್ಥಿಕವಾಗಿ ಸದೃಢರಾಗಲು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ತಿಳಿಸಿದರು.

    ತಾಲೂಕಿನ ಆನಗೋಡು ಗ್ರಾಮದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕೃಷಿ ಕಟಾವು ಯಂತ್ರಗಳ ನೂತನ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿಯನ್ನು ಲಾಭದಾಯಕವಾಗಿಸುವ ಜೊತೆಗೆ ರೈತರು ಆರ್ಥಿಕವಾಗಿ ಸದೃಢರಾಗಲು ಹೊಸ ಮಾದರಿಯ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

    ಶೇ.70ರಷ್ಟು ಜನ ಭಾರತದಲ್ಲಿ ಇಂದಿಗೂ ಸಹ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೂ ರೈತರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಅಲ್ಲದೇ, ಅವರ ಜೀವನಮಟ್ಟವೂ ಸುಧಾರಣೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಳೆಯ ಕೃಷಿ ಪದ್ಧತಿ ಅನುಸರಿಸಿದರೆ, ಮತ್ತಷ್ಟು ನಷ್ಟ ಅನುಭವಿಸುವ ಅಪಾಯವಿದೆ. ಹೀಗಾಗಿ ಹೊಸ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಬದಲಾವಣೆ ತಂದುಕೊಂಡು ಲಾಭದಾಯಕ ಕೃಷಿ ನಡೆಸಬೇಕೆಂದು ಸಲಹೆ ನೀಡಿದರು.

     ವೈಜ್ಞಾನಿಕ ಕೃಷಿ ಪದ್ಧತಿಯಿಂದಾಗಿ, ರೈತರು ಸ್ವಾವಲಂಬನೆ ಸಾಧಿಸುವುದರ ಜೊತೆಗೆ ದೇಶದ ಆರ್ಥಿಕ ಪ್ರಗತಿಗೂ ಸಹಾಯಕವಾಗುತ್ತದೆ. ಈ ದಿಸೆಯಲ್ಲಿ ಸರ್ಕಾರ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಸ್ಥೆಗಳೂ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

     ದೇಶದ ಪ್ರಗತಿಗೆ ಪೂರಕವಾಗಿರುವ ಇಂತಹ ಕೃಷಿ ಯಂತ್ರೋಪಕರಣ ಕೇಂದ್ರಗಳು ದಾವಣಗೆರೆ ಜಿಲ್ಲೆಗೆ ಮಾತ್ರ ಸೀಮಿತವಾಗದೆ, ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ಪ್ರಾರಂಭ ಆಗುವ ಮೂಲಕ ರೈತರ ಅವಶ್ಯಕತೆಗಳನ್ನು ಪೂರೈಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಿ.ಸಿ.ಟ್ರಸ್ಟ್ ಗಮನ ಹರಿಸಬೇಕೆಂದು ಸಲಹೆ ನೀಡಿದರು.

      ಕಾರ್ಯಕ್ರಮ ಉದ್ಘಾಟಿಸಿದ ಬಿ.ಸಿ.ಟ್ರಸ್ಟ್ ಸಿಇಒ ಡಾ.ಎಲ್.ಹೆಚ್.ಮಂಜುನಾಥ ಮಾತನಾಡಿ, ಇಂದಿನ ದಿನಮಾನಗಳಲ್ಲಿ ದೇಶದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದ್ದರೂ ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೆ ಕೂಲಿಯಾಳುಗಳು ಸಿಗುತ್ತಿಲ್ಲ. ಹೀಗಾಗಿ ಬಿತ್ತನೆ, ಕಟಾವು ಹೀಗೆ ಎಲ್ಲಾ ಕೆಲಸಗಳಿಗೂ ತೊಂದರೆಯಾಗಿದೆ. ಕೃಷಿ ಕಾರ್ಮಿಕರ ಕೂಲಿಯೂ ಹೆಚ್ಚಾಗಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಇದೆಲ್ಲದಕ್ಕೂ ಕೃಷಿಯ ಯಾಂತ್ರೀಕರಣವೇ ಪರಿಹಾರವಾಗಿದೆ ಎಂದರು.

     ಈ ವರೆಗೆ ತಮಿಳುನಾಡು ಭಾಗದಿಂದ ಕಟಾವು ಯಂತ್ರಗಳು ಬರುತ್ತಿದ್ದರಿಂದ ರೈತರಿಗೆ ಬಾಡಿಗೆ ಹೊರೆಯಾಗುತ್ತಿತ್ತು. ಇನ್ನು ಮುಂದೆ ಸ್ಥಳೀಯವಾಗಿಯೇ ಲಭ್ಯವಾಗುವುದರಿಂದ ಯಂತ್ರಗಳ ಬಾಡಿಗೆ ದರವೂ ಕಡಿಮೆಯಾಗಲಿದೆ. ರೈತರು ಈ ಕಟಾವು ಯಂತ್ರಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಕ್ಲಾಸ್ ಗ್ಲೋಬಲ್ ಸೇಲ್ಸ್ ಏಷ್ಯಾ ರೀಜಿನಲ್ ಪ್ರೆಸಿಡೆಂಟ್ ಡಾ.ಜೆನ್ಸ್ ಓಯಿಡಿಂಗ್, ಕ್ಲಾಸ್ ಅಗ್ರಿಕಲ್ಚರಲ್ ಮೆಷಿನರಿ ನಿರ್ವಾಹಕ ನಿರ್ದೇಶಕ ಮೃತ್ಯುಂಜಯ ಸಿಂಗ್, ತಾಲೂಕು ಪಂಚಾಯತ್ ಸದಸ್ಯ ರುದ್ರೇಶ ನಾಯ್ಕ, ಹಂಸ ಡಿಜಿಪ್ರೆಸ್‍ನ ಹಂಸರಾಜ್, ಆನಗೋಡು ಗ್ರಾಪಂ ಅಧ್ಯಕ್ಷ ಕೆ.ರವಿ, ರಾಜಶೇಖರಪ್ಪ, ಕೆ.ಎಸ್.ವಸಂತಕುಮಾರ ಉಪಸ್ಥಿತರಿದ್ದರು. ವಿಷ್ಣು ಜಗದೀಶ್ ಪ್ರಾರ್ಥಿಸಿದರು. ಎಂ.ಕೆ.ಅಬ್ರಹಾಂ ಸ್ವಾಗತಿಸಿದರು. ದುಗ್ಗೇಗೌಡ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link