ಬೆಂಗಳೂರು
ಮಾಜಿ ಸಚಿವ ಎಚ್. ವಿಶ್ವನಾಥ್ ದೊಡ್ಡ ನಾಯಕರು, ಸಚಿವ ಸ್ಥಾನ ಎಲ್ಲವನ್ನೂ ಅನುಭವಿಸಿದ್ದಾರೆ. ಸಚಿವ ಸ್ಥಾನ ಅವರಿಗೆ ದೊಡ್ಡದಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಮಾಜಿ ಸಚಿವ ವಿಶ್ವನಾಥ್ ಅವರ ಜತೆ ಮುಖ್ಯಮಂತ್ರಿಗಳನ್ನು ಅವರ ಡಾಲರ್ಸ್ ಕಾಲನಿಯ ನಿವಾಸದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೆ ಎಲ್ಲವೂ ಸಿಗಲಿದೆ. ಸಚಿವ ಸ್ಥಾನ ಅವರಿಗೆ ದೊಡ್ಡದ್ದೇನೂ ಅಲ್ಲ, ಹಿಂದೆಯೇ ಅದನ್ನು ನೋಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಹಳ್ಳಿ ಹಕ್ಕಿ ಸ್ವಚ್ಛಂದವಾಗಿ ಹಾರಾಡಲಿದೆ ಎಂದವರು ಹೇಳುವ ಮೂಲಕ ಮುಂದೆ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಸುಳಿವು ನೀಡಿದರು. ಇದಕ್ಕೂ ಮೊದಲು ಸೋಮಣ್ಣ ಸಚಿವ ಸ್ಥಾನ ಕೈ ತಪ್ಪಿದ ವಿಶ್ವನಾಥ್ ಅವರನ್ನು ಯಡಿಯೂರಪ್ಪನವರ ಮನೆಗೆ ಕರೆತಂದು ಯಡಿಯೂರಪ್ಪ ಅವರ ಜತೆ ಮಾತನಾಡಿಸಿ, ವಿಶ್ವನಾಥ್ ಅವರಿಗೆ ಇದ್ದ ಅಸಮಾಧಾನ -ಮುನಿಸನ್ನು ಶಮನ ಮಾಡಿ ಸಂಪುಟ ವಿಸ್ತರಣೆಯ ನಂತರ ಪಕ್ಷದಲ್ಲಿ ಯಾವುದೇ ಅತೃಪ್ತಿ-ಅಸಮಾಧಾನಗಳಿಗೆ ಅವಕಾಶವಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡುವಲ್ಲಿ ಮುಖ್ಯಮಂತ್ರಿಗಳ ಜತೆ ಕೈಜೋಡಿಸಿದ್ದಾರೆ.
ಸಚಿವ ಸೋಮಣ್ಣ ಅವರ ಈ ಸಂಧಾನ ಯಶಸ್ವಿಯಾಗಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಲೆ ನೋವು ಸ್ವಲ್ಪ ಕಡಿಮೆಯಾದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








