ಅನೈತಿಕ ಸಂಬಂಧ: ಪತಿಯನ್ನೆ ಕೊಂದ ಪತ್ನಿ ..!!

ಬೆಂಗಳೂರು

     ವಿವಾಹಿತ ಮಹಿಳೆ ಹಾಗೂ ಕ್ಯಾಬ್ ಚಾಲಕನ ನಡುವಿನ ಅನೈತಿಕ ಸಂಬಂಧಕ್ಕೆ ಅಂತ್ಯಹಾಡಲು ನಡೆದ ರಾಜಿ ಸಂಧಾನದಲ್ಲಿ ಪತಿಯನ್ನು ಕೊಲೆಗೈದ ಪತ್ನಿ ಹಾಗೂ ಪ್ರಿಯಕರನನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ

     ಕೃತ್ಯ ವೆಸಗಿದ ಆನೇಕಲ್‍ನ ಹಿಲಲಗಿಯ ಪ್ರತಿಭಾ(28) ಹಾಗೂ ಆಕೆಯ ಪ್ರಿಯಕರ ಉಬರ್ ಕ್ಯಾಬ್ ಚಾಲಕ ಬಾಲಕೃಷ್ಣ(30)ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್‍ಪಿ ಡಾ.ರಾಮ್‍ನಿವಾಸ್ ಸೆಪೆಟ್ ತಿಳಿಸಿದ್ದಾರೆ.

      ಆನೇಕಲ್‍ನ ಹೀಲಲಗಿಯ ವಿವಾಹಿತರ ನಡುವೆ ಶುರುವಾಗಿದ್ದ ಅನೈತಿಕ ಸಂಬಂಧವನ್ನು ಕೊನೆಗೊಳಿಸುವ ಸಲುವಾಗಿ ನ್ಯಾಯ-ಪಂಚಾಯ್ತಿ ನಡೆಸಲು ಎರಡೂ ಕುಟುಂಬಗಳು ಒಂದೆಡೆ ಸೇರಿದ್ದಾಗ ಪತ್ನಿಯರು ಜಡೆಹಿಡಿದು ಜಗಳಕ್ಕೆ ನಿಂತರೆ, ಚಾಕು ಚೂರಿಗಳಿಂದ ಜಗಳಕ್ಕಿಳಿದ ಪತಿಯರ ಕಾದಾಟದಲ್ಲಿ ಬಾಗೇಪಲ್ಲಿ ಮೂಲದ ಶ್ರೀನಿವಾಸ್ (30)ಕೊಲೆಯಾಗಿ ಹೋಗಿದ್ದರು.

ಘಟನೆಯ ವಿವರ

     ಬಾಗೇಪಲ್ಲಿ ತಾಲೂಕಿನ ಕುಂಡ್ಲಪಲ್ಲಿಯ ಶ್ರೀನಿವಾಸ್ ಕಳೆದ 2008ರ ಜುಲೈ20ರಂದು ಅದೇ ಗ್ರಾಮದ ಪ್ರತಿಭಾರನ್ನ ಪ್ರೀತಿಸಿ ವಿವಾಹವಾಗಿದ್ದು ದಂಪತಿಗೆ ಹತ್ತು ವರ್ಷದ ಹೆಣ್ಣು ಮತ್ತು ಐದು ವರ್ಷದ ಗಂಡು ಮಕ್ಕಳಿದ್ದರು ಶ್ರೀನಿವಾಸ್ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರೆ ಪತ್ನಿ ಪ್ರತಿಭಾ ಆನೇಕಲ್ ರಸ್ತೆಯ ಮರಸೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು.

     ದಂಪತಿಯು ಕುಟುಂಬ ಸಮೇತ ಆನೇಕಲ್ ಹೀಲಲಿಗೆಯಲ್ಲಿ ಲೀಸ್‍ಗೆ ಮನೆ ಮಾಡಿಕೊಂಡು ವಾಸವಾಗಿದ್ದರು.ಶ್ರೀನಿವಾಸ್ ವಾಸಿಸುತ್ತಿದ್ದ ಪಕ್ಕದ ಮನೆಯಲ್ಲಿ ಉಬರ್ ಕಾರು ನಾಗಿದ್ದ ಬಾಲಕೃಷ್ಣ ಹಾಗೂ ಆತನ ಪತ್ನಿ ಲಕ್ಷ್ಮಿದೇವಿ ಕೆಜಿಎಫ್‍ನಿಂದ ಬಂದು ವಾಸವಿದ್ದು ದಂಪತಿಗೆ ಒಂದು ಹೆಣ್ಣು ಮಗುವಿದೆ.

    ನಾಲ್ಕೈದು ತಿಂಗಳಿಂದ ಶ್ರೀನಿವಾಸನ ಪತ್ನಿ ಪ್ರತಿಭಾಳ ಜೊತೆ ಬಾಲಕೃಷ್ಣನಿಗೆ ಸ್ನೇಹ ಬೆಳೆದು ಅನೈತಿಕ ಸಂಬಂಧಕ್ಕೆ ತಿರುಗಿದೆ. ಆರಂಭದಲ್ಲೇ ಎರಡೂ ಮನೆಯವರಿಗೆ ಈ ವಿಷಯ ಗೊತ್ತಾಗಿ ನ್ಯಾಯ ಪಂಚಾಯ್ತಿ ನಡೆದಿತ್ತು.

ಹಳ್ಳಕ್ಕೆ ಬಿದ್ದಾಗ ಕೊಲೆ

   ಎರಡು ಕುಟುಂಬದ ಜಗಳದ ಬೂದಿ ಮುಚ್ಚಿದ ಕೆಂಡದಂತಿದ್ದರಿಂದ ಕಳೆದ ಮೇ.11ರಂದು ಸೂರ್ಯನಗರ ಪೊಲೀಸ್ ಠಾಣೆ ಎದುರಿನ ಬಸ್ ಡಿಪೋ ಬಳಿಯ ಖಾಲಿ ಜಾಗಕ್ಕೆ ಎರಡೂ ಕುಟುಂಬದವರು ಸೇರಿ ಪರಸ್ಪರ ಸಮಾದಾನವಾಗಿ ಮಾತುಕತೆಯಲ್ಲಿ ವಿಷಯ ಮುಗಿಸಿಕೊಳ್ಳೋಣ ಎಂದು ತೀರ್ಮಾನಿಸಿ ರಾತ್ರಿ 9.30ಕ್ಕೆ ನಿಗಧಿತ ಜಾಗಕ್ಕೆ ಬಂದಿದ್ದಾರೆ.

   ಇಬ್ಬರು ಪತಿಯರು ಜಾಗರೂಕತೆಗೆ ಚಾಕುಗಳನ್ನು ತಂದಿಟ್ಟುಕೊಂಡು ಮಾತುಬೆಳೆಸಿದ್ದಾರೆ. ಅಷ್ಟರಲ್ಲಿಯೇ ಹೆಂಗಸರ ಬಾಯಿ ಜೋರಾಗಿ ಜುಟ್ಟು ಹಿಡಿದು ಜಗ್ಗಾಡುವವರೆಗೆ ಪರಿಸ್ಥಿತಿಗೆ ಹೋಗಿದೆ.ಈ ವೇಳೆ ಇಬ್ಬರು ಪತಿಯರ ಚಾಕುಗಳ ಯುದ್ದ ಶುರುವಾಗಿದೆ. ನೂಕಾಟದಲ್ಲಿ ಶ್ರೀನಿವಾಸ ಜೆಸಿಬಿ ತೋಡಿದ್ದ ಹಳ್ಳಕ್ಕೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಮೇಲೆರಗಿದ ಬಾಲಕೃಷ್ಣ ಶ್ರೀನಿವಾಸನ ಕತ್ತು ಕೂಯ್ದು ಕೊಲೆ ಮಾಡಿದ್ದಾನೆ.

ಕೊಲೆ ಬೆದರಿಕೆ

   ಕೊಲೆಗೈದ ಬಾಲಕೃಷ್ಣ ಪ್ರತಿಭಾ ಜೊತೆ ಸೇರಿ ತನ್ನ ಪತ್ನಿ ಲಕ್ಷ್ಮಿದೇವಿಗೆ ಯಾರಿಗಾದರೂ ಈ ವಿಷಯ ತಿಳಿಸಿದರೆ ನಿನ್ನನ್ನೂ ಹೀಗೆ ಮುಗಿಸುವುದಾಗಿ ಬೆದರಿಸಿ ಒಂದು ದಿನದ ಮಟ್ಟಿಗೆ ಬಾಯಿ ಮುಚ್ಚಿಸಿದ್ದಾರೆ. ಅನಂತರ ಹೀಲಲಿಗೆ ಮುಖಾಂತರ ದೇಹವನ್ನು ಕಮ್ಮಸಂದ್ರದ ಕರೆಗೆ ಕಲ್ಲು ಕಟ್ಟಿ ಎಸೆದು ಏನೂ ಅರಿಯದಂತೆ ಎಂದಿನಂತೆ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ.

  ತನ್ನ ಕಣ್ಣೆದುರೆ ಅಮಾಯಕ ಶ್ರೀನಿವಾಸನ ಬಲಿಯನ್ನು ಸಹಿಸದ ಬಾಲಕೃಷ್ಣನ ಹೆಂಡತಿ ಲಕ್ಷ್ಮಿದೇವಿ ತನ್ನಣ್ಣನಿಗೆ ಇಡೀ ಘಟನೆಯ ವಿಷಯ ಮುಟ್ಟಿಸಿದ್ದಾಳೆ. ತಕ್ಷಣ ಸೂರ್ಯನಗರ ಪೊಲೀಸ್ ಠಾಣೆಗೆ ಬಂದು ಪಿಸಿಐ ವಿಕ್ಟರ್ ಸೈಮನ್‍ರ ಮುಂದೆ ಇಡೀ ಘಟನೆಯನ್ನು ವಿವರಿಸಿ ದೂರು ನೀಡಿದ್ದಾರೆ.

ಇಬ್ಬರು ಜೈಲಿಗೆ

   ಈ ವೇಳೆ ಗಾರ್ಮೆಂಟ್ಸ್‍ನಲ್ಲಿದ್ದ ಪ್ರತಿಭಾಳಿಗೆ ನಿಮ್ಮ ಪತಿ ಎಲ್ಲಿ ಎಂದು ಕೇಳಿದಾಗ ಎಲ್ಲೋ ಹೋಗಿದ್ದಾರೆ ಎನ್ನುವ ಉತ್ತರ ನೀಡಿದ್ದಾಳೆ,ಅಲ್ಲದೇ ತಾನಿದ್ದ ಮನೆಯನ್ನು ಖಾಲಿ ಮಾಡಿ ಓಡಿ ಹೋಗಲು ಮಾಲೀಕನ ಬಳಿ ಇದ್ದಕಿದ್ದಂತೆ ಮನೆಗೆ ನೀಡಿದ್ದ ಗುತ್ತಿಗೆ(ಲೀಸ್)ಹಣವನ್ನು ಕೊಡುವಂತೆ ಕೇಳಿದ್ದಾಳೆ. ಶ್ರೀನಿವಾಸ್ ಕಾಣದೆಯಿದ್ದರಿಂದ ಅನುಮಾನ ಬಂದ ಮನೆ ಮಾಲೀಕ ಶ್ರೀನಿವಾಸನ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಅವರು ಕೂಡ ಸೂರ್ಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.

   ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಬರ್ ಕ್ಯಾಬ್ ಚಲಾಯಿಸುತ್ತಿದ್ದ ಬಾಲಕೃಷ್ಣನನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ನಡೆದ ಜಾಗಕ್ಕೆ ಭೇಟಿ ನೀಡಿ ಶವ ಎಸೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಕೆರೆಯಿಂದ ಶವವನ್ನು ಹೊರತೆಗೆದು ಪ್ರತಿಭಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link