ಮುಷ್ಕರ ಬೆಂಬಲಿಸಿ ರೈತ-ಕಾರ್ಮಿಕರ ಜಾಥಾ

ದಾವಣಗೆರೆ :

     ದುಡಿಯುವ ಜನರ ರಕ್ಷಣೆಗಾಗಿ, ಕಾರ್ಮಿಕರ ಹಕ್ಕಗಳನ್ನು ಉಳಿಸಿ, ಬೆಳೆಸಲು, ಪರ್ಯಾಯ ಆರ್ಥಿಕ ನೀತಿ ಜಾರಿಗಾಗಿ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಬುಧವಾರ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ನಗರದಲ್ಲಿ ರೈತ-ಕಾರ್ಮಿಕರು ರ್ಯಾಲಿ ನಡೆಸಿದರು.

    ಮುಷ್ಕರದ ಹಿನ್ನೆಲೆಯಲ್ಲಿ ನಗರದ ಜಯದೇವ ವೃತ್ತದಲ್ಲಿ ಐಎನ್‍ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಐಬಿಇಎ, ಎಐಐಇಎ, ಬಿಎಸ್‍ಎನ್‍ಎಲ್‍ಇಯು, ಪೋಸ್ಟಲ್, ರೈತ ಸಂಘ, ಹೊರ ಗುತ್ತಿಗೆ ನೌಕರರ ಸಂಘ, ಕರ್ನಾಟಕ ಶ್ರಮಿಕ ಶಕ್ತಿ, ನೆರಳು ಬೀಡಿ ಕಾರ್ಮಿಕರ ಯೂನಿಯನ್, ಕಟ್ಟಡ ಕಲ್ಲು ಕ್ವಾರಿ ಕಾರ್ಮಿಕರ ಸಂಘ, ಶ್ರೀ ಆಂಜನೇಯ ಕಾಟನ್ ಮಿಲ್ ಕಾರ್ಮಿಕರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಮಾಯಿಸಿದ ರೈತ-ಕಾರ್ಮಿಕರು ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಜನ ವಿರೋಧಿ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಜಯದೇವ ವೃತ್ತದಿಂದ ಕಾರ್ಮಿಕ ಮುಖಂಡರುಗಳಾದ ಎಚ್.ಕೆ.ರಾಮಚಂದ್ರಪ್ಪ, ಕೆ.ಲಕ್ಷ್ಮೀನಾರಾಯಣ ಭಟ್, ಮಂಜುನಾಥ್ ಕೈದಾಳೆ ಸೇರಿದಂತೆ ಇತರೆ ನಾಯಕರ ನೇತೃತ್ವದಲ್ಲಿ ರ್ಯಾಲಿ ನಡೆಸಿದ ರೈತ-ಕಾರ್ಮಿಕರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಡಿಯಾರ ಕಂಬ ವೃತ್ತಕ್ಕೆ ತೆರಳಿ, ಅಲ್ಲಿ ಬಹಿರಂಗ ಸಭೆ ನಡೆಸಿದರು.

   ಬಹಿರಂಗ ಸಭೆಯಲ್ಲಿ ಮಾತನಾಡಿದ ಜೆಸಿಟಿಯು ಜಿಲ್ಲಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ದೇಶದ ಆರ್ಥಿಕ ಸ್ಥಿತಿಯು ದಿನದಿನಕ್ಕೂ ಪಾತಾಳಕ್ಕೆ ಕುಸಿಯುತ್ತಿದೆ. ಇಷ್ಟಾದರೂ ದೇಶದ ಆರ್ಥಿಕ ಚೇತರಿಕೆಗೆ ಗಮನಿಸದ ಪ್ರಧಾನಿ, ಕೇಂದ್ರ ಗೃಹ ಸಚಿವರು ನೀಡುತ್ತಿರುವ ಹೇಳಿಕೆಗಳಂತೂ ಈ ದೇಶದ ಜನರ ದೌರ್ಭಾಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಚ್ಛೇದಿನ್, ರಾಷ್ಟ್ರಪೇಮದ ಭ್ರಮೆಯನ್ನು ಹುಟ್ಟಿಸಿ, ಲೋಕಸಭೆ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಬಿಜೆಪಿ ನೀಡಿದ ಆಶ್ವಾಸನೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದರು.

   ದೇಶದ ಆರ್ಥಿಕ ಸ್ಥಿತಿ ದಿನೇ, ದಿನೇ ಹದಗೆಡುತ್ತಿದ್ದು, ಅದನ್ನು ಮರೆ ಮಾಚಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುತ್ವ ಸರ್ವಾಧಿಕಾರಿ ಶಾಹಿ, ಫ್ಯಾಸಿಸ್ಟ್ ನಿಲುವಿನತ್ತ ಸಾಗುತ್ತಿದೆ. ಸಂವಿಧಾನ ವಿರೋಧಿ, ದೇಶದ ಐಕ್ಯತೆ, ಸಮಗ್ರತೆಗೆ ಮಾರಕವಾದ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್‍ಗಳನ್ನು ಜಾರಿಗೊಳಿಸಲು ಮುಂದಾಗಿದೆ. ಇಂತಹ ಮಾರಕ ಕಾಯ್ದೆಗಳ ವಿರುದ್ಧ ದುಡಿಯುವ ಜನರು, ರೈತರು ಒಂದಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

   ಬಿಜೆಪಿ ನೇತೃತ್ವದ ಮೋದಿ ಸರ್ಕಾರ ರೈಲ್ವೆ ಸೇರಿದಂತೆ ಇತರೆ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಸಂಪತ್ತನ್ನು ಉಳ್ಳವರಿಗೆ ದಾನ ಮಾಡಲು ಹೊರಟಿದೆ. ರೈತ-ಕಾರ್ಮಿಕ ವಿರೋಧಿ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

     ಉದ್ಯೋಗ ಸೃಷ್ಟಿಗೆ ಗಮನ ಹರಿಸಬೇಕು. ಕಾರ್ಮಿಕರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕರ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. 21 ಸಾವಿರ ರೂ.ಗಳನ್ನು ಸಮಾನ ಕನಿಷ್ಟ ವೇತನವನ್ನಾಗಿ ನಿಗದಿ ಮಾಡಬೇಕು. ಗುತ್ತಿಗೆ ಪದ್ಧತಿಯನ್ನು ನಿಯಂತ್ರಿಸಿ, ನೇರ ನೇಮಕಾತಿಗೆ ಆದ್ಯತೆ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನಿಡಬೇಕು. ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯವನ್ನು ನಿಲ್ಲಿಸಬೇಕು. ರೈಲ್ವೆ ಖಾಸಗೀಕರಣ ವಿರೋಧಿಸಿ, ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್, ವಿಮೆ ಮುಂತಾದ ನಿರ್ಣಾಯಕ ಆಯಕಟ್ಟಿನ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು ಎಂದು ಆಗ್ರಹಿಸಿದರು.

    ಸಿಐಟಿಯು ಹಿರಿಯ ಮುಖಂಡ ಕೆ.ಎಲ್.ಭಟ್ ಮಾತನಾಡಿ, ಜನರ ತೆರಿಗೆ ಹಣದಿಂದ ಕಟ್ಟಿರುವ ಭಾರತೀಯ ಜೀವ ವಿಮಾ ನಿಗಮ, ರೈಲ್ವೆ ಸೇರಿದಂತೆ ಇತರೆ ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸುವ ಮೂಲಕ ಶ್ರೀಮಂತ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಮೋದಿ ಸರ್ಕಾರ ಮುಂದಾಗಿದೆ. ದೇಶದ ಆರ್ಥಿಕ ನಿಧಾನಗತಿಗೆ ಕಾರಣವಾದ ನೀತಿಗಳನ್ನು ತಕ್ಷಣವೇ ಕೇಂದ್ರ ಸರ್ಕಾರ ಕೈಬಿಡಬೇಕು. ಅದರಿಂದಾಗಿ ಉದ್ಯೋಗ ಕಳೆದುಕೊಳ್ಳುವ ಕಾರ್ಮಿಕರಿಗೆ ಕೆಲಸ, ವೇತನ, ಗಳಿಕೆಯ ರಕ್ಷಣೆಗಾಗಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಕಾಪೆರ್Çೀರೇಟ್ ಬಂಡವಾಳ ಪರ-ಕಾರ್ಮಿಕ ವಿರೋಧಿ ಕಾನೂನುಗಳ ಸಂಹಿತೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.

     ಎಐಯುಟಿಯುಸಿಯ ಮಂಜುನಾಥ್ ಕೈದಾಳೆ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ಉದ್ಯೋಗ ಭದ್ರತೆಯನ್ನು ಕಸಿದುಕೊಂಡರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಮೋದಿ ಚುನಾವಣೆಯಲ್ಲಿ ನೀಡಿದ್ದ ಎಲ್ಲಾ ಆಶ್ವಾಸನೆಗಳು ನೆಲ ಕಚ್ಚಿರುವ ಕಾರಣ ದೇಶದಲ್ಲಿ ಬೆಲೆ ಏರಿಕೆ, ಆರ್ಥಿಕ ಕುಸಿತ, ನಿರುದ್ಯೋಗ ಸೇರಿದಂತೆ ಇತರೆ ಸಮಸ್ಯೆಗಳು ತಾಂಡವ ನೃತ್ಯವಾಡುತ್ತಿವೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದಾಗಿ ಜನರನ್ನು ಭಾವೋದ್ವೇಗಕ್ಕೆ ಒಳ ಪಡಿಸಿ ಲಾಭ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರೀಕತ್ವ ನೊಂದಣಿ ಜಾರಿಗೆ ತಂದಿದೆ ಎಂದು ದೂರಿದರು.

      ರ್ಯಾಲಿಯಲ್ಲಿ ಬ್ಯಾಂಕ್ ನೌಕರರ ಸಂಘಟನೆ ಮುಖಂಡ ಕೆ.ರಾಘವೇಂದ್ರ ನಾಯರಿ, ಜೆಸಿಟಿಯು ಮುಖಂಡರಾದ ಆನಂದರಾಜ, ಐರಣಿ ಚಂದ್ರು, ಕೆ.ಎಚ್.ಆನಂದರಾಜ್, ಆವರಗೆರೆ ಚಂದ್ರು, ಆವರಗೆರೆ ಎಚ್.ಜಿ.ಉಮೇಶ್, ತಿಪ್ಪೇಸ್ವಾಮಿ, ಆವರಗೆರೆ ವಾಸು, ಕುಕ್ಕವಾಡ ಮಂಜುನಾಥ, ಕೆ.ಎಚ್.ರಂಗನಾಥ, ಎನ್.ಜೆ.ಬಸವರಾಜ, ರಂಗನಾಥ, ಸೌಮ್ಯ, ನಾಗಜ್ಯೋತಿ, ಈ.ಶ್ರೀನಿವಾಸ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್, ಬಲ್ಲೂರು ರವಿಕುಮಾರ್, ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಜಬಿನಾ ಖಾನಂ, ಎಂ.ಕರಿಬಸಪ್ಪ, ಕರ್ನಾಟಕ ಶ್ರಮಿಕ ಶಕ್ತಿಯ ಆದಿಲ್ ಖಾನ್, ಸತೀಶ್ ಅರವಿಂದ್ ಸೇರಿದಂತೆ ನೂರಾರು ಜನ ರೈತ, ಕಾರ್ಮಿಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link