ಮಧುಗಿರಿ :
ಸರ್ಕಾರ ಕೋವಿಡ್‍ನಿಂದ ಮೃತಪಟ್ಟ್ಟವರಿಗೆ ಹಣ ನೀಡುವುದಾಗಿ ಘೋಷಣೆ ಮಾಡಿದ್ದರೂ ಸಹ ಇನ್ನೂ ಕೊಟ್ಟಿಲ್ಲ, ಕೇವಲ ಘೋಷಣೆಯಾಗಿಯೇ ಉಳಿದು ಕೊಂಡಿದೆ ಎಂದು ಮಾಜಿ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಆರೋಪಿಸಿದ್ದಾರೆ.
ಅವರು ಪಟ್ಟಣದ ಕ್ಷೀರಭವನದ ಆವರಣದಲ್ಲಿ ತುಮುಲ್‍ನ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೋವಿಡ್ ಹಾಗೂ ಸ್ವಾಭಾವಿಕವಾಗಿ ಮೃತಪಟ್ಟ ಹಾಲು ಉತ್ಪಾದಕರ ಕುಟುಂಬ ವರ್ಗದವರಿಗೆ ಚೆಕ್‍ಗಳನ್ನು ವಿತರಿಸಿ ಮಾತನಾಡಿದರು. ತುಮುಲ್ 1 ಲಕ್ಷ ರೂ.ಗಳ ಚೆಕ್‍ನ್ನು ಕುಟುಂಬದವರಿಗೆ ವಿತರಿಸಲು ಮುಂದಾಗಿ ರೈತ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಮಧುಗಿರಿಯಲ್ಲಿ ಪ್ರತಿ ದಿನ ಸುಮಾರು 60 ರಿಂದ 70 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ ಆ ಹಾಲು ತುಮಕೂರಿಗೆ ಹೋಗುವಷ್ಟರಲ್ಲಿ ಒಡೆದು ಹೋಗುತ್ತಿತ್ತು. ಇದನ್ನು ಮನಗಂಡು ಉತ್ಪಾದಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ 2003-04 ರಲ್ಲಿ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಕೇಂದ್ರ ಒಕ್ಕೂಟದ ಮೂಲಕ 2 ಎಕರೆಯಷ್ಟು ಜಾಗವನ್ನು ಗುರುತಿಸಿ ಇಲ್ಲಿಯೇ ಹಾಲು ಶೀಥಲೀಕರಣ ಕೇಂದ್ರವನ್ನು ಮಂಜೂರು ಮಾಡಿಸಲಾಗಿತ್ತು ಎಂದರು.
ಈ ಹಿಂದೆ 15 ವಾರಗಳು ಕಳೆದರೂ ಸರಿಯಾಗಿ ಹಣವನ್ನು ಉತ್ಪಾದಕರಿಗೆ ನೀಡುತ್ತಿರಲಿಲ್ಲ. ಆಗ ರೈತರು ಪ್ರತಿಭಟನೆ, ಮುಷ್ಕರಗಳನ್ನು ನಡೆಸಿದ ಉದಾಹರಣೆಗಳುಂಟು. ಆದರೆ ಈ ಹೊತ್ತಿನ ಪರಿಸ್ಥಿತಿಯಲ್ಲಿ 100 ಕೋಟಿಗೂ ಅಧಿಕ ಹಣವನ್ನು ಒಕ್ಕೂಟವು ಹೊಂದುವುದರ ಮೂಲಕ ಜಮ್ಮು ಕಾಶ್ಮೀರ, ಬಾಂಬೆಗೂ ಹಾಲು ಕಳುಹಿಸಿ ಕೊಡಲಾಗುತ್ತಿದೆ. ತುಮಕೂರು ಹಾಲು ಬಹಳ ವಿಶೇಷತೆಯನ್ನು ಹೊಂದಿ ಆರೋಗ್ಯಯುತವಾಗಿದೆ. ನಿರ್ದೇಶಕರು ಬಹಳ ಪ್ರಾಮಾಣಿಕತೆಯಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಸಿದ್ದರಾಮಯ್ಯನವರ ಅವಧಿಯಲ್ಲಿ 13.50 ಸಾವಿರ ಕೋಟಿ ಅನುದಾನದಲ್ಲಿ ಎತ್ತಿನ ಹೊಳೆ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಇಂದು ಆ ಯೋಜನೆ ಶೀಘ್ರ ಗತಿಯಲ್ಲಿ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರಕ್ಕೆ ಬದ್ಧತೆಯೂ ಇಲ್ಲವಾಗಿದ್ದು, ಶೀಘ್ರ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಒತ್ತಾಯಿಸಲಾಗುವುದು ಎಂದರು.
ಕೊರಟಗೆರೆಯ 39 ಕೆರೆಗಳಿಗೆ ಮಧುಗಿರಿಯ 54 ಕೆರೆಗಳಿಗೆ ನೀರು ಹರಿಸುವುದರಿಂದ ಅಂರ್ತಜಲ ಮಟ್ಟ ಹೆಚ್ಚಿ, ಆರ್ಥಿಕವಾಗಿ ಚೇತರಿಕೆಯನ್ನು ಕಾಣಬಹುದಾಗಿದೆ. ಆದರೆ ನಮ್ಮ ಕೊರಟಗೆರೆಯ ಮೂಲಕ ದೊಡ್ಡ ಬಳ್ಳಾಪುರಕ್ಕೆ ಪೈಪ್‍ಲೈನ್ ಹೋಗಬೇಕಾಗಿರುವುದರಿಂದ ಬಹಳ ಎಚ್ಚರಿಕೆ ವಹಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ ಎಂದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಅಧಿವೇಶನ ನಡೆಯಲಿದ್ದು, ಪರಮೇಶ್ವರ ರವರ ಜಿಲ್ಲಾ ಕೂಗಿಗೆ ಹಾಗೂ ಎತ್ತಿನ ಹೊಳೆ ಯೋಜನೆಯನ್ನು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಕೈ ಜೋಡಿಸಿ ವಿಧಾನ ಸಭೆಯಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.
ಎಲೆರಾಂಪುರ ಕುಂಚಿಟಿಗ ಮಠದ ಡಾ. ಹನುಮಂತನಾಥ ಸ್ವಾಮೀಜಿ, ತುಮಲ್ ಅಧ್ಯಕ್ಷ ಮಹಾಲಿಂಗಯ್ಯ, ಕೊಂಡವಾಡಿ ಚಂದ್ರಶೇಖರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೋವಿಡ್‍ನಿಂದ ಮೃತಪಟ್ಟ 26 ಜನರ ಕುಟುಂಬಕ್ಕೆ ಒಂದು ಲಕ್ಷ ರೂ., ಸ್ವಾಭಾವಿಕವಾಗಿ ಮೃತಪಟ್ಟ 47 ಹಾಲು ಉತ್ಪಾದಕರ ಕುಟುಂಬದವರಿಗೆ 50 ಸಾವಿರ ರೂ. ಮೊತ್ತದ ಚೆಕ್ ಹಾಗೂ 20 ಹಾಲು ಉತ್ಪಾದಕರಿಗೆ ಮೇವು ಕತ್ತರಿಸುವ ಯಂತ್ರಗಳನ್ನು ಹಾಗೂ ಅಗ್ನಿ ಅನಾಹುತಕ್ಕೆ ಆಹುತಿಯಾದ ಹುಲ್ಲು ಬಣವೆಗಳ ಹತ್ತು ರೈತರಿಳಿಗೆ 10 ಸಾವಿರ ರೂ.ಗಳ ಪರಿಹಾರ ಧನದ ಚೆಕ್‍ಗಳನ್ನು ವಿತರಿಸಲಾಯಿತು.
ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ತುಮುಲ್ ನಿರ್ದೇಶಕರುಗಳಾದ ಹಳೆಮನೆ ಶಿವನಂಜಪ್ಪ, ಗುಬ್ಬಿ ಚಂದ್ರಶೇಖರ್, ರೇಣುಕಾಪ್ರಸಾದ್, ಚೆನ್ನಮಲ್ಲಪ್ಪ, ಈಶ್ವರಪ್ಪ, ಜಗದೀಶ್, ಮಹಾನಗರಪಾಲಿಕೆ ಸದಸ್ಯ ಮಂಜುನಾಥ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ಬರಾಯ ಭಟ್ಟ, ಡೈರಿ ವಿಸ್ತರಣಾಧಿಕಾರಿ ಶಂಕರ್ ನಾಗ್, ಗಿರೀಶ್, ಮುಖಂಡರಾದ ಸುಮುಖ್ ಕೊಂಡವಾಡಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
